ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಇದೇ ತಿಂಗಳ ಏಪ್ರೀಲ್ 14 ಮತ್ತು 15 ರಂದು ಎರಡು ದಿನಗಳ ಕಾಲ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ರಾಜ್ಯದ ವಿವಿಧೆಡೆ ಗುಡುಗು ಮಿಂಚಿಮ ಮಳೆಯಾಗುತ್ತದೆ. ಇನ್ನೆರೆಡು ದಿನ ಅಲ್ಲಲ್ಲಿ ಚದುರಿದ ಮಳೆಯಾಗಲಿದೆ. ಏಪ್ರೀಲ್ 14 ಮತ್ತು 15 ರಂದು ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನದಲ್ಲಿ ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ಚಾಮರಾಜನಗರ, ಮಂಡ್ಯ, ಮೈಸೂರು, ದಾವಣಗೆರೆ, ರಾಮನಗರ, ತುಮಕೂರು ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಬಾಗಲಕೋಟ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ವಿಜಯಪುರದಲ್ಲಿ ಏ. 13 ರಿಂದ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಿರುಬಿಸಿಲಿನ ನಡುವೆ ಉತ್ತರ ಕರ್ನಾಟಕದಲ್ಲಿ ಸುರಿಯಿತು ಮಳೆ
ಏ. 9 ರಂದು ಹವಾಮಾನ ಇಲಾಖೆಯು ನೀಡಿದ ಮುನ್ಸೂಚನೆಯಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಿದೆ. ವಿಶೇಷವಾಗಿ ಕಾದುಕೆಂಡವಾಗಿದ್ದ ಕಲಬುರಗಿ ಜಿಲ್ಲೆಯಲ್ಲಿ ಮಳೆರಾಯ ತಂಪೆರೆದಿದ್ದಾನೆ.
ಹುಬ್ಬಳ್ಳಿ, ಧಾರವಾಡ, ವಿಜಯಪುರ, ಬೆಳಗಾವಿಯ ವಿವಿಧೆಡೆ ಸಹ ಮಳೆಯಾಗಿದೆ. ಗುಡುಗುಡ ಮಿಂಚಿನ ಆರ್ಭಟದೊಂದಿಗೆ ಮಳೆಯಾಗಿದೆ.
ಕಳೆದ ಒಂದು ತಿಂಗಳಿಂದ ಬಿಸಿಲಿಗೆ ಕಾದು ಕೆಂಡವಾಗಿದ್ದ ಉತ್ತರ ಕರ್ನಾಟಕದ ನೆಲ ತಂಪಾಗಿದೆ. ಈ ಭಾಗದಲ್ಲಿ ಬಿಸಿಲು ಸಹ ದಾಖಲೆಮಟ್ಟದಲ್ಲಿ ಏರಿಕೆಯಾಗಿತ್ತು. ಶುಕ್ರವಾರ ಸುರಿದ ಅಲ್ಪ ಮಳೆಯ ಸ್ವಲ್ಪ ನೆಮ್ಮದಿ ನೀಡಿದೆ.