News

ಕರಾವಳಿಯಲ್ಲಿ ಸೆ.2 ರಿಂದ ಭಾರಿ ಮಳೆ ಸಾಧ್ಯತೆ -12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋ‍‍‍‍ಷಣೆ

31 August, 2020 8:55 AM IST By:

ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ  ಮಳೆ ಕರಾವಳಿಯಲ್ಲಿ ಮತ್ತೆ ಚುರುಕುಗೊಂಡಿದ್ದು  ರಾಜ್ಯದ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ. ಸೆ.2 ಮತ್ತು 3ರಂದು ಕರಾವಳಿ  ಭಾಗದ (Coastal Karnataka) 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ (Yellow alert) ಘೋಷಿಸಲಾಗಿದೆ.

ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ/ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಸೋಮವಾರ ಅಲ್ಲಲ್ಲಿ ಮಳೆಯಾಗಲಿದೆ. ಮಂಗಳವಾರ ವ್ಯಾಪಕವಾಗಿ ಮಳೆಯಾಗುವ (Heavy rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನೈಋುತ್ಯ ಮುಂಗಾರು ಕರಾವಳಿ ಭಾಗದಲ್ಲಿ ದುರ್ಬಲಗೊಂಡಿತ್ತು ಈಗ ನಿಧಾನವಾಗಿ ಚೇತರಿಕೆಯಾಗುತ್ತಿದ್ದರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಕರಾವಳಿಯಲ್ಲಿ ಭಾನುವಾರ ಬಿರುಸುಗೊಂಡ ಮಳೆ:

ವಾರದಿಂದ ಬಿಡುವು ನೀಡಿದ್ದ ಮಳೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಶನಿವಾರ ರಾತ್ರಿಯಿಂದ ಮತ್ತೆ ಶುರುವಾಗಿದೆ. ಉತ್ತರ ಕನ್ನಡದ ಕರಾವಳಿ ಭಾಗ ಹಾಗೂ ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಭಾನುವಾರ ಕೆಲ ಕಾಲ ಜೋರು ಮಳೆಯಾಯಿತು.

ಕಾರವಾರದಲ್ಲಿ ಶನಿವಾರ ರಾತ್ರಿ ಗಾಳಿ, ಗುಡುಗುಸಹಿತ ಜೋರಾಗಿ ಮಳೆಯಾಯಿತು. ಅಂಕೋಲಾ ತಾಲ್ಲೂಕಿನ ಕೇಣಿಯಲ್ಲಿ ಗಾಳಿಯ ರಭಸಕ್ಕೆ ಮನೆಯೊಂದರ ತಗಡಿನ ಶೀಟಿನ ಚಾವಣಿ ಹಾರಿ ಹೋಗಿದೆ. ಕೆಲವು ಮನೆಗಳ ಹೆಂಚು ಪುಡಿಯಾಗಿವೆ. ಶಿರಸಿ, ಸಿದ್ದಾಪುರ, ಯಲ್ಲಾ‍ಪುರದಲ್ಲೂ ಸಾಧಾರಣ ಮಳೆಯಾಗಿದೆ.ಶಿವಮೊಗ್ಗ, ಬಳ್ಳಾರಿ, ಮೈಸೂರು, ಕಲಬುರಗಿ ಜಿಲ್ಲೆಯ ಅಲ್ಲಲ್ಲಿ ಸಾಧಾರಣ ಚದುರಿದ ಮಳೆಯಾಗಿದೆ.