News

ಕಂದಾಯ ದಿನಾಚರಣೆಯ ಪ್ರಯುಕ್ತ ಉಚಿತ ಸಸಿಗಳ ವಿತರಣೆ

01 July, 2021 5:10 PM IST By:

ಕಂದಾಯ ದಿನಾಚರಣೆ ಅಂಗವಾಗಿ ಹಸಿರೋತ್ಸವ ಕಾರ್ಯಕ್ರಮಕ್ಕೆ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಲಾಯಿತು.

ಕರ್ನಾಟಕ ರಾಜ್ಯ ಕಂದಾಯ ಇಲಾಖಾ ನೌಕರರ ಸಂಘ (ರಿ) ಹಾಗೂ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘ (ರಿ) ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಸಸಿ ನೆಟ್ಟು ನೀರೆರೆಯುವ ಮೂಲಕ ಕಂದಾಯ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಎಲ್ಲಾ ಇಲಾಖೆಗಳ ಮಾತೃ ಇಲಾಖೆಯಾದ ಕಂದಾಯ ಇಲಾಖೆಯ ಕಾರ್ಯವೈಖರಿ ಶ್ಲಾಘನೀಯವಾಗಿದೆ. ಕಷ್ಟ ಅಂದಕೂಡಲೇ ಮುಂದೆ ಬಂದು ಜವಾಬ್ದಾರಿಯುತವಾಗಿ ಸೇವೆ ಸಲ್ಲಿಸುವ ಕಂದಾಯ ಇಲಾಖೆ ಬಗ್ಗೆ ನನಗೆ ಹೆಮ್ಮೆ ಇದೆ. ಜಿಲ್ಲೆಯಲ್ಲಿ 3 ಬಾರಿ ಪ್ರವಾಹ, 2 ಬಾರಿ ಕೋವಿಡ್ ಸಾಂಕ್ರಾಮಿಕ ಸೋಂಕು ಕಂಡಾಗ ಎದೇಗುಂದದೇ ಪ್ರತಿಯೊಬ್ಬ ಅಧಿಕಾರಿ-ಸಿಬ್ಬಂದಿಗಳು ಧೈರ್ಯದಿಂದ ಕಾರ್ಯನಿರ್ವಹಿಸಿರುವುದು ಸಂತಸದ ವಿಷಯವಾಗಿದೆ ಎಂದರು.

ಕಂದಾಯ ದಿನಾಚರಣೆಯ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೇವು, ತಾಳೆ ಸಸಿಗಳನ್ನು ನೆಡಲಾಯಿತು. ಗಿಡಮರ ಬೆಳೆಸಿ ಉಚಿತ ಆಮ್ಲಜನಕ ಪಡೆಯಿರಿ ಎಂಬ ಘೋಷವಾಕ್ಯದಡಿ ಅರಣ್ಯ ಇಲಾಖೆಯ ವತಿಯಿಂದ ವಿವಿಧ ತಳಿಯ ಸಸಿಗಳನ್ನು ಉಚಿತವಾಗಿ ನೀಡಲಾಯಿತು.

ಜಿಲ್ಲೆಯ ಪ್ರತಿಯೊಂದು ಕಂದಾಯ ಇಲಾಖೆ ಕಚೇರಿಗಳ ಆವರಣದಲ್ಲಿ 5 ಸಸಿಗಳನ್ನು ನೆಟ್ಟು ಅರ್ಥ ಪೂರ್ಣವಾಗಿ ಕಂದಾಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ಗ್ರಾಮ ಲೆಕ್ಕಾಧಿಕಾರಿಗಳು 5 ಸಸಿಗಳನ್ನು ಬೆಳೆಸಬೇಕು. ಇದಲ್ಲದೆ ಕರ್ನಾಟಕ ರಾಜ್ಯಾದ್ಯಂತ ಕಂದಾಯ ಇಲಾಖೆ ವತಿಯಿಂದ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಸಸಿಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಜಿಲ್ಲೆಯ 11 ಕಂದಾಯ ಉಪ ವಿಭಾಗ ಸೇರಿ ಸುಮಾರು 1000 ದಿಂದ 1500 ಸಸಿಗಳನ್ನು ನೆಡುವ ಮೂಲಕ ಮಾದರಿ ಕಂದಾಯ ದಿನಾಚರಣೆಯ ಆಚರಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘ (ರಿ) ಕಾರ್ಯದರ್ಶಿ ನವಾಜ್ ಮಹಮ್ಮದ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ, ಕಲಬುರಗಿ ತಹಶೀಲ್ದಾರ್ ಪ್ರಕಾಶ್ ಕುದರಿ, ಗ್ರೇಡ್-2 ತಹಶೀಲ್ದಾರ್ ವೆಂಕಣಗೌಡ ಪಾಟೀಲ್, ಕರ್ನಾಟಕ ರಾಜ್ಯ ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಶರಣಬಸವ ಹೊಸಮನಿ, ಕಾರ್ಯದರ್ಶಿ ಗುರುಮೂರ್ತಯ್ಯ, ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ರಾಜು ಗೋಪಣೆ, ಕಾರ್ಯದರ್ಶಿ ನವಾಜ್ ಮಹಮ್ಮದ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.