News

ರಾಜ್ಯದಲ್ಲಿ ಗುಡಗು ಸಿಡಿಲು ಸಹಿತ ಭಾರಿ ಮಳೆ ಸಾಧ್ಯತೆ: ಯೆಲ್ಲೊ ಅಲರ್ಟ್

30 September, 2020 8:47 AM IST By:
ಸಾಂದರ್ಭಿಕ ಚಿತ್ರ

ಕರ್ನಾಟಕ ಕರಾವಳಿ ಹಾಗೂ ಒಳನಾಡಿನಲ್ಲಿ ಸೆ. 30ರಂದು ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಭಾಗದ ತುಮಕೂರು, ರಾಮನಗರ, ಮೈಸೂರು, ಕೋಲಾರ, ಹಾಸನ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್’ ಮುಂದುವರಿಸಲಾಗಿದೆ.

ಸೆಪ್ಟೆಂಬರ್ 30 ಮತ್ತು 1 ರಂದು ಬೆಳಗಾವಿ, ಬೀದರ್, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮುಂಗಾರು ಪ್ರಭಾವ ಕಡಿಮೆಯಾಗಿರುವುದರಿಂದ ಅ.1ರ ನಂತರ ರಾಜ್ಯದಾದ್ಯಂತ ಮಳೆ ತಗ್ಗಲಿದೆ. ಕರಾವಳಿ ಭಾಗದಲ್ಲಿ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಮಳೆ-ಎಲ್ಲಿ ಎಷ್ಟು?: ಮಡಿಕೇರಿ, ಭಟ್ಕಳದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಚಿಕ್ಕಮಗಳೂರು, ಹಾಸನ 2, ಹೊಳೆನರಸೀಪುರ, ಶ್ರೀರಂಗಪಟ್ಟಣ, ಮಳವಳ್ಳಿ, ಮಂಡ್ಯ ಹಾಗೂ ಕನಕಪುರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ದಕ್ಷಿಣ ಒಳನಾಡಿನಲ್ಲಿ ಬಿರುಸಿನ ಮಳೆ:

ಮೈಸೂರು, ಕೊಡಗು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯ ಹಲವೆಡೆ ಮಂಗಳವಾರ ಬಿರುಸಿನ ಳೆಯಾಗಿದೆ.

ಹುಣಸೂರು ತಾಲ್ಲೂಕಿನಾದ್ಯಂತ ಎರಡು ಗಂಟೆಗೂ ಹೆಚ್ಚು ಹೊತ್ತು ಗುಡುಗಿನಿಂದ ಕೂಡಿದ ಭಾರಿ ಮಳೆಯಾಗಿದೆ. ಮಂಡ್ಯದ ಬೀಡಿ ಕಾರ್ಮಿಕರ ಕಾಲೊನಿಯ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ನಿವಾಸಿಗಳು ಪರದಾಡಿದರು.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಒಂದು ತಾಸಿಗೂ ಹೆಚ್ಚು ಹೊತ್ತು ಉತ್ತಮ ಮಳೆ ಸುರಿಯಿತು.

ಬೆಂಗಳೂರಿನಲ್ಲಿ ಮಳೆಯಬ್ಬರ:

ನಗರದ ವಿವಿಧ ಕಡೆ ಭಾರಿ ಮಳೆಯಾಗಿದ್ದು, ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ವಾಹನ ಸವಾರರು ಪರದಾಡಿದರು. ಸೋಮವಾರ ರಾತ್ರಿಯೂ ಬೆಂಗಳೂರಿನಲ್ಲಿ ಭಾರಿ ಮಳೆಯಾಗಿತ್ತು. ಮಂಗಳವಾರ ಸಂಜೆಯವರೆಗೆ ವಿವಿಧ ಪ್ರದೇಶಗಳಲ್ಲಿ ಮಳೆ ಸುರಿಯಿತು.