News

ಕರ್ನಾಟಕದಲ್ಲಿ ಸೆಪ್ಟೆಂಬರ್ 6 ರಿಂದ ಭಾರಿ ಮಳೆ ಸಾಧ್ಯತೆ- ಆರೇಂಜ್ ಅಲರ್ಟ್

05 September, 2021 9:20 PM IST By:

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧೆಡೆ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಮುಂದುವರೆಯಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಸೆಪ್ಟೆಂಬರ್ 6 ಮತ್ತು 7 ರಂದು ಭಾರಿ ಮಳೆಯಾಗಲಿರುವುದರಿಂದ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.

ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಹಾಗೂ ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ, ರಾಯಚೂರು, ಯಾದಗಿರಿ, ಬೆಳಗಾವಿ, ಕೊಪ್ಪಳ ಗದಗ, ಧಾರವಾಡ ಮತ್ತು ಹಾವೇರಿಯಲ್ಲಿ ಮುಂದಿನ ಸೆಪ್ಟೆಂಬರ್ 6 ರಿಂದ ಸೆಪ್ಟೆಂಬರ್ 8ರವರೆಗೆ ವ್ಯಾಪಕ ಮಳೆಯಾಗುವುದರಿಂದ ಯೆಲ್ಲೋ ಅಲರ್ಟೋ ಘೋಷಿಸಲಾಗಿದೆ.

ಭಾರಿ ಮಳೆಯಾಗುವ ಸಾಧ್ಯತೆ: ಗೋವಾದಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಗೋವಾ ರಾಜ್ಯದಲ್ಲಿ ಸೋಮವಾರ ಮತ್ತು ಮಂಗಳವಾರ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಮುಂದಿನ 48 ಗಂಟೆಗಳಲ್ಲಿ ರಾಜ್ಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತುರ್ತು ಪರಿಸ್ಥಿತಿಯಲ್ಲಿ ಹೆಲ್ಪ್ಲೈನ್ ನಂಬರ್ ನೀಡಿದೆ. ಉತ್ತರ ಗೋವಾ ದೂ-08322225383 ಮತ್ತು ದಕ್ಷಿಣ ಗೋವಾ ದೂ-08322794100 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್ ತಮ್ಮ ಟ್ವೀಟರ್ ಖಾತೆಯಲ್ಲಿ ಹೇಳಿದ್ದಾರೆ.

ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ಬಿರುಗಾಳಿ, ಮಳೆಗೆ ಕಬ್ಬು, ತೊಗರಿ ಹಾನಿ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ 2 ದಿನಗಳಿಂದ ಅಲ್ಲಲ್ಲಿ ಧಾರಾಕಾರ ಮಳೆ ಮತ್ತು ಬಿರುಗಾಳಿಗೆ ಸುಮಾರು 2 ಸಾವಿರ ಎಕರೆ ಕಬ್ಬು ನೆಲಕ್ಕೆ ಬಿದ್ದು ಹಾಳಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ತಾಲ್ಲೂಕಿನ ಕರಜಗಿ, ಅಫಜಲಪುರ, ಅತನೂರ 3 ಹೋಬಳಿಗಳಲ್ಲಿ ಕಬ್ಬು ಹೆಚ್ಚು ಹಾನಿಯಾಗಿದೆ. ಇನ್ನೂ ಮಳೆ ಮುಂದುವರೆದಿದ್ದು, ಇನ್ನೂ ಹೆಚ್ಚಿನ ಕಬ್ಬು ಹಾನಿಯಾಗುವ ಸಂಭವವಿದೆ ಎಂದು ರೈತರು ಹೇಳುತ್ತಿದ್ದಾರೆ.

ನಿರಂತರ ಮಳೆಗೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ತೊಗರಿ ಹಣ್ಣು ಒಡೆದು, ಹಳದಿಯಾಗುತ್ತಿದ್ದು, ಬೆಳವಣಿಗೆ ಕುಂಠಿತವಾಗುತ್ತದೆ. ಇನ್ನೂ ಮಳೆ ಮುಂದುವರೆದರೆ ಸಂಪೂರ್ಣ ತೊಗರಿ ಹಾಳಾಗುವ ಸಾಧ್ಯತೆಯಿದೆ.