News

ಸೀತನಿ ತಿನ್ನುವುದರಿಂದಾಗುವ ಆರೋಗ್ಯಕ್ಕೆ ಹಲವಾರು ಲಾಭಗಳು

14 March, 2021 7:36 PM IST By:

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬಿಳಿ ಜೋಳ (Jowar) ಬೆಳೆಯಲಾಗುತ್ತದೆ. ಇದು ಭಾಗದ ಬಹುಮುಖ್ಯವಾದ ಬೆಳೆಗಳಲ್ಲಿ ಒಂದಾಗಿದೆ. ಈ ಜೋಳದ ತೆನೆ ಕಾಳು ಕಟ್ಟುವ ಹಂತದಲ್ಲಿದ್ದುದನ್ನು ಹಾಲ್ದೆನೆ ಅಥವಾ ಸೀತನಿ )ಎಂದು ಕರೆಯುವರು.

ಸೀತನಿ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಲಾಭಗಳು ಉಂಟು. ಸಾಮಾನ್ಯವಾಗಿ ಒಂದು ನೂರು ಗ್ರಾಂ ಸೀತನಿ ಸೇವಿಸಿದರೆ 316 ಗ್ರಾಂ ಕ್ಯಾಲೋರಿ, 10 ಗ್ರಾಂ ಪ್ರೊಟೀನ್, 3 ಗ್ರಾಂ ಫ್ಯಾಟ್, 6 ಗ್ರಾಂ ಫೈಬರ್, 69 ಗ್ರಾಂ ಕಾರ್ಬೋಹೈಡ್ರೇಟ್ಸ್ ಲಭಿಸಲಿದೆ ಎಂದು ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಜು ತೆಗ್ಗೆಳ್ಳಿ ಅವರು ತಿಳಿಸಿದ್ದಾರೆ.

ಇದರಲ್ಲಿರುವ ವಿಟ್ಯಾಮಿನ್ “ಬಿ” ಚರ್ಮ ಮತ್ತು ಕೂದಲಿಗೆ ಒಳ್ಳೆಯ ಪೋಷಕಾಂಶ ಒದಗಿಸುತ್ತದೆ. ಇನ್ನೊಂದು ಪ್ರಮುಖ ಅಂಶವೆಂದರೆ ಸೀತನಿಯಲ್ಲಿರುವ ಮ್ಯಾಗ್ನೀಶಿಯಂ ಎಲುಬು ಮತ್ತು ಹೃದಯಕ್ಕೆ ಹೆಚ್ಚು ಪ್ರಯೋಜನಕಾರಿ. ಇದೊಂದು ಫೈಬರಿನ ಮೂಲ ಎಂದರೆ ತಪ್ಪಾಗದು.

ಸೀತನಿಯು ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಿಸಲು ಮತ್ತು ಮುಖ್ಯವಾಗಿ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಎಂದು ತೆಗ್ಗೆಳ್ಳಿ ಅವರು ತಿಳಿಸಿದ್ದಾರೆ.

ಜೋಳದ ಹಾಲ್ತೆನೆಗಳನ್ನು ಬೆಂಕಿಯ ಕೆಂಡದಲ್ಲಿ ಸುಟ್ಟು ನಂತರ ಅವುಗಳನ್ನು ಬಡಿದು ರಸ ಭರಿತ ಹಸಿರು ಕಾಳುಗಳನ್ನು ಬೇರ್ಪಡಿಸಿ ಸವಿದರೆ, ಅದರ ರುಚಿ ಸವಿದವನೇ ಬಲ್ಲ.  ಹಾಲು ತುಂಬಿದ ಜೋಳದ ಕಾಳುಗಳು ಸೇವಿಸಿದರೆ ಆರೋಗ್ಯಕರವಾಗಿರುತ್ತದೆ. ಅದು ಶಕ್ತಿ ಭರಿತವಾದ ಆಹಾರ. ಅದರ ರುಚಿಯೇ ವಿಭಿನ್ನ. ಹಿಂದೆ ಜನವರಿ ಫೆಬ್ರವರಿ ತಿಂಗಳನ್ನು ಸೀತನಿ ಸುಗ್ಗಿ ಎಂದು ಕರೆಯುತ್ತಿದ್ದರು.

ಸೀತನಿ ಹೊಲದಲ್ಲೇ ತಯಾರಿಸಿ, ಬಿಸಿ ಬಿಸಿಯಾಗಿದ್ದಾಗಲೇ ಹಸಿರು ಕಾಳು ಸವಿಯಬೇಕಾದ  ಖಾದ್ಯ. ಇದರ ಜೊತೆಗೆ ಬೆಲ್ಲ, ಉಪ್ಪು, ಶೇಂಗಾ, ಹಿಂಡಿ ತಿನ್ನುವವರೂ ಇದ್ದಾರೆ. ಒಂದೊಂದು ಭಾಗದಲ್ಲಿ ಒಂದೊದು ಪದಾರ್ಥವನ್ನು ಸೀತನಿ ಜತೆ ತಿನ್ನುತ್ತಾರೆ. ಮುಸ್ಸಂಜೆಯಲ್ಲಿ ಬೆಚ್ಚನೆಯ ಕೆಂಡದ ಮುಂಬಾಗ ಕುಳಿತು, ಸುಡವ ಎಳೆಯ ಜೋಳದ ಕಾಳುಗಳನ್ನು ಸವಿಯುವ ಮಜ ವರ್ಣಿಸಲು ಅಸಾದ್ಯ.

ಮನೆಯ ಕುಟುಂಬವೆಲ್ಲ ಬಂಡಿ ಕಟ್ಟಿಕೊಂಡು ಜೋಳದ ಹೊಲಕ್ಕೆ ಹೋಗಿ ಸೀತನಿ ತಿಂದು ಆನಂದ ಅನುಭವಿಸಿ ಬರುತ್ತಿದ್ದರು. ಹೀಗಾಗಿ ಸೀತನಿ ತಿನ್ನುವುದು ಎಂದರೆ ಅದೊಂದು ಸಂತಸ ಸಂಭ್ರಮ ಪಡುವ ಸಂಗತಿಯಾಗಿತ್ತು. ಆದರೆ ಇತ್ತೀಚೆಗೆ ಕೇವಲ ಬೀಗರು, ನೆಂಟರು ಬಂದರೆ ಮಾತ್ರ ಸೀತನಿ ಸವಿಯುತ್ತಾರೆ. ಜೋಳದ ಸೀತನಿ ಸಮಯದಲ್ಲಿ ಅದರ ಕಬ್ಬು ಸಹ ಸಿಹಿಯಾಗಿರುತ್ತದೆ. ಅದು ಸಹ ಹಿಂದೆ ಸೇವನೆ ಮಾಡುತ್ತಿದ್ದರು. ಅಲ್ಲದೆ ಸೀತನಿ ಕಬ್ಬು ಜಾನುವಾರುಗಳಿಗೂ ಸಹ ಪ್ರಿಯವಾದ ಆಹಾರ. ಮತ್ತು ಅವುಗಳಿಗೆ ಅದ್ಭುತವಾದ ಶಕ್ತಿ ನೀಡುವ ಔಷಧಿಯಾಗಿತ್ತು. ಇಂದು ಸೀತನಿ ಕಬ್ಬು ಮರೆಯಾಗಿದೆ.