ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ನಿರಂತರ ವರ್ಷಧಾರೆಯಿಂದ ರಾಜ್ಯದಲ್ಲಿ ಮತ್ತೆ ಜಲಸಂಕಷ್ಟ ಎದುರಾಗಿದೆ. ರಾಜ್ಯದ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ.ಮಲೆನಾಡಿನಲ್ಲಿ ಸತತ ಮಳೆಯಿಂದಾಗಿ ಪ್ರವಾಹ (flood)ಹಾಗೂ ಭೂಕುಸಿತ ಮುಂದುವರೆದಿದ್ದರೆ, ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವ ಕಾರಣ ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಹಲವು ನದಿಗಳು
ಉಕ್ಕೇರಿ ಪ್ರವಾಹನ ಆತಂಕ ಸೃಷ್ಟಿಸಿದೆ. ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಹಲವು ಭಾಗಗಳಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ; ನೂರಾರು ಮನೆಗಳು ಜಖಂ ಆಗಿವೆ. ಸೇತುವೆಗಳು ಮುಳುಗಡೆಯಾಗಿವೆ. ಭೂ ಕುಸಿತಗಳಿಂದ ಸಂಚಾರ (road blocks) ದುಸ್ತರವಾಗಿದೆ. ಗ್ರಾಮಾಂತರ ಪ್ರದೇಶ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಮುಳುಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಸಂಭವಿಸಿದ ನೆರೆ ಪ್ರಕೋಪ ಮತ್ತೆ ಪುನರಾವರ್ತನೆಯಾಗಿದೆ.
ಭಾಗಮಂಡಲದಲ್ಲಿ ಮಳೆಯಿಂದಾಗಿ ಹೆಚ್ಚು ಹಾನಿ ಉಂಟಾಗಿದೆ. ಇಲ್ಲಿನ ಚೇರಂಗಾಲದಲ್ಲಿ ಗುರುವಾರ ರಾತ್ರಿ ಮತ್ತೊಂದು ಬೆಟ್ಟ ಕುಸಿದಿದೆ. ಬ್ರಹ್ಮಗಿರಿ ಪ್ರದೇಶದಲ್ಲಿ ಗುರುವಾರವೂ ಹಲವು ಕಡೆ ಬೆಟ್ಟ ಕುಸಿದಿದೆ. ಇಲ್ಲಿ ಬುಧವಾರ ರಾತ್ರಿ ಗುಡ್ಡ ಕುಸಿದು ನಾಪತ್ತೆಯಾಗಿದ್ದ ಪ್ರಧಾನ ಅರ್ಚಕ ನಾರಾಯಣ ರಾವ್ ಮತ್ತು ಕುಟುಂಬದ ಪತ್ತೆ ಕಾರ್ಯಕ್ಕೆ ಭಾರಿ ಮಳೆ, ಬಿರುಗಾಳಿ ಮತ್ತು ಮಣ್ಣು ಕುಸಿತ ಅಡ್ಡಿಯಾಗಿದೆ. ರಕ್ಷಣಾ ತಂಡವು ಗುಡ್ಡ ಕುಸಿತದ ಪ್ರದೇಶಕ್ಕೆ ತಲುಪುವುದಕ್ಕೇ ಸಾಧ್ಯವಾಗಿಲ್ಲ.
ತೀರ್ಥಹಳ್ಳಿ ತಾಲ್ಲೂಕು ಕೋಣಂದೂರು ಕುಕ್ಕೆ–ದತ್ತಾರಾಜಪುರ ರಸ್ತೆಯ ಎರಡು ಭಾಗಗಳಲ್ಲಿ ಭೂ ಕುಸಿತವಾಗಿದೆ. . ಮಡಿಕೇರಿ–ಸಿದ್ದಾಪುರ ರಾಜ್ಯ ಹೆದ್ದಾರಿ (land sliding) ಕುಸಿದಿದೆ. ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ಹಲವೆಡೆಯೂ ರಸ್ತೆ ಕುಸಿತ ಉಂಟಾಗಿದೆ.
ಒಂದೆಡೆ ತುಂಗಾನದಿ ಅಬ್ಬರಿಸುತ್ತಿದ್ದರೆ ಮತ್ತೊಂದೆಡೆ ಭದ್ರಾನದಿ ರುದ್ರನರ್ತನ ಮಾಡುತ್ತಿದೆ. ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆಯನ್ನು ಮುಳುಗಿಸಿಬಿಟ್ಟಿರುವ ಭದ್ರೆ, ಬಾಳೆಹೊನ್ನೂರಿನ ಸಂತೆ ಮೈದಾನ, ಅಕ್ಕಪಕ್ಕದ ತೋಟಗಳನ್ನೂ ಆವರಿಸಿಕೊಂಡಿದೆ. ಬಾಳೆಹೊನ್ನೂರು-ಕಳಸ ಸಂಪರ್ಕ ಕಡಿತಗೊಂಡಿದೆ.
ಕೆಆರ್‌ಎಸ್–ಎಚ್ಚರಿಕೆ
ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು ಶುಕ್ರವಾರ ಸಂಜೆಯ ಹೊತ್ತಿಗೆ ಜಲಾಶಯದಿಂದ 30 ಸಾವಿರ ಕ್ಯುಸೆಕ್ ನದಿಗೆ ಹರಿಸಲಾಗಿದೆ. ಈ ಕಾರಣ ಪ್ರವಾಹ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದ್ದು ನದಿ ತೀರದ ಜನರು ಎಚ್ಚರಿಕೆ ವಹಿಸಬೇಕು ಎಂದು ಕಾವೇರಿ ನೀರಾವರಿ ನಿಗಮ ತಿಳಿಸಿದೆ.
ಶುಕ್ರವಾರ ಒಳಹರಿವಿನ ಪ್ರಮಾಣ 54 ಸಾವಿರ ಕ್ಯುಸೆಕ್‌ಗೆ ಹೆಚ್ಚಾಗಿದ್ದು, ನೀರಿನ ಮಟ್ಟ 115.35 ಅಡಿಗೆ ತಲುಪಿದೆ. ಹಾರಂಗಿ ಜಲಾಶಯ ಭರ್ತಿಯಾಗಿರುವುದರಿಂದ ಕಾವೇರಿ ನದಿಯ ಹೊರ ಹರಿವು ಹೆಚ್ಚಳವಾಗಿದೆ. ಕಬಿನಿ ಜಲಾಶಯದಿಂದ 70 ಸಾವಿರ ಕ್ಯುಸೆಕ್‌ನಷ್ಟು ನೀರನ್ನು ಹೊರಬಿಡುತ್ತಿರುವುದರಿಂದ ಕಪಿಲಾ ನದಿ ಅಪಾಯದಂಚಿನಲ್ಲಿ ಹರಿಯುತ್ತಿದೆ. ಮೈಸೂರು– ಸುತ್ತೂರು ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ.
ತಲಾ 5 ಕೋಟಿ ಅನುದಾನ
ಪ್ರಾಕೃತಿಕ ವಿಕೋಪ ಪರಿಹಾರ ಕಾಮಗಾರಿಗಳಿಗೆ ರಾಜ್ಯದ 11 ಜಿಲ್ಲೆಗಳಿಗೆ ತಲಾ 5 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾ ಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಶುಕ್ರವಾರ ಇಲ್ಲಿ ತಿಳಿಸಿದರು.