News

ಹಿಮಸ್ಫೋಟದಿಂದ ಉತ್ತರಾಖಂಡದಲ್ಲಿ ಭಾರಿ ಪ್ರವಾಹ, 125ಕ್ಕೂ ಹೆಚ್ಚು ಜನರ ಸಾವಿನ ಶಂಕೆ

08 February, 2021 9:56 AM IST By:
glacier burst

ದೇಶದ ದೇವಭೂಮಿ ಎಂದು ಖ್ಯಾತಿ ಪಡೆದಿರುವ ಉತ್ತರಾಖಂಡದಲ್ಲಿ ಭಾನುವಾರಿ ಭಾರಿ ದುರಂತ ಸಂಭವಿಸಿದೆ.ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ಬಳಿ ಸಂಭವಿಸಿದ ಹಿಮನದಿ ಸ್ಫೋಟದಿಂದ ಉಂಟಾದ ದಿಢೀರ್ ಪ್ರವಾಹಕ್ಕೆ ಸಿಲುಕಿ 7 ಮಂದಿ ಮೃತಪಟ್ಟಿದ್ದಾರೆ. 125 ಮಂದಿ ಕಣ್ಮರೆಯಾಗಿದ್ದಾರೆ.

ಪ್ರವಾಹದ ರಭಸಕ್ಕೆ ಖಾಸಗಿ ಕಂಪನಿಯೊಂದು ಕೈಗೆತ್ತಿಕೊಂಡಿದ್ದ ವಿದ್ಯುತ್ ಘಟಕ ನಿರ್ಮಾಣ ಸ್ಥಳ ಕೊಚ್ಚಿಕೊಂಡು ಹೋಗಿದೆ. ನಿರ್ಗಲ್ಲು ಸ್ಫೋಟದ ರಭಸಕ್ಕೆ ಪವಿತ್ರ ನದಿಗಳಾಗಿರುವ  ಅಲಕಾನಂದ, ಧೌಲಿಗಂಗಾನದಿಯಲ್ಲಿ ಕಂಡುಕೇಳರಿಯದ ರೀತಿಯಲ್ಲಿ ಪ್ರವಾಹ ಉಂಟಾಗಿದೆ. ಹೀಗಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

2013 ರಲ್ಲಿ ನಡೆದಿದ್ದ ಭಾರಿ ಪ್ರವಾಹದ ಬಳಿಕ ಆ ರಾಜ್ಯದಲ್ಲಿ ನಡೆದ ಭೀಕರ ದುರ್ಘಟನೆ ಇದಾಗಿದೆ. ನೋಡುನೋಡುತ್ತಿದ್ದಂತೆ ಅಲಕಾನಂದ, ಧೌಲಿಗಂಗಾ ನದಿಯಲ್ಲಿ ಪ್ರವಾಹ ಉಂಟಾಗಿದೆ.

ಜೋಶಿಮಠದಿಂದ ಪೂರ್ವದಿಕ್ಕಿನಲ್ಲಿ ಇರುವ ನಂದಾದೇವಿ ಪರ್ವತದಲ್ಲಿ ಇರುವ ಹಿಮನದಿಗಳಲ್ಲಿ ಒಂದರಲ್ಲಿ ಭಾನುವಾರ ಬೆಳಿಗ್ಗೆ 10ರ ವೇಳೆಗೆ ಈ ಸ್ಫೋಟ ಸಂಭವಿಸಿದೆ. ಹಿಮನದಿಯ ನೀರ್ಗಲ್ಲು ಮುರಿದುಬಿದ್ದ ಕಾರಣ, ಋಷಿಗಂಗಾ ನದಿಯ ದಂಡೆಯಲ್ಲಿರುವ ರೈನಿ ಪ್ರದೇಶ ದಲ್ಲಿ ಋಷಿಗಂಗಾ ಜಲವಿದ್ಯುತ್ ಯೋಜನೆಯ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಈ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಯೋಜನೆಯ ಭಾಗವಾಗಿ ನಿರ್ಮಿಸಲಾಗುತ್ತಿದ್ದ ಅಣೆಕಟ್ಟೆಯು ರಭಸದ ಪ್ರವಾಹದಲ್ಲಿ ಕೊಚ್ಚಿಹೋಗಿದೆ.

ನಂತರ ಪ್ರವಾಹವು ಧೌಲಿಗಂಗಾ ನದಿಯನ್ನು ಸೇರಿ ಜೋಶಿಮಠದತ್ತ ಮುನ್ನುಗ್ಗಿದೆ. ಜೋಶಿಮಠಕ್ಕೂ ಮುನ್ನ ತಪೋವನದಲ್ಲಿ ನಿರ್ಮಿಸಲಾಗುತ್ತಿರುವ ಮತ್ತೊಂದು ಜಲವಿದ್ಯುತ್ ಯೋಜನೆಯ ಅಣೆಕಟ್ಟೆಯೂ ಈ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಇಲ್ಲಿಯೂ ಹಲವು ಕಾರ್ಮಿಕರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆಯ ಎರಡು ತಂಡಗಳು, ಭಾರತೀಯ ಸೇನೆಯ ನಾಲ್ಕು ತುಕಡಿಗಳು, ನೌಕಾಪಡೆಯ ಮುಳುಗು ತಜ್ಞರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ರೈನಿ ಗ್ರಾಮದ ಬಳಿ ಸೇತುವೆ ಕೊಚ್ಚಿಹೋಗಿರುವ ಕಾರಣ, ಗಡಿಠಾಣೆ ಗಳಿಗೆ ಸಂಪರ್ಕ ಕಡಿತವಾಗಿದೆ.

ನೀರ್ಗಲ್ಲು ಸ್ಫೋಟಕ್ಕೆ ಕಾರಣವೇನು?

ನೀರಿನ ಒತ್ತಡ ಹೆಚ್ಚುವುದು, ಸವಕಳಿ, ಹಿಮಪಾತ, ನೀರ್ಗಲ್ಲುಗಳ ಕೆಳಗೆ ಭೂಕಂಪ… ಹೀಗೆ ಬೇರೆ ಬೇರೆ ಕಾರಣಗಳಿಂದ ನೀರ್ಗಲ್ಲುಗಳು ಸ್ಫೋಟಗೊಳ್ಳಬಹುದು. ಜತೆಗೆ, ಒಂದು ನೀರ್ಗಲ್ಲುಗಳ ಸರೋವರದ ಮೇಲೆ ಮತ್ತೂಂದು ನೀರ್ಗಲ್ಲು ಬಂದು ಢಿಕ್ಕಿ ಹೊಡೆದಾಗಲೂ ಇಂಥ ಘಟನೆ ಸಂಭವಿಸಬಹುದು.