News

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಾಧ್ಯತೆ- ಯೆಲ್ಲೋ ಅಲರ್ಟ್ ಘೋಷಣೆ

15 April, 2021 9:51 AM IST By:
rain alert

ರಾಜ್ಯದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ  ಯಾಗಲಿರುವುದರಿಂದ ರಾಜ್ಯದ 19 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ಹಾವೇರಿ, ಯಾದಗಿರಿ, ವಿಜಯಪುರದಲ್ಲಿ, ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಏಪ್ರೀಲ್ 15 ರಂದು ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿರುವುದರಿಂದ  ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿದಿದ್ದರೂ ಬುಧವಾರ ಮಳೆಯಾಗಿದೆ.. ಶಿವಮೊಗ್ಗ, ಚಿಕ್ಕಮಗಳೂರು, ಶಿರಸಿ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಅಲ್ಲಲ್ಲಿ ಚದುರಿದ ಮಳೆಯಾಗಿದೆ.  ಬೆಂಗಳೂರಿನಲ್ಲಿ ಗುರುವಾರ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.  

ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಗರಿಷ್ಠ ತಾಪಮಾನದ ಹೆಚ್ಚಳದಿಂದ ಜನ ಹೈರಾಣಾಗಿದ್ದರು. ಕಳೆದ ಎರಡು ಮೂರು ದಿನಗಳಿಂದ ಮಳೆ ಆಗುತ್ತಿರುವ ಹಿನ್ನೆಯಲ್ಲಿ ತಂಪಾದ ವಾತಾವರಣ ಮೂಡಿದೆ.

ಹವಾಮಾನ ಇಲಾಖೆಯು ನೀಡಿದ ಮುನ್ಸೂಚನೆಯ ಪ್ರಕಾರ ಬುಧವಾರ ರಾಜ್ಯದ ವಿವಿಧೆಡೆ ಗುಡುಗು ಮಿಂಚಿನೊಂದಿಗೆ ಭಾರಿ ಮಳೆ ಸುರಿದಿದೆ. ಮಡಿಕೇರಿ, ಕಲಬುರಗಿಯ ಆಳಂದ, ಶಿವಮೊಗ್ಗ, ಸಾಗರಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ.

ಶಿವಮೊಗ್ಗದ ತುಮರಿ ಬಳಿ ಮನೆಗೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡು ಭಸ್ಮವಾಗಿದೆ. 80 ಕ್ವಿಂಟಾಲ್‌ ಅಡಕೆ, ಕಾಳು ಮೆಣಸು ಸುಟ್ಟು ಹೋಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಅಕಾಲಿಕ ಮಳೆಯಿಂದಾಗಿ ಮಾವಿನಕಾಯಿಗಳು ನೆಲಕ್ಕೆ ಉರಳಿವೆ. ಜೋಳ, ಗೋಧಿ, ಜವೇಗೋಧಿ ಬೆಳೆಗಳು ಮಣ್ಣು ಪಾಲಾಗಿವೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಚಿಲಕರಾಗಿಯಲ್ಲಿ ಕುರಿ ಮೇಯಿಸಲು ತೆರಳಿದ್ದ ಕುರಿಗಾರಿ ಲಿಂಗಸೂಗುರು ತಾಲೂಕಿನ ಆನಂದಗಲ್  ಗ್ರಾಮದ ಈರಪ್ಪ ಮೇದನಾಪೂರ (25) ಸಿಡಿಲು ಬಡಿತದಿಂದ ಸಾವನ್ನಪ್ಪಿದ್ದಾನೆ. ಕುರಿಗಾಹಿ ಜೊತೆಗೆ 17ಕ್ಕೂ ಹೆಚ್ಚು ಕುರಿ, ಮೇಕೆಗಳು ಸಾವನ್ನಪ್ಪಿವೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುದುರೇಡೆಪು ಗ್ರಾಮದಲ್ಲಿ ಕುರಿ ಮೇಯಿಸಲು ತೆರಳಿದ್ದ ನಿಂಗರಾಜ (26) ಎನ್ನುವ ಕುರಿಗಾಹಿ ಸಿಡಿಲು ಬಡಿತದಿಂದ ಸಾವನ್ನಪ್ಪಿದ್ದಾನೆ.

ಎಲ್ಲೆಲ್ಲಿ ಮಳೆ ಸಾಧ್ಯತೆ?

ದಕ್ಷಣ ಕನ್ನಡ, ಮೈಸೂರು, ಕೊಡಗು, ಹಾಸನ, ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾವಿ, ಚಿಕ್ಕಮಗಳೂರು, ಹಾವೇರಿ, ಧಾರವಾಡ ಮತ್ತ ಬಾಗಲಕೋಟೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಏ.15ರಂದು ಚದುರಿದಂತೆ ಮಳೆಯಾಗಲಿದೆ.