ಕಳೆದೆರಡು ದಿನಗಳ ಹಿಂದೆ ಸುರಿದ ಅಕಾಲಿಕೆ ಮಳೆಯು ರೈತರನ್ನು ಸಂಕಷ್ಟದಲ್ಲಿಟ್ಟಿತು.ಮಳೆಯೊಂದಿಗೆ ಆಲಿಕಲ್ಲು ಮಳೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಯಿತು. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು ರೈತರ ಪರಿಸ್ಥಿತಿ. ವಿಶೇಷವಾಗಿ ಕೊಡಗು ಜಿಲ್ಲೆಯಲ್ಲಿ ಅಪಾರ ಬೆಳೆ ಹಾನಿಯಾಗಿದೆ.
ಕೊಡಗು ಜಿಲ್ಲೆಯ ಶನಿವಾರಸಂತೆ ವ್ಯಾಪ್ತಿಯಲ್ಲಿ ಶುಕ್ರವಾರ ಸುರಿದ ಆಲಿಕಲ್ಲು ಸಹಿತ ಮಳೆಯಿಂದ ಅಪಾರ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಬೆಳೆಗಳು ನೆಲಕಚ್ಚಿವೆ. ಕೃಷಿ, ತೋಟಗಾರಿಕೆ ಹಾಗೂ ಕಾಫಿ ಮಂಡಳಿಯ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿ, ಸಮೀಕ್ಷೆ ನಡೆಸಿದರು.
ಅಂಕನಹಳ್ಳಿ, ಗಂಗಾವರ, ಸೀಗೆ ಮರೂರು, ಮೆಣಸ, ಬೆಟ್ಟದಳ್ಳಿ, ಮನೆ ಹಳ್ಳಿ, ನಾಗವಾರ, ಮೈಲಾಪುರ, ಬಡುಬ ನಹಳ್ಳಿ, ಅಮ್ಮಳ್ಳಿ, ನಿಡ್ತ, ದೊಡ್ಡಳ್ಳಿ, ಮುಳ್ಳೂರು, ಸಿಡಿಗಳಲೆ, ಕೈಸರವಳ್ಳಿ ಗ್ರಾಮಗಳಲ್ಲಿ 1,450 ಎಕರೆ ಕಾಫಿ, 400 ಎಕರೆ ಕಾಳುಮೆಣಸು ಹಾಗೂ 198 ಎಕರೆಯಲ್ಲಿ ಬೆಳೆದ ಅಡಿಕೆ ನಷ್ಟ ವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ಹೋಬಳಿಯ ಗೊಲ್ಲಪಲ್ಲಿ ಗ್ರಾಮದಲ್ಲಿ ಆಲಿಕಲ್ಲು ಸಹಿತ ಅಕಾಲಿಕ ಮಳೆಗೆ ರೈತ ವೆಂಕಟರೆಡ್ಡಿ ಬೆಳೆದ ಸುಮಾರು 25 ಲಕ್ಷ ಮೌಲ್ಯದ ದ್ರಾಕ್ಷಿ ಬೆಳೆ ನೆಲಕಚ್ಚಿದೆ. ಮಳೆಗೆ ದ್ರಾಕ್ಷಿ ಗೊಂಚಲುಗಳು ನೆಲಕ್ಕೆ ಬಿದ್ದಿವೆ.
ಅಕಾಲಿಕ ಮಳೆ: ಮಾವು, ಹುಣಸೆ ಬೆಳೆಗೆ ಹಾನಿ
ದಾಬಸ್ ಪೇಟೆ, ಸೋಂಪುರ ಹೋಬಳಿಯುದ್ದಕ್ಕೂ ಮೂರು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಮಾವು, ಹುಣಸೆ, ಶೀಗೆ, ಫಸಲುಗಳು ಹಾಳಾಗಿದೆ.ಮಳೆ ಹಾಗೂ ಆಲಿಕಲ್ಲಿನಿಂದ ಮಾವಿನ ಹೂ ಮತ್ತು ಪೀಚು, ಹುಣಸೆ ಹಣ್ಣುಗಳು ನೆಲಕ್ಕುರುಳಿವೆ. ಇದರಿಂದ ರೈತರ ಆದಾಯಕ್ಕೆ ಖೋತಾ ಆಗಿದೆ. ಹುಣಸೆ, ಮಾವು ಶೀಗೆಕಾಯಿ ಬೆಳೆಗಳು ಹಾಳಾಗಿವೆ.