ರಾಜ್ಯದಲ್ಲಿ ಮುಂದಿನ 5 ದಿನ ಮಳೆಯಾಗಲಿದ್ದು., ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಇದೇ 15ರಿಂದ 19ರವರೆಗೆ ಭಾರಿ ಮಳೆ (Heavy rain) ಯಾಗುವುದರಿಂದ ಯೆಲ್ಲೋ ಅಲರ್ಟ್ (Yellow alert) ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ ಇಳಿಮುಖವಾಗಿದ್ದು, ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಈ ಅವಧಿಯಲ್ಲಿ 6.5 ಸೆಂ.ಮೀ.ಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿದೆ ಎಂದು ಎಚ್ಚರಿಕೆ ನೀಡಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು ತುಂಬುವ ಹಂತಕ್ಕೆ ಬಂದಿದೆ. ವಿಜಯಪುರ ಜಿಲ್ಲೆಯಲ್ಲಿರುವ ಆಲಮಟ್ಟಿಗೆ (Alamatti dam)ಒಳಹರಿವಿಗಿಂತ ಹೊರಹರಿವು ಹೆಚ್ಚಳವಾಗಿದೆ. ‘ತುಂಗಭದ್ರಾ ಜಲಾಶಯ ತುಂಬುವ ಹಂತಕ್ಕೆ ಬಂದಿದ್ದು, ಯಾವುದೇ ಸಂದರ್ಭದಲ್ಲಿ ನದಿಗೆ ನೀರು ಹರಿಸಲಾಗುವುದು. ನದಿ ಪಾತ್ರದ ಜನ ಎಚ್ಚರಿಕೆಯಿಂದ ಇದ್ದು, ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ತುಂಗಭದ್ರಾ ಜಲಾಶಯ (Tungabhadra dam) ಆಡಳಿತ ಮಂಡಳಿ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಜಾನುವಾರುಗಳನ್ನು ಮೇಯಿಸಲು ನದಿ ಪಾತ್ರ ಹಾಗೂ ನದಿಯ ಆಳ ಪ್ರದೇಶದಲ್ಲಿ ಓಡಾಡಬಾರದು. ಈ ಕುರಿತು ಬಳ್ಳಾರಿ, ಕೊಪ್ಪಳ, ರಾಯಚೂರು, ಅವಿಭಜಿತ ಆಂಧ್ರ ಪ್ರದೇಶದ ಕರ್ನೂಲ್, ಮೆಹಬೂಬ್ ನಗರದ ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ.
ಕಲ್ಯಾಣ ಕರ್ನಾಟಕದಲ್ಲಿ ಸಾಧಾರಣ ಮಳೆ:
ಕಲಬುರಗಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಬಹುತೇಕ ಕಡೆ ಶುಕ್ರವಾರ ಸಾಧಾರಣ ಮಳೆಯಾಯಿತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು.ಶಿವಮೊಗ್ಗ ಜಿಲ್ಲೆಯ ಎಲ್ಲೆಡೆ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಕೆಲವೆಡೆ ಸಾಧಾರಣ ಮಳೆಯಾಗಿದೆ. ಜಲಾಶಯಗಳ ಒಳ ಹರಿವು ಕಡಿಮೆಯಾಗಿದೆ. ನದಿಗಳ ಮಟ್ಟ ತಗ್ಗಿದೆ. ದಾವಣಗೆರೆ ನಗರ ಹಾಗೂ ಜಿಲ್ಲೆಯ ಕೆಲವೆಡೆ ಸಾಧಾರಣವಾಗಿ ಮಳೆಯಾಗಿದೆ.ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ. ಹಾಸನ ದಲ್ಲಿಯೂ ಸಾಧಾರಣ ಮಳೆಯಾಗಿದೆ.