News

ಹೆಸರು ಬೆಳೆಗೆ ಹಳದಿ ರೋಗ-ಸಂಕಷ್ಟದಲ್ಲಿ ರೈತರು

08 August, 2020 4:16 PM IST By:

 ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ವಿವಿಧ ಭಾಗದಲ್ಲಿ ಹೆಸರು ಬೆಳೆಗೆ ಕೀಟಗಳ ಕಾಟದ ಜೊತೆಗೆ ಹಳದಿ ರೋಗ ಕಾಣಿಸಿಕೊಂಡಿದ್ದು, ರೈತರನ್ನು ಆತಂಕಕ್ಕೆ ದೂಡುವಂತೆ ಮಾಡಿದೆ.

ಈ ವರ್ಷ ಸರಿಯಾದ ಸಮಯಕ್ಕೆ ಮುಂಗಾರು ಪ್ರವೇಶ ಮಾಡಿದ್ದರಿಂದ ರೈತ ಬಾಂಧವರು ಖುಷಿಯಿಂದಲೇ ಬಿತ್ತಣಿಕೆ ಮಾಡಿದ್ದರು. ಉತ್ತಮ ಮಳೆಯಿಂದಾಗಿ ಫಸಲು ಸಹ ಸಮೃದ್ಧಿಯಾಗಿ ಬೆಳೆದಿದೆ. ಆದರೆ ಈಗ ಹೂವು ಬಿಡುವ ಹಾಗೂ ಕಾಯಿಕಟ್ಟುವ ಸಮಯದಲ್ಲಿಯೇ ಹಳದಿ ರೋಗ ಕಾಟ ಶುರವಾಗಿದೆ.

ಈ ಬಾರಿ ಬೆಳೆಗಳು ಉತ್ತಮವಾಗಿ ಫಸಲು ಬರುತ್ತದೆಂದು ಹಿಗ್ಗಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಆದರೆ ಬೆಳೆದು ನಿಂತಿರುವ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕ ಶುರುವಾಗಿದೆ. ಹುಲಸಾಗಿ ಬೆಳೆಯುತ್ತಿರುವ ಹೆಸರು ಫಸಲಿಗೆ ಹಳದಿ ರೋಗ ಕಂಡು ಬಂದಿದ್ದು, ಇಳುವರಿ ಕಡಿಮೆ ಬರುವ ಸಾಧ್ಯತೆ ಇದೆ.. ಹುಲುಸಾಗಿ ಬೆಳೆದ ಹೆಸರು ಕಾಳು ಕಟ್ಟುವಾಗ ಮಾತ್ರ ರೈತನ ಕೈ ಹಿಡಿಯುತ್ತಿಲ್ಲ. ಆದರೂ ರೈತ ಭೂ ತಾಯಿಯನ್ನು ನಂಬಿ ಕೃಷಿ ಕಾರ್ಯದಲ್ಲಿ ತೊಡಗುತ್ತಿದ್ದಾರೆ.

 ಬೆಳೆ ಹಸಿ ಇರುವಾಗಲೇ ಹಳದಿ ರೋಗ ಹರಡಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಹೆಸರು ಬೆಳೆಯಲ್ಲಿ ಎಲೆಗೆ ಹಳದಿ ರೋಗ ಕಾಡಿದೆ. ಪ್ರತಿ ಗಿಡದಿಂದ ಹಿಡಕ್ಕೆ ಹಬ್ಬುವ ಹಳದಿ ರೋಗ ಫಸಲನ್ನು ಹಾಳು ಮಾಡುತ್ತಿವೆ. ಬೆಳೆಯ ರಕ್ಷಣೆ ರೈತರಿಗೆ ಸವಾಲಾಗಿದೆ. ಹೀಗಾಗಿ ಅನ್ನದಾತರು ಬೆಳೆ ಉಳಿಸಿಕೊಳ್ಳಲು ಹಳದಿ ರೋಗವಿರುವ ಬೆಳೆಯನ್ನು ಕೀಳುವಲ್ಲಿ ತಲ್ಲೀನರಾಗಿದ್ದಾರೆ.

ಜಂಟಿ ಕೃಷಿ ನಿರ್ದೇಶಕರ ಸಲಹೆ

ಕಳೆದ ಹದಿನೈದು ದಿನಗಳಿಂದ  ಸುರಿಯುತ್ತಿರುವ ಮಳೆಯಿಂದ ಹಾಗೂ ಆಧ್ರ್ರತೆಯುಕ್ತ ತಂಪು ವಾತಾವರಣದಿಂದಾಗಿ ಹೆಸರು (green gram) ಮತ್ತು ಉದ್ದು ಬೆಳೆಗೆ ಹಳದಿ ರೋಗ ಬರುವ ಸಾಧ್ಯತೆಯಿರುವುದರಿಂದ ರೈತರಿಗೆ ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ಸಲಹೆ ನೀಡಿದ್ದಾರೆ.

 ಹಳದಿ ಎಲೆ ನಂಜಾಣು ರೋಗ(yellow leaf toxins):ಮೊದಲು ಎಲೆಯ ಮೇಲೆ ಹಳದಿ ಬಣ್ಣದ ಚುಕ್ಕೆ ಆಕಾರದ ಚಿಹ್ನೆಗಳು ಕಂಡುಬರುತ್ತವೆ, ನಂತರದಲ್ಲಿ ಒಂದಕ್ಕೊಂದು ಚುಕ್ಕೆಗಳು ಕೂಡಿ ಸಂಪೂರ್ಣ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ತದನಂತರ ಸಂಪೂರ್ಣವಾಗಿ ಕಂದು ಬಣ್ಣಕ್ಕೆ ತಿರುಗಿ ಒಣಗುತ್ತವೆ. ಈ ನಂಜಾಣು ಬಿಳಿ ನೊಣದಿಂದ ಪ್ರಸರಣಗೊಳ್ಳುತ್ತದೆ.

ಹತೋಟಿ ಕ್ರಮಗಳು (control): ಪ್ರತಿ ಎಕರೆಗೆ 8-10 ಹಳದಿ ಅಂಟು ಬಲೆಗಳನ್ನು ಅಳವಡಿಸಬೇಕು.ಒಂದು ಮಿ.ಲೀ ಬೇವಿನ ಎಣ್ಣೆಯನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.. (ಸೂ: ಯಾವುದೇ ರಾಸಾಯನಿಕ ಕೀಟನಾಶಕದೊಂದಿಗೆ ಬೇವಿನ ಎಣ್ಣೆಯನ್ನು ಮಿಶ್ರಣ ಮಾಡಬಾರದು). ಇಮಿಡಾಕ್ಲೋಪ್ರಿಡ್ 0.5 ಮಿ. ಲೀ. ಯನ್ನು  ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ನುಸಿಗಳ ನಿರ್ವಹಣೆ: ಮಳೆ ಬಂದ ಎರಡು ಮೂರು ದಿನಗಳ ನಂತರ ಥ್ರೀಪ್ಸ ಹಾಗೂ ಬೋರಾನ್ ಕೊರತೆಯಿಂದ ಹೆಸರು ಮತ್ತು ಉದ್ದು ಬೆಳೆಯಲ್ಲಿ ಗಿಡದ ತುತ್ತ ತುದಿ (ನೆತ್ತಿ) ಸುಡುವುದು ಕಂಡು ಬಂದರೆ ರೈತರು ಥಿಯೋಮಿಥಾಕ್ಸಮ್ 0.5 ಗ್ರಾಂ. ಮತ್ತು ಬೋರಾನ್ 1 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ತುಕ್ಕು ರೋಗ (ಕಬ್ಬಿಣ/ಇಟ್ಟಂಗಿ/ತಾಮ್ರ ರೋಗ): ಸಾಫ್ (SAAF)  2ಗ್ರಾಂ. ಹೆಕ್ಸಾಕೋನಾಜೋಲ್ 1 ಮೀ.ಲೀ. ಅಥವಾ ಪ್ರೋಪಿಕೊನಾಜೋಲ್ 1 ಮಿ.ಲೀ. ಅನ್ನು ಪ್ರತಿ ಲೀಟರ ನೀರಿಗೆ ಬೆರೆಸಿ  ಸಿಂಪಡಿಸಬೇಕು ಎಂದು ಕಲಬುರಗಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಸಲಹೆ ನೀಡಿದ್ದಾರೆ.