News

ಜುಲೈ 23ರವರೆಗೆ ಮಳೆ ಸಾಧ್ಯತೆ-ಕೆಳದಂಡೆ ಮುಲ್ಲಾಮಾರಿ ಯೋಜನೆಯ ಆಣೆಕಟ್ಟಿನಿಂದ ನದಿಗೆ ನೀರು ಬಿಡುಗಡೆ: ನದಿಯ ಅಕ್ಕಪಕ್ಕದ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚನೆ

21 July, 2021 5:31 PM IST By:

ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 23ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಗುಡುಗಿನಿಂದ ಕೂಡಿದ ಭಾರಿ ಮಳೆ ನಿರೀಕ್ಷಿಸಲಾಗಿದ್ದು, ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ.

ಈಗಾಗಲೇ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಜಿಟಿಜಿಟಿ ಮಳೆಯಾಗುತ್ತಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಜಿಟಿಜಿಟಿ ಮಳೆಯಾಗುತ್ತಿದ್ದರಿಂದ ಬೆಳೆಗೆ ಸಂಕಷ್ಟ ತಂದಿದೆ. ಇದೇ ರೀತಿ ಜಿಟಿಜಿಟಿ ಮಳೆ ಮುಂದುವರೆದರೆ ರೈತರ ಬೆಳೆಗಳು ಹಾನಿಯಾಗುವ ಸಾಧ್ಯತೆಯಿದೆ.

ಕೆಳದಂಡೆ ಮುಲ್ಲಾಮಾರಿ ಆಣೆಕಟ್ಟಿನಿಂದ ನದಿಗೆ ನೀರು ಬಿಡುಗಡೆ: ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚನೆ

ಪ್ರಸ್ತುತ ಹವಾಮಾನ ಇಲಾಖೆಯ ಪ್ರಕಾರ ಜುಲೈ 22ರವರೆಗೆ ಕೆಳದಂಡೆ ಮುಲ್ಲಾಮಾರಿ ಯೋಜನೆ ಜಲಾಶಯದ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ. ಸಧ್ಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪ್ರಯುಕ್ತ ಸುಮಾರು 3500 ಕ್ಯೂಸೆಕ್ಸ್ ಒಳಹರಿವು ಇದ್ದು, ಆಣೆಕಟ್ಟಿನ ಸುರಕ್ಷತೆ ಮತ್ತು ಪ್ರವಾಹ ನಿಯಂತ್ರಣಕ್ಕಾಗಿ ಹೆಚ್ಚುವರಿ 7000 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಬಿಡಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಲಬುರಗಿ ಐ.ಪಿ.ಸಿ. ವಿಭಾಗ ನಂ.1ರ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ಒಳಹರಿವು ಬಂದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಬಿಡಲಾಗುತ್ತದೆ. ಆದ್ದರಿಂದ ಪ್ರವಾಹದಿಂದ ನದಿಪಾತ್ರದ ಗ್ರಾಮಗಳಾದ ಚಿಮ್ಮನಚೋಡ, ತಾಜಲಾಪೂರ, ಕನಕಪೂರ, ಗಾರಂಪಳ್ಳಿ, ದೇಗಲಮಡಿ, ನೀಮಹೊಸಳ್ಳಿ, ಚಿಂಚೋಳಿ ಹಾಗೂ ಅನವಾರ ಗ್ರಾಮಗಳಿಗೆ ತೊಂದರೆ ಉಂಟಾಗಬಹುದಾಗಿದೆ. ಆದ್ದರಿಂದ ನದಿಯ ಅಕ್ಕಪಕ್ಕದ ರೈತರು, ಸಾರ್ವಜನಿಕರು ನದಿಯಲ್ಲಿ ಇಳಿದು ಈಜುವುದು, ಬಟ್ಟೆ ಒಗೆಯುವುದು, ದನಕರುಗಳಿಗೆ ನೀರು ಕುಡಿಸುವುದು ಹಾಗೂ ಇನ್ನಿತರ ಯಾವುದೇ ಕಾರಣಕ್ಕಾಗಿ ನದಿಯಲ್ಲಿ ಇಳಿಯಬಾರದು. ನದಿಯ ಪಾತ್ರದಲ್ಲಿರುವ ಸಣ್ಣ ನೀರಾವರಿ ಮತ್ತು ಇನ್ನಿತರ ಯಾವುದೇ ಇಲಾಖೆಗಳಿಗೆ ಸಂಬAಧಪಟ್ಟ ಆಸ್ತಿಗಳಿದ್ದಲ್ಲಿ ಮುಂಜಾಗ್ರತೆಯಾಗಿ ಸುರಕ್ಷಿತವಾಗಿಟ್ಟುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ. 

ಭಾರಿ ಮಳೆಯಾಗುವ ಮುನ್ಸೂಚನೆಯ ಹಿನ್ನೆಲಯಲ್ಲಿ ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಕೇಂದ್ರ ಬುಧವಾರ ವಾಣಿಜ್ಯ ನಗರ ಮುಂಬೈನಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮುಂಬೈನಲ್ಲಿ ಬುಧವಾರ ಮತ್ತು ಮುಂದಿನ ಕೆಲ ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಗುಜರಾತ್ ನ ಕರಾವಳಿಯಿಂದ ಕರ್ನಾಟಕದವರೆಗಿನ  ತೀರದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಮಳೆ ಗಾಳಿಯ ಮುನ್ಸೂಚನೆಯೂ ಕೂಡ ಮುಂಬೈ ಮತ್ತಿತರರ ಪ್ರದೇಶಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದೆ.