ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಎಲ್ಲೆಡೆ ಮುಂಗಾರು ಅಬ್ಬರ ಮುಂದುವರಿದಿದ್ದು, ಕರಾವಳಿ ಜಿಲ್ಲೆಗಳೊಂದಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಂಗಳವಾರ ಭಾರಿ ಮಳೆಯಾಗಿದೆ.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಸಮುದ್ರದ ಅಬ್ಬರ ಹೆಚ್ಚಿದೆ. ಮಂಗಳವಾರ ಇಡೀ ದಿನ ಕಲಬುರಗಿ, ಬೀದರ್ ಜಿಲ್ಲೆ ಯಾದ್ಯಂತ ಭಾರಿ ಮಳೆಯಾಗಿದೆ. ರಾಯಚೂರು ನಗರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಸುರಿಯಿತು.
ಉಳ್ಳಾಲದ ಸೋಮೇಶ್ವರ ತೀರದಲ್ಲಿ ಕಳೆದ ವರ್ಷ ಅಲೆಗೆ ಹಾನಿಗೀಡಾಗಿದ್ದ ಮನೆಯೊಂದು ಸಮುದ್ರ ಪಾಲಾಗಿದೆ. ಪುತ್ತೂರು, ವಿಟ್ಲದ ಕನ್ಯಾನದಲ್ಲಿ ಕೃತಕ ನೆರೆ ಉಂಟಾಗಿತ್ತು. ಉಡುಪಿ ಜಿಲ್ಲೆಯ ಪಡುಬಿದ್ರಿ ಪಾದೆಬೆಟ್ಟು ಗ್ರಾಮದ ಹೊಯಿಗೆ ತೋಟ ಪ್ರದೇಶದಲ್ಲಿ 6 ಮನೆಗಳು ಜಲಾವೃತಗೊಡಿವೆ.
19 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್
ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಹಾಗೂ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಈ ಜಿಲ್ಲೆಗಳಲ್ಲಿ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ.
ಮೀನುಗಾರರಿಗೆ ಇಲಾಖೆ ಸೂಚನೆ
ರಾಜ್ಯದ ಕರಾವಳಿ ಭಾಗದಲ್ಲಿ ಜೂನ್ 17ರಂದು ಗಂಟೆಗೆ 45 ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಹಾಗೂ 2.7ರಿಂದ 3.5 ಮೀಟರ್‌ಗಳಷ್ಟು ಎತ್ತರದ ಅಲೆಗಳೂ ಏಳುವ ಸಂಭವವಿದೆ. ಹೀಗಾಗಿ, ಮೀನುಗಾರರು ಬುಧವಾರ ಕಡಲಿಗೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.