News

ಮೇ ತಿಂಗಳಾಂತ್ಯದೊಳಗೆ ವಿದ್ಯಾರ್ಥಿಗಳಿಗೆ ಪೂರ್ಣ ಆಹಾರ ಧಾನ್ಯ ವಿತರಣೆ: ಸುರೇಶ್ ಕುಮಾರ್

12 May, 2021 8:43 PM IST By:
Suresh kumar

ಕೊರೋನಾ ಸೋಂಕಿನಿಂದಾಗಿ  ಶಾಲಾ ವಿದ್ಯಾರ್ಥಿಗಳಿಗೆ ನೀಡಬೇಕಾದ ಆಹಾರ ಧಾನ್ಯ ವಿಳಂಬವಾಗಿದೆ. ಮೇ ತಿಂಗಳ ಅಂತ್ಯದೊಳಗೆ ಪೂರ್ಣವಾಗಿ ವಿತರಿಸಲು ಸೂಚನೆ ನೀಡಲಾಗಿದೆ ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್  ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಅವರು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಉಪಹಾರದ ಬದಲಿಗೆ ನೀಡಲಾಗುತ್ತಿದ್ದ ಬಾಕಿ ಉಳಿದಿರುವ ಅಡುಗೆ ಎಣ್ಣೆ ಸೇರಿದಂತೆ  ಆಹಾರ ಧಾನ್ಯಗಳನ್ನು ಲಾಕ್-ಡೌನ್ ಅವಧಿ ಮುಗಿದ ತಕ್ಷಣವೇ ವಿತರಿಸಬೇಕೆಂದು ನಿರ್ದೇಶನ   ನೀಡಲಾಗಿದೆ ಎಂದು ತಿಳಿಸಿದರು.

ಪೂರ್ಣ ದಿನಗಳಿಗೆ ವಿತರಣೆ ಮಾಡಲು ಅಗತ್ಯವಿರುವ ಆಹಾರ ಧಾನ್ಯ ಕೆಎಸ್ಎಫ್ ಸಿ ಗೋದಾಮುಗಳಲ್ಲಿ ಏಕ ಕಾಲದಲ್ಲಿ ಸಂಗ್ರಹಣೆ ಮಾಡಿ ಎತ್ತುವಳಿ ಮಾಡಲು ಕಷ್ಟಸಾಧ್ಯವಾಗಿರುವುದರಿಂದ ಎರಡು ಹಂತಗಳಲ್ಲಿ ವಿತರಿಸಲು ತೀರ್ಮಾನಿಸಿ  ಈಗಾಗಲೇ ಒಂದು ಹಂತದ ವಿತರಣೆ ಪೂರ್ಣಗೊಳಿಸಲಾಗಿದೆ ಎಂದರು.

ಮೊದಲ ಹಂತದ 108 ದಿನಗಳ ಆಹಾರ ಧಾನ್ಯಗಳನ್ನು ಎಲ್ಲ ಶಾಲೆಗಳಿಗೆ ವಿತರಿಸಲಾಗಿದೆ. ಉಳಿದ ಅವಧಿಯಾದ 2021ರ ನವೆಂಬರ್ ನಿಂದ 2021ಮಾರ್ಚ್ ವರೆಗಿನ 132 ದಿನಗಳಿಗೆ ಸಂಬಂಧಿಸಿದ  ಆಹಾರ ಧಾನ್ಯಗಳನ್ನು  ಕೆಲವು ಶಾಲೆಗಳಿಗೆ ವಿತರಿಸಲಾಗಿದೆ.

ಲಾಕ್-ಡೌನ್ ಘೋಷಣೆಯಾದ್ದರಿಂದ ಕೆಲವು ಶಾಲೆಗಳಿಗೆ ಎರಡನೇ ಹಂತದ  ಆಹಾರ ಧಾನ್ಯಗಳನ್ನು ವಿತರಿಸಲು ಸಾಧ್ಯವಾಗಿಲ್ಲ. ಲಾಕ್-ಡೌನ್ ಮುಗಿದ ಕೂಡಲೇ ಪ್ರಕ್ರಿಯೆ ಪ್ರಾರಂಭಿಸಿ ಉಳಿದ ಶಾಲೆಗಳಿಗೆ  ಮೇ ಅಂತ್ಯದೊಳಗೆ ವಿತರಿಸಲು ಸೂಚನೆ ನೀಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ತೊಗರಿ ಬೇಳೆ ಸರಬರಾಜುದಾರರಿಗೆ ಏ. 27ರಂದು ಮತ್ತು ಅಡುಗೆ ಎಣ್ಣೆ ಸರಬರಾಜುದಾರರಿಗೆ ಮೇ 7ರಂದು  ಸರಬರಾಜು ಕಾರ್ಯಾದೇಶ ನೀಡಲಾಗಿದೆ ಎಂದು ತಿಳಿಸಿದ ಸಚಿವರು ದಾಸ್ತಾನಿನಲ್ಲಿರುವ ಆಹಾರ ಧಾನ್ಯಗಳನ್ನು ಡಿಡಿಪಿಐ ಮತ್ತು ಜಿಪಂ ಸಿಇಒಗಳೊಂದಿಗೆ ಚರ್ಚಿಸಿ ತಕ್ಷಣವೇ ಕೂಡಲೇ ವಿತರಿಸಲು ಸೂಚನೆ ನೀಡಲಾಗಿದೆ. ಎಲ್ಲ ಶಾಲೆಗಳ ಮುಖ್ಯಸ್ಥರು ಶಾಲೆಗಳಲ್ಲಿ ಹಾಜರಿರುವಂತೆ ಸೂಚಿಸಿ ಸೂಚಿತ ಅವಧಿಗೆ ಆಹಾರ ಧಾನ್ಯಗಳ ವಿತರಣೆಗೆ ಕ್ರಮ ವಹಿಸಲಾಗುತ್ತದೆ ಎಂದು ಅವರು ಹೇಳಿದರು.

ಶಾಲೆಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಪ್ರಸ್ತುತ ಆರು ತಿಂಗಳ ಅವಧಿಗೆ ಒಂದು ಬಾರಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ಸಾಲಿನಿಂದ ಇದನ್ನು ಸರಿಪಡಿಸಲಾಗುತ್ತದೆ. ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ತಿಂಗಳು ವಿದ್ಯಾರ್ಥಿಗಳ ಮನೆಗೆ ಆಹಾರ ಧಾನ್ಯ ವಿತರಣೆಗೆ ನೀಲನಕ್ಷೆ ತಯಾರಿಸಲು ಸೂಚಿಸಲಾಗಿದೆ ಎಂದೂ ಸಚಿವರು ಹೇಳಿದರು.

ಶಿಸ್ತು ಕ್ರಮ: ಅನಗತ್ಯವಾಗಿ ಶಾಲೆಗಳಿಗೆ ನೀಡಬೇಕಾದ ಹಣವನ್ನು ತಮ್ಮ ಖಾತೆಯಲ್ಲೇ ಉಳಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮಕ್ಕೆ ಕೂಡಲೇ ಪ್ರಸ್ತಾವನೆ ಮಂಡಿಸಲೂ ಸಹ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.