ರಾಜ್ಯದ ಹಲವು ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಎಂಟು ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.
ಮಳೆ ಅವಘಡದಿಂದ ರಾಜ್ಯದಲ್ಲಿ ಒಂದು ಮಗು ಸೇರಿದಂತೆ ನಾಲ್ವರು ಮೃತಪಟ್ಟಿರುವುದು ವರದಿ ಆಗಿದೆ.
ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಕರಾವಳಿಯ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ
ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.
ಅಲ್ಲದೇ ಕರಾವಳಿ ಜಿಲ್ಲೆಗಳಲ್ಲಿ ಶಾಲಾ- ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಕಲ್ಲತ್ತಿಗಿರಿ ಜಲಪಾತವನ್ನು ಪ್ರವಾಸಿಗರಿಗೆ ಮುಚ್ಚಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ದತ್ತಪಾದ ರಸ್ತೆ ಬಳಿಯೂ ಭೂಕುಸಿತ ಸಂಭವಿಸಿದೆ. ಶೃಂಗೇರಿಯಲ್ಲೂ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಭಾರೀ ಮಳೆಗೆ ಚಿಕ್ಕೋಡಿ ತಾಲೂಕಿನ ನರಸಿಂಹ ವಾಡಿಯ ಶ್ರೀ ಕ್ಷೇತ್ರ ದತ್ತ ದೇವಸ್ಥಾನ ಮುಳುಗಡೆಯಾಗಿದೆ.
ಸೋಮವಾರ, ಹಲವಾರು ಭಕ್ತರು ಮೊಣಕಾಲು ಆಳದ ನೀರಿನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದು ವರದಿ ಆಗಿದೆ.
ಇನ್ನು ಹಾಸನದಲ್ಲಿ ಸೋಮವಾರವೂ ಮಳೆಯ ಆರ್ಭಟ ಮುಂದುವರಿದಿದ್ದು, ಸೋಮವಾರಪೇಟೆ ಮತ್ತು ಮಾಗೇರಿಗೆ ಸಂಪರ್ಕ
ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದು, ಬೈಕ್ ಸವಾರ ಸೇತುವೆ ಮೇಲೆ ಸಿಲುಕಿಕೊಂಡಿದ್ದರು ಅವರನ್ನು ಸ್ಥಳೀಯರ ಸಹಾಯದಿಂದ ರಕ್ಷಿಸಲಾಗಿದೆ.
ಬೆಳಗಾವಿಯಲ್ಲೂ ಭಾರೀ ಮಳೆ
ಇನ್ನು ಬೆಳಗಾವಿಯಲ್ಲೂ ಭಾರೀ ಮಳೆಯಾಗುತ್ತಿದ್ದು, ಇಲ್ಲಿಯವರೆಗೆ ಬೆಳಗಾವಿಯಲ್ಲಿ ಕಳೆದ ಎರಡು ದಿನಗಳಿಂದ
ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯಲ್ಲಿ ಕನಿಷ್ಠ ಐದು ಸೇತುವೆಗಳು ಮುಳುಗಡೆಯಾಗಿವೆ.
ಇನ್ನು ಭಾರೀ ಮಳೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
(NWKRTC) ಚಾಲಕರು ಮತ್ತು ನಿರ್ವಾಹಕರಿಗೆ ಸೂಚನೆಗಳನ್ನು ನೀಡಿದೆ.
ರಸ್ತೆಗಳು ಮತ್ತು ಸೇತುವೆಗಳು ಮುಳುಗಿದ ಹಲವು ಪ್ರದೇಶಗಳಲ್ಲಿ ಜಿಲ್ಲಾಡಳಿತವು ಬಸ್‌ಗಳು ಮತ್ತು ಇತರ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ.
ಕೊಡಗಿನಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.
ಹಾರಂಗಿ ಜಲಾಶಯದ ಕ್ರೆಸ್ಟ್ ಗೇಟ್ ಗಳನ್ನು ತೆರೆದು 23 ಸಾವಿರ ಕ್ಯೂಸೆಕ್ ಗೂ ಹೆಚ್ಚು ನೀರನ್ನು ನದಿಗೆ ಬಿಡಲಾಗಿದ್ದು,
ತಗ್ಗು ಪ್ರದೇಶದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಿದ್ದಾರೆ.
ನೀರಿನ ಮಟ್ಟ ಹೆಚ್ಚಾದರೆ ಪರಿಹಾರ ಕೇಂದ್ರ ತೆರೆಯಲು ಜಿಲ್ಲಾಡಳಿತದ ವತಿಯಿಂದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ, ಮುಂದಿನ 48 ಗಂಟೆಗಳ ಕಾಲ, ಹವಾಮಾನ ಇಲಾಖೆಯು ಸಾಮಾನ್ಯವಾಗಿ ಮೋಡ ಕವಿದ ವಾತಾವರಣವನ್ನು ಮುನ್ಸೂಚಿಸುತ್ತದೆ.
ಲಘು ಮಳೆಯಾಗುವ ಸಾಧ್ಯತೆಯಿದೆ ಮತ್ತು ಮೇಲ್ಮೈ ಗಾಳಿಯು ಬಲವಾಗಿ ಮತ್ತು ಜೋರಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
Image Credit: Pexels