ಜನರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಇಲ್ಲಿವೆ.
ಬೆಂಗಳೂರು ಸಂಚಾರ ದಟ್ಟಣೆ ತಪ್ಪಿಸಲು ಭಾರೀ ಸರ್ಕಸ್!
ಇನ್ಮುಂದೆ ನೀವೂ ಡ್ರೋಣ್ ಪೈಲಟ್‌ಗಳಾಗಬಹುದು!
ಬಿಪಿಎಲ್, ಎಪಿಎಲ್ ಕಾರ್ಡ್ದಾರರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ
ಬರದಿಂದ ರಾಜ್ಯಕ್ಕೆ ಭಾರೀ ನಷ್ಟ, ಸಾವಿರಾರು ಹೆಕ್ಟರ್ ಬೆಳೆ ನಾಶ
ಸುದ್ದಿಗಳ ವಿವರ ಈ ರೀತಿ ಇದೆ.
ಬೆಂಗಳೂರಿನಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯನ್ನು ತಪ್ಪಿಸಲು ಭಾರೀ ಸರ್ಕಸ್‌ಗಳು ನಡೆಯುತ್ತಿವೆ.
ಇದೀಗ ಬೆಂಗಳೂರಿನಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ನಗರ ಭೂ ಸಾರಿಗೆ ನಿರ್ದೇಶನಾಲಯ ಜಿಪಿಎಸ್ ಆಧಾರಿತ ಅತ್ಯಾಧುನಿಕ ಟ್ರಾಫಿಕ್
ಮಾಹಿತಿ ಹಾಗೂ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ.
ಇನ್ನು ಬೆಂಗಳೂರು ಸಂಚಾರ ದಟ್ಟಣೆಯ ಕುರಿತು ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು,
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಪ್ಪಿಸುವ ಉದ್ದೇಶದಿಂದ 190 ಕಿಲೋಮೀಟರ್ ಉದ್ದದ ಟನಲ್ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ ಎಂದಿದ್ದಾರೆ.
ಅಲ್ಲದೇ ಈ ಸಂಬಂಧ 45 ದಿನಗಳ ಒಳಗಾಗಿ ಟೆಂಡರ್ ಕರೆಯಲು ಸಿದ್ಧತೆ ನಡೆದಿದೆ ಎಂದಿದ್ದಾರೆ.
--------------------
ಇನ್ಮುಂದೆ ನೀವೂ ಡ್ರೋಣ್ ಪೈಲಟ್‌ಗಳಾಗಬಹುದು. ಹೌದು ಇದೀಗ ಸರ್ಕಾರವು ನೀಡಿರುವ ಯಾವುದೇ ಗುರುತು ಮತ್ತು ವಿಳಾಸ ಪುರಾವೆ
ದಾಖಲೆಯೊಂದಿಗೆ ಡ್ರೋಣ್ ಪೈಲಟ್‌ಗಳಾಗಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಇನ್ನು ಡ್ರೋಣ್ ಪೈಲಟ್‌ಗಳಿಗಾಗಿ ಹೊಸ ಡ್ರೋಣ್ ತಿದ್ದುಪಡಿ ನಿಯಮಗಳು 2023 ಕುರಿತು ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.
--------------------
ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ದಾರರಿಗೆ ರಾಜ್ಯ ಸರ್ಕಾರವು ಸಿಹಿಸುದಿಯೊಂದನ್ನು ನೀಡಿದೆ.
ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ಗಳ ತಿದ್ದುಪಡಿಗೆ ರಾಜ್ಯ ಆಹಾರ ಇಲಾಖೆಯು ಅವಕಾಶ ಕಲ್ಪಿಸಿದೆ.
ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ಗಳಲ್ಲಿ ಹೆಸರು ಬದಲಾವಣೆ, ಕೇಂದ್ರ ಬದಲಾವಣೆ, ಕಾರ್ಡ್‌ನ ಸದಸ್ಯರ ಹೆಸರು ತೆಗೆಸುವುದು
ಅಥವಾ ಸೇರಿಸುವುದು, ಕಾರ್ಡ್‌ನ ಮುಖ್ಯಸ್ಥರ ಹೆಸರು ಬದಲಾವಣೆ ಮಾಡುವುದು ಹಾಗೂ ವಿಳಾಸ ಬದಲಾವಣೆ ಮಾಡುವುದು
ಸೇರಿದಂತೆ ಕೆಲವು ನಿರ್ದಿಷ್ಟ ತಿದ್ದುಪಡಿಗಳನ್ನು ನೀವು ಮಾಡಿಕೊಳ್ಳಬಹುದಾಗಿದೆ. ಇತ್ತೀಚಿಗೆ ರಾಜ್ಯ ಸರ್ಕಾರವು ಜಾರಿ ಮಾಡಿರುವ ಐದು ಪ್ರಮುಖ ಗ್ಯಾರಂಟಿ
ಯೋಜನೆಗಳ ಫಲಾನುಭವಿಗಳಾಗಲು ರೇಷನ್ ಕಾರ್ಡ್ ಪ್ರಧಾನವಾಗಿತ್ತು. ರೇಷನ್ ಕಾರ್ಡ್‌ನಲ್ಲಿ ಕೆಲವು ತಿದ್ದುಪಡಿಗಳು ಆಗದೆ
ಇರುವುದರಿಂದ ಹಲವರು ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದರು.
ಇದೀಗ ಆಹಾರ ಇಲಾಖೆಯು ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ.
ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ಗಳ ತಿದ್ದುಪಡಿಗೆ ಮೂರು ಹಂತದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇನ್ನು ನೀವು ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೆ ತಿದ್ದುಪಡಿ
ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ಗಳ ತಿದ್ದುಪಡಿಗೆ ಜಿಲ್ಲಾವಾರು ದಿನಾಂಕ ನಿಗದಿಪಡಿಸಲಾಗಿದೆ.
ಅದರಲ್ಲಿ ಮೊದಲನೇ ಹಂತದಲ್ಲಿ ಅಕ್ಟೋಬರ್ 5 ರಿಂದ 7ರ ವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಇರುವವರು
ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದು. 2ನೇ ಹಂತದಲ್ಲಿ ಅಕ್ಟೋಬರ್ 8 ರಿಂದ ಅಕ್ಟೋಬರ್
10ರ ವರೆಗೆ ಬೆಳಗಾವಿ, ಬಾಗಲಕೋಟೆ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ
ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ ಹಾಗೂ ವಿಜಯಪುರ ಸೇರಿದಂತೆ ಒಟ್ಟು 15 ಜಿಲ್ಲೆಗಳಲ್ಲಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ಮೂರನೇ ಹಂತದಲ್ಲಿ ಅಕ್ಟೋಬರ್ 11 ರಿಂದ ಅಕ್ಟೋಬರ್ 13ರ ವರೆಗೆ ಕಲಬುರಗಿ, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ
ಚಿತ್ರದುರ್ಗ, ದಾವಣಗೆರೆ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು
ಯಾದಗಿರಿ ಹಾಗೂ ವಿಜಯನಗರ ಸೇರಿದಂತೆ 14 ಜಿಲ್ಲೆಗಳಿಗೆ ತಿದ್ದುಪಡಿ ನಡೆಯಲಿದೆ.
--------------------
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಸೃಷ್ಟಿಯಾಗಿರುವ ಬರದಿಂದ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ.
ಈ ಸಂಬಂಧ ಮಾತನಾಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಬರ ಪರಿಸ್ಥಿತಿಯಿಂದ ಒಟ್ಟು 30 ಸಾವಿರದ 432 ಕೋಟಿ ನಷ್ಟವಾಗಿದೆ ಎಂದಿದ್ದಾರೆ.
ಇನ್ನು ರಾಜ್ಯದ 195 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಇದರಿಂದ 39.74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಮತ್ತು 1.82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ
ತೋಟಗಾರಿಕಾ ಬೆಳೆಗೆ ಹಾನಿಯಾಗಿದೆ. ಹಾನಿಯ ಒಟ್ಟಾರೆ ಮೌಲ್ಯವು 4 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಎಂದು ಹೇಳಿದ್ದಾರೆ.