News

10 ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ-ಆರೆಂಜ್ ಅಲರ್ಟ್ ಘೋಷಣೆ

29 August, 2021 5:11 PM IST By:

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಆಗಸ್ಟ್ 29 ರಿಂದ ಆಗಸ್ಟ್ 31 ರವರೆಗೆ ಮೂರು ದಿನಗಳ ಕಾಲ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸೂಚನೆ ಹಿನ್ನೆಲೆಯಲ್ಲಿ 10 ಜಿಲ್ಲೆಗಳಲ್ಲಿ ಎರಡು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಕರ್ನಾಟಕಹಾಗೂ ಕೇರಳದ ಕರಾವಳಿಯಲ್ಲಿ ಕಡಿಮೆ ಒತ್ತಡವಿರುವ ಕಾರಣ ಈ ಪ್ರದೇಶದಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಆಗಸ್ಟ್ 29 ರಿಂದ ಮೂರು ದಿನಗಳ ಕಾಲ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ , ಚಾಮರಾಜನಗರ, ಶಿವಮೊಗ್ಗ, ಉಡುಪಿ,  ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವುದರಿಂದ ಆಗಸ್ಟ್ 29 ರಂದು ಆರೇಂಜ್ ಅಲರ್ಟ್ ಹಾಗೂ ಆಗಸ್ಟ್ 30 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕಲಬುರಗಿ, ಬೀದರ, ಯಾದಗಿರಿ ಜಿಲ್ಲೆಯಲ್ಲಿ ಆಗಸ್ಟ್ 29 ಹಾಗೂ 30 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರದಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಆಗಸ್ಟ್ 31 ರಂದು ಮಳೆ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯಾದ್ಯಂತ ಶನಿವಾರ ಮುಂಗಾರು ಚುರುಕಾಗಿದ್ದು, ನೈರುತ್ಯ ಮುಂಗಾರಿನಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಹೆಚ್ಚಾಗಿದೆ.  ರಾಜ್ಯದ ಕರಾವಳಿ ಭಾಗದಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿ.ಮೀ ತಲುಪುವ ಸಾಧ್ಯತೆಯಿರುವುದರಿಂದ ಮೀನುಗಾರರು ಆಗಸ್ಟ್ 30ರವರೆಗೆ ಸಮುದ್ರದ ಪ್ರದೇಶಗಳಿಗೆ ಇಳಿಯದಂತೆ ಸೂಚಿಸಲಾಗಿದೆ.

ಆ. 30ರವರೆಗೆ ದ.ಕನ್ನಡ, ಉಡುಪಿ, ಉ.ಕನ್ನಡ, ಬೆಂಗಳೂರು, ಬೆಂ ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದ್ದು, ಆ. 31ರಂದು ಕೂಡ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಉಡುಪಿಯ ಬ್ರಹ್ಮಾವರದಲ್ಲಿ 13 ಸೆಂ.ಮೀಟರ್, ದಕ್ಷಿಣ ಕನ್ನಡದ ಸುಬ್ರಹ್ಮಣ್ಯದಲ್ಲಿ 10 ಸೆಂ.ಮೀಟರ್, ಶಿವಮೊಗ್ಗದ ಆಗುಂಬೆಯಲ್ಲಿ 8 ಸೆಂ.ಮೀ, ಉಡುಪಿಯ ಕಾರ್ಕಳದಲ್ಲಿ 7 ಸೆಂ.ಮೀ, ಚಿಕ್ಕಮಗಳೂರಿನ ಕೊಟ್ಟೆಗೆಹಾರದಲ್ಲಿ 6 ಸೆಂ.ಮೀಟರ, ಉಡುಪಿಯ ಕುಂದಾಪುರದಲ್ಲಿ 5 ಸೆಂ.ಮೀಟರ್ ಮಳೆಯಾಗಿದೆ.

ಜುಲೈ ತಿಂಗಳಲ್ಲಿ ಬಿದ್ದ ಮಳೆಯ ವೇಳೆ ನದಿ, ಹಳ್ಳಕೊಳ್ಳ, ಕೆರೆಗಳು ಉಕ್ಕಿ ಹರಿದಿದ್ದವು. ಹಲವೆಡೆ ಪ್ರವಾಹ ಸ್ಥಿತಿ ಉಂಟಾಗಿತ್ತು. ಜನಜೀವನ ಅಸ್ತವ್ಯಸ್ತವಾಗಿತ್ತು. ಆಗಸ್ಟ್ ಮೊದಲ ವಾರದಲ್ಲಿಯೂ ಕರಾವಳಿ, ಮಳೆನಾಡು ಭಾಗಗಳಲ್ಲಿ ಮಳೆಯಾಗಿತ್ತು. ನಂತರ ಅಬ್ಬರ ಕಡಿಮೆಯಾಗಿತ್ತು.