ರಾಜ್ಯದಲ್ಲಿ ಕಳೆದ ಹದಿನೈದು ದಿನಗಳಿಂದ ಮುಂಗಾರು ಚುರುಕಗೊಂಡಿದ್ದು, ಮಲೆನಾಡು ಪ್ರದೇಶದಲ್ಲಿ ಮಳೆ ಅಬ್ಬರ ಇನ್ನೂ ಮುಂದುವರಿದಿದೆ. ಆದರೆ ಭಾನುವಾರದ ಮಳೆಯಬ್ಬರಕ್ಕೆ ಹೋಲಿಸಿದರು ಕರಾವಳಿ ಪ್ರದೇಶದಲ್ಲಿ ಮಳೆಯಬ್ಬರ ತಗ್ಗಿದೆ. ಸ್ವಲ್ಪ ಬಿಡುವು ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ತಾಲ್ಲೂಕುಗಳಲ್ಲಿ ಸೋಮವಾರ ಮಳೆಯ ಅಬ್ಬರ ಮುಂದುವರಿದಿತ್ತು. ಶಿರಸಿಯಲ್ಲಿ ಧಾರಾಕಾರ ಸುರಿದರೆ, ಕರಾವಳಿಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿತ್ತು. ಹೊನ್ನಾವರ ಮತ್ತು ಭಟ್ಕಳದಲ್ಲಿ ಆಗಾಗ ಮಳೆಸಿಂಚನವಾಯಿತು. ಬೆಳಗಾವಿ, ಧಾರವಾಡ, ಕೊಡಗು ಜಿಲ್ಲೆಗಳಲ್ಲಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಮೂಡಿಗೆರೆ ಭಾಗದಲ್ಲಿ ಬಿರುಸಿನ ಮಳೆಯಾಗಿದೆ.. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ. ಹಾರಂಗಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ಅಬ್ಬರಿಸಿದ್ದ ಮಳೆ ಸ್ವಲ್ಪ ಬಿಡುವು ನೀಡಿದೆ. ಸಮುದ್ರ ತೀರದಲ್ಲಿ ಅಲೆ
ಗಳ ಅಬ್ಬರ ಮುಂದುವರಿದಿದೆ. ಈ ಹಿಂದೆ ಸುರಿದ ಸತತ ಮಳೆಯ ಪರಿಣಾಮ ಅಲ್ಲಲ್ಲಿ ಸಣ್ಣಪುಟ್ಟ ಗುಡ್ಡ ಕುಸಿತಗಳು ಸಂಭವಿಸಿವೆ. ಕೊಪ್ಪ ತಾಲ್ಲೂಕಿನ ಹಳ್ಳ –ಕೊಳ್ಳಗಳಲ್ಲಿನ ನೀರಿನ ಹರಿವಿನ ಮಟ್ಟ ಹೆಚ್ಚಾಗಿದೆ. ಮೂಡಿಗೆರೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ.