News

ರೈತಸಿರಿ ಯೋಜನೆಯಡಿ ಅನ್ನದಾತನ ನೆರವಿಗೆ ಬರಲಿದೆ ಸರ್ಕಾರ: ರೈತ ಸಿರಿ ಯೋಜನೆಯಡಿ 10 ಸಾವಿರ ರೂಪಾಯಿ

13 August, 2021 8:24 PM IST By:

ರಾಷ್ಟ್ರೀಯ ವಿಕಾಸ್ ಯೋಜನೆಯಡಿಯಲ್ಲಿ ಸಿರಿಧಾನ್ಯಗಳನ್ನು ಬೆಳೆಯುವಂತೆ ಉತ್ತೇಜಿಸಲು ರೈತ ಸಿರಿ ಯೋಜನೆಯನ್ನು ಕೃಷಿ ಇಲಾಖೆ ಅನುಷ್ಠಾನಗೊಳಿಸಿದೆ. ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ‘ರೈತಸಿರಿ’ ಯೋಜನೆ ಅಡಿ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂಪಾಯಿ ನಗದು ಪ್ರೋತ್ಸಾಹ ನೀಡಲಾಗುವುದು. ಈ ಯೋಜನೆಯಡಿ ನವಣೆ,ಕೂರಲೆ, ಸಾಮೆ, ಬರಗು, ಊದಲು ಬೆಳೆಗಳನ್ನು ಬೆಳೆಯುವ ರೈತರಿಗೆ ಒಂದು ಹೆಕ್ಟೆರ್ಗೆ 10,000 ರುಪಾಯಿಗಳಂತೆ 2 ಹೆಕ್ಟೆರ್ ವರೆಗೆ ಪ್ರೋತ್ಹಾಹ ಧನ ನೀಡಲಾಗುವುದು. ಇತ್ತೀಚೆಗೆ ರೈತರು ಸಿರಿಧಾನ್ಯಗಳನ್ನು ಬೆಳೆಯುವುದನ್ನು ಕೈಬಿಟ್ಟಿರುವುದರಿಂದ ಸರ್ಕಾರ ಸಿರಿಧಾನ್ಯ ಬೆಳೆಗಳಿಗೆ ಉತ್ತೇಜನ ನೀಡಲು ರೈತಸಿರಿ ಯೋಜನೆಯನ್ನು ಜಾರಿಗೊಳಿಸಿದೆ.

ರೈತರು ಸಿರಿಧಾನ್ಯಗಳನ್ನು ಬೆಳೆಯುವಂತೆ ಉತ್ತೇಜಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತ ಸಿರಿ ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಹೇರಳವಾಗಿ ಪೌಷ್ಠಿಕಾಂಶ ಹೊಂದಿರುವ ಸಿರಿಧಾನ್ಯಗಳಾದ ಊದಲು, ನವಣೆ, ಕೊರಲೆ, ಹಾರಕ, ಅರ್ಕ, ಬರಗು ಮತ್ತು ಸಾಮೆಗಳ ಉತ್ಪಾದನೆ ಹೆಚ್ಚಿಸುವ ನಿಲುವು ಕೃಷಿ ಇಲಾಖೆ ಕೈಗೊಂಡಿದೆ.

ಸಿರಿಧಾನ್ಯಗಳು ಪ್ರಮುಖವಾಗಿ ಮಳೆಯಾಶ್ರಿತ ಬೆಳೆಗಳಾಗಿದ್ದು, ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗುತ್ತದೆ. ಇದರಿಂದ ಹೆಚ್ಚಿನ ರೈತರು ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸಿದಂತಾಗುತ್ತದೆ. ಸಿರಿಧಾನ್ಯ ಬೆಳೆಯುವ ರೈತರಿಗೆ ನೇರ ಸೌಲಭ್ಯ ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗೆ ಪ್ರೋತ್ಸಾಹಧನ ಜಮೆ ಮಾಡಲಾಗುವುದು. ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್ ಮಾತ್ರ ಸೀಮಿತವಾಗುವಂತೆ ಪ್ರೋತ್ಸಾಹಧನ ನೀಡಲಾಗುವುದು.

ಸಿರಿಧಾನ್ಯಗಳಿಗೆ ಮಾರುಕ್ಟೆಯಲ್ಲಿ ಬೇಡಿಕೆಯೂ ಹೆಚ್ಚಾಗುತ್ತಿದೆ.  ಈ ಅಗಾಧವಾದ ಪೌಷ್ಠಿಕಾಂಶ ಹೊಂದಿರುವ ಸಿರಿಧಾನ್ಯಗಳನ್ನು ರೈತರು ಕೈಬಿಡುತ್ತಿರುವುದರಿಂದ ಪಾರಂಪರಿಕ ಬೀಜಗಳು ನೇಪಥ್ಯಕ್ಕೆ ಸರಿಯುತ್ತಿವೆ. ಯಾವುದೇ ರಾಸಾಯನಿಕವಿಲ್ಲದೆ ಬೆಳೆಯುವ ಸಿರಿಧಾನ್ಯಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಆದರೆ ಸರ್ಕರಾರದಿಂದ ಸಿಗುವ ಪ್ರೋತ್ಸಾಹ ಧನದ ಮಾಹಿತಿಯ ಕೊರತೆಯಿಂದಾಗಿ ಸಿರಿಧಾನ್ಯಗಳು ಕಣ್ಮರೆಯಾಗುತ್ತಿದೆ.

ಫಲಾನುಭವಿಗಳ ಅರ್ಹತೆ:

ಫಲಾನುಭವಿಗಳು ರೈತರಾಗಿದ್ದು ಜಮೀನು ಅವರ ಹೆಸರಿನಲ್ಲಿರಬೇಕು. ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು ತಂದೆ ಅಥವಾ ತಾಯಿ ಹೆಸರಿನಲ್ಲಿ ಜಮೀನಿದ್ದು, ಅವರು ಮರಣ ಹೊಂದಿದ್ದಲ್ಲಿ ಮಾತ್ರ ಗ್ರಾಮಲೆಕ್ಕಿಗರಿಂದ ದೃಢೀಕರಿಸಿ, ಕುಟುಂಬದ ಇತರೆ ಸದಸ್ಯರಿಂದಒಪ್ಪಿಗೆ ಪಡೆದುತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸುವುದು.

ಈ ಯೋಜನೆಯ ಲಾಭ ಪಡೆಯಲು ರೈತರು ಬೆಳೆ ಸಮೀಕ್ಷೆ ಕಡ್ಡಾಯವಾಗಿ ಕೈಗೊಳ್ಳಬೇಕು. ತಮ್ಮ ವ್ಯಾಪ್ತಿಗೆ ಬರುವ ರೈತ ಸಂಪರ್ಕ ಕೇಂದ್ರದಲ್ಲಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಹೆಸರು ನೋಂದಾಯಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಹಿಂದುಳಿದ ವರ್ಗದ ರೈತರಿಗೆ ಆದ್ಯತೆ ನೀಡಲಾಗುವುದು.

ಸಹಾಯಧನ ಪಡೆಯುವುದು ಹೇಗೆ ಪ್ರತಿ ಹೆಕ್ಟೇರಿಗೆ 10 ಸಾವಿರ ರೂಪಾಯಿಗಳಂತೆ ಗರಿಷ್ಠ 2 ಹೆಕ್ಟೇರ್ಗೆ ಸಹಾಯಧನ ನೀಡಲಿದೆ. ಬೆಳೆ ಸಮೀಕ್ಷೆಯಲ್ಲಿ ಸಿರಿಧಾನ್ಯಗಳು ನಮೂದು ಆಗಿರಬೇಕು.  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಹಿಂದುಳಿದ ರೈತರಿಗೆ ಆದ್ಯತೆ ನೀಡಲಾಗುವುದು.

ಬಿತ್ತನೆಯಾದ ನಂತರ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಹೊಲಕ್ಕೆ ಭೇಟಿ ನೀಡಿ ಜಿಪಿಎಸ್ ಆಧಾರಿತ ಫೊಟೊ ತೆಗೆದು ಯೋಜನೆಯ ವೆಬ್ಸೈಟ್ ಗೆ ಅಳವಡಿಸುತ್ತಾರೆ. ನಂತರ ಸರ್ಕಾರ ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ ಪ್ರೋತ್ಸಾಹ ಹಣವನ್ನು ಎರಡು ಕಂತೆಗಳಲ್ಲಿ ಜಮೆ ಮಾಡುತ್ತದೆ.

ಫಲಾನುಭವಿ ರೈತರು ಸಿರಿಧಾನ್ಯಗಳಾದ ಊದಲು, ನವಣೆ, ಹಾರಕಾ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳಿಗೆ ಬೆಳೆದಿರಬೇಕು. ಸಿರಿಧಾನ್ಯ ಬೆಳೆಯಲು ಆಸಕ್ತಿಯಿರುವ ಹಾಗೂ ಈಗಾಗಲೇ ಬಿತ್ತನೆ ಮಾಡಿರುವ ರೈತರು ರೈತಸಿರಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಪ್ರೋತ್ಸಾಹಧನ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.