News

ಪುನರ್ವಸು ಮಳೆ, ಕಲ್ಯಾಣ ಕರ್ನಾಟಕದ ಭೂಮಿಗೆ ಕಳೆ

16 July, 2020 1:07 PM IST By:

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬುಧವಾರ ಇಡೀ ದೀನ ಸುರಿದ ಧಾರಾಕಾರ (Heavy rain in kalyana Karnataka) ಮಳೆಗೆ ಕೆರೆ–ಕಟ್ಟೆಗಳು, ಹಳ್ಳ–ಕೊಳ್ಳಗಳು ಭರ್ತಿಯಾಗಿವೆ. ರಾಜ್ಯದ ಇತರೆಡೆಗಳಲ್ಲೂ ಉತ್ತಮ ಮಳೆಯಾಗಿದೆ.

ಕಳೆದ 24 ಗಂಟೆಗಳಿಂದ ಸತತವಾಗಿ  ಕಲಬುರಗಿ, ಬೀದರ, ಯಾದಗಿರಿ ಜಿಲ್ಲಾದ್ಯಂತ ಸುರಿದ ಮಳೆಯಿಂದಾಗಿ ನಗರದಜ ರಸ್ತೆಗಳು ನದಿಗಳಾಗಿ ಮಾರ್ಪಟ್ಟಂತಾಗಿತ್ತು. ಗ್ರಾಮೀಣ ಭಾಗದ ಹೊಲ ಗದ್ದೆಗಳಲ್ಲಿ ನೀರು ನಿಂತು ಅಪಾರ ಪ್ರಮಾಣದ ಬೆಳೆ ಹಾನಿಯೂಯಾಗಿದೆ. ಸತತ ಮಳೆಯಿಂದ ಜಲಾಶಯಗಳು ಭರ್ತಿಯಾಗುತ್ತಾ ಸಾಗಿದ್ದು,  ನಗರದ ತಗ್ಗು ಪ್ರದೇಶಗಳು ನೀರಿನಿಂದ ಜಲಾವೃತಗೊಂಡಿತ್ತು. ಕಳೆದೆರಡು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಹೊಲ ಗದ್ದೆಗಳಲ್ಲಿ ನೀರು ನಿಂತಿದ್ದರಿಂದ ಬೆಳೆಯೆಲ್ಲಾ ಹಾನಿಯಾಗಿದೆ.  ಉದ್ದು, ಹೆಸರು, ಎಳ್ಳು ಉತ್ತಮವಾಗಿ ಬೆಳೆದಿದ್ದು, ಈಗಿನ ಮಳೆ ಪ್ರಮಾಣದಿಂದಾಗಿ ಬೆಳೆ ಹಾನಿಯಾಗಿದೆ.

ಕಲಬುರಗಿ ತಾಲೂಕಿನ ರಾಜನಾಳ ಕೆರೆ, ಬಾಚನಾಳ–ಗೊಬ್ಬರವಾಡಿ ಹಳ್ಳ ತುಂಬಿ ಹರಿದ ಪರಿಣಾಮ ನೂರಾರು ಎಕರೆಯಲ್ಲಿ ಬೆಳೆದಿದ್ದ ಹೆಸರು, ತೊಗರಿ ಬೆಳೆ ಹಾನಿಯಾಗಿದೆ. ಸೊಂತ ಗ್ರಾಮದಲ್ಲಿ ಕೊಟ್ಟಿಗೆಯ ಗೋಡೆ ಕುಸಿದು 3 ಹಸು ಸಾವನ್ನಪ್ಪಿವೆ. ಚೋಳಿ ತಾಲ್ಲೂಕಿನ ಚಿಮ್ಮನಚೋಡ ಬಳಿಯ ನಾಗರಾಳ ಜಲಾಶಯ ಭರ್ತಿಯಾಗಿದೆ. ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿರುವ 4 ಕೆರೆಗಳು ಭರ್ತಿಯಾಗಿವೆ.

ಬೀದರ್‌ ನಗರ ಸೇರಿದಂತೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಯಾದಗಿರಿ ನಗರದಲ್ಲಿ ಮಳೆಯಿಂದ ಬಹುತೇಕ ವೃತ್ತಗಳು ನೀರಿನಿಂದ ಆವರಿಸಿಕೊಂಡಿದ್ದು, ಅಂಗಡಿಗಳಿಗೂ ನೀರು ನುಗ್ಗಿದೆ. ಯರಗೋಳದಲ್ಲಿ ಹೊಲಗಳಿಗೆ ನೀರು ನುಗ್ಗಿ, ಭತ್ತದ ಬೆಳೆಗೆ ಹಾನಿಯಾಗಿದೆ. ರಾಯಚೂರು ಮತ್ತು ಮಾನ್ವಿಯಲ್ಲಿ ಭಾರಿ ಮಳೆಯಾಗಿದ್ದರಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು.

ಕೊಪ್ಪಳ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ ಎರಡೂವರೆ ತಾಸು ಮಳೆ ಸುರಿದಿದೆ. ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಬಿಟ್ಟು ಬಿಡದೇ ಮಳೆ ಸುರಿಯಿತು.