News

ರಾಜ್ಯದ ಹಲವೆಡೆ ವರುಣನ ಅಬ್ಬರ-ಇನ್ನೂ ಐದು ಭಾರೀ ಮಳೆ ಸಾಧ್ಯತೆ

17 July, 2020 10:21 AM IST By:

ರಾಜ್ಯದ ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ಗುರುವಾರವೂ ಉತ್ತಮವಾಗಿ ಮಳೆ ಸುರಿದಿದ್ದು, ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ ಯಾದಗಿರಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ (Heavy rain) ಬಹುತೇಕ ನದಿಗಳು ಮೈದುಂಬಿಕೊಂಡಿವೆ. ಕಳೆದೆರಡು ದಿನಗಳಿಂದ ಅವ್ಯಾಹತವಾಗಿ  ಸುರಿಯುತ್ತಿರುವ ಮಳೆಗೆ ಕಲಬುರಗಿ ಜಿಲ್ಲೆಯ ನದಿಗಳಲ್ಲಿ ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, 500 ಹೆಕ್ಕೆರಕ್ಕಿಂತ ಹೆಚ್ಚು ಬೆಳೆಗಳು ಹಾನಿಯವಾಗಿವೆ.

 ಭೀಮಾ, (Bhima) ಕಾಗಿಣಾ (Kagina), ಕಮಲಾವತಿ ನದಿಗಳು ಮೈದುಂಬಿಕೊಂಡಿದ್ದು, ಹಳ್ಳ–ನಾಲಾಗಳು ತುಂಬಿ ಹರಿಯುತ್ತಿವೆ. ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆ ಗೊಂಡ ಮಳೆ 24 ಗಂಟೆಗಳ ಅವಧಿಯಲ್ಲಿ ಕಲಬುರಗಿ ಜಿಲ್ಲೆಯ ಪಟ್ಟಣ ಗ್ರಾಮದಲ್ಲಿ 13.2 ಸೆಂಟಿ ಮೀಟರ್‌, ಕಲಬುರಗಿ ನಗರದಲ್ಲಿ 11 ಸೆಂ.ಮೀ., ಯಾದಗಿರಿ ಯಲ್ಲಿ 12.9 ಸೆಂ.ಮೀ. ದಾಖಲಾಗಿದೆ.

ಕಮಲಾಪುರ ತಾಲ್ಲೂಕಿನ ಗಂಡೋರಿ ನಾಲಾ (Gandori nala) ಭರ್ತಿಯಾಗುವ ಹಂತ ತಲುಪಿದೆ. ನಾಗರಾಳ ಜಲಾಶಯದಿಂದ ಭಾರಿ ಪ್ರಮಾಣದ ನೀರು ಬಿಟ್ಟಿದ್ದರಿಂದ ಚಿಮ್ಮನಚೋಡ ಗ್ರಾಮದ ಸಂಗಮೇಶ್ವರ ದೇವಾಲಯ ಜಲಾವೃತವಾಗಿದೆ.

Read More: ಜಗತ್ತಿನಾದ್ಯಂತ ವ್ಯಾಪಕ ಮಳೆ: ಜನ ತತ್ತರ

ಬೀದರ್‌ ಜಿಲ್ಲೆಯ ಔರಾದ್ ತಾಲ್ಲೂಕಿನ ನಾಗನಪಲ್ಲಿ ಗ್ರಾಮಕ್ಕೆ ಹೋಗುವ ಸೇತುವೆ ಮೇಲೆ ನೀರು ಹರಿದಿದ್ದರಿಂದ ಕೆಲಹೊತ್ತು ಸಂಚಾರ ಸ್ಥಗಿತವಾಗಿತ್ತು.

 ಬೆಳಗಾವಿ,ಉತ್ತರ ಕನ್ನಡ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕೊಟಬಾಗಿ ಗ್ರಾಮದಲ್ಲಿ ಕೂಲಿಕಾರ್ಮಿಕರ ಎರಡು
ಮನೆಗಳು ನೆಲಸಮವಾಗಿವೆ.

ಕೊಡಗಲ್ಲಿ ಮಳೆ ಅಬ್ಬರ: ಕೊಡಗು ಜಿಲ್ಲೆಯ ವಿವಿಧೆಡೆ ಗುರುವಾರ ಧಾರಾಕಾರ ಮಳೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 39.33 ಮಿ.ಮೀ. ಮಳೆ ಬಿದ್ದಿದೆ. ಮೈಸೂರು ನಗರದಲ್ಲಿ ಜೋರು ಮಳೆಯಾದರೆ, ಮಂಡ್ಯ ಜಿಲ್ಲೆಯಲ್ಲಿ ಇಡೀದಿನ ಜಡಿ ಮಳೆ ಸುರಿಯಿತು.

ಮಲಪ್ರಭಾ ಒಳ ಹರಿವು ಹೆಚ್ಚಳ: ಬೆಳಗಾವಿ ನಗರ ಸೇರಿ ಜಿಲ್ಲಾದ್ಯಂತ ಮಳೆ ಮುಂದುವರಿದಿದ್ದು, ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಎರಡು ಮನೆಗಳು ಕುಸಿದಿದೆ. ಮಲಪ್ರಭಾ ನದಿ ಒಳಹರಿವು 1,795 ಕ್ಯೂಸೆಕ್​ಗೆ ಏರಿಕೆಯಾಗಿದೆ. ಘಟಪ್ರಭಾ ನದಿಯಲ್ಲಿ 4,204 ಕ್ಯೂಸೆಕ್ ಒಳಹರಿವು ಇದೆ.

Read More: ಪುನರ್ವಸು ಮಳೆ, ಕಲ್ಯಾಣ ಕರ್ನಾಟಕದ ಭೂಮಿಗೆ ಕಳೆ