News

ಉದ್ಯೋಗ ಕಳೆದುಕೊಂಡವರಿಗೆ ಗುಡ್ ನ್ಯೂಸ್- ಶೇ. 50ರಷ್ಟು ನಿರುದ್ಯೋಗ ಪರಿಹಾರ

23 August, 2020 11:21 AM IST By:

ಕೊರೋನಾ ಲಾಕ್ಡೌನ್  (Lockdown) ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ನೌಕರರ ರಾಜ್ಯ ವಿಮಾ ನಿಗಮವು ಮೂರು ತಿಂಗಳ ಸರಾಸರಿ ವೇತನದ (Govt to offer 50% of three months’ salary) ಶೇ.50 ರಷ್ಟು ನಿರುದ್ಯೋಗ ಪರಿಹಾರದ ರೂಪದಲ್ಲಿ  ನೀಡಲು ತೀರ್ಮಾನಿಸಿದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಸಂತೋಷ ಕುಮಾರ ಗಂಗ್ವಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಕೊರೋನಾ ಸಾಂಕ್ರಾಮಿಕ ರೋಗದಿಂದ ಉದ್ಯೋಗ ಕಳೆದುಕೊಂಡವರಿಗೆ ಪರಿಹಾರ ನೀಡಲಾಗುವುದು ಎಂದು ಹೇಳಾಗಿದೆ.

ಈ ತೀರ್ಮಾನದಿಂದಾಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಸುಮಾರು 40 ಲಕ್ಷ ಕಾರ್ಮಿಕರಿಗೆ ಸಹಾಯವಾಗಲಿದೆ. ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆಯಲ್ಲಿ ನೀಡುವ ಪರಿಹಾರದ ವಿಚಾರದಲ್ಲಿ ನಿಗಮ ಈ ತೀರ್ಮಾನ ಕೈಗೊಂಡಿದೆ. ಇಎಸ್‌ಐ ಯೋಜನೆಯ ವ್ಯಾಪ್ತಿಗೆ ಬರುವ ಕಾರ್ಮಿಕರಿಗೆ ಈ ಯೋಜನೆಯ ಅಡಿ ನಿರುದ್ಯೋಗ (unemployment ) ಪರಿಹಾರದ ರೂಪದಲ್ಲಿ ನೆರವು ನೀಡಲಾಗುತ್ತದೆ.

ಈ ಯೋಜನೆಯನ್ನು ಮುಂದಿನ ವರ್ಷದ ಜೂನ್‌ ಅಂತ್ಯದವರೆಗೆ ವಿಸ್ತರಿಸಲು ಕೂಡ ನಿಗಮ ತೀರ್ಮಾನಿಸಿದೆ.  ಉದ್ಯೋಗ ಕಳೆದುಕೊಂಡ ಕಾರ್ಮಿಕರಿಗೆ ಈಗಿರುವ ಪರಿಸ್ಥಿತಿಗೆ ಅನುಗುಣವಾಗಿ ಪರಿಹಾರ ಪ್ರಮಾಣ ಪಡೆಯಲು ನಿಯಮ ಸಡಿಲಿಕೆ ಮಾಡಲಾಗುವುದು. ಮೂರು ತಿಂಗಳ ವೇತನದ 50 ಪ್ರತಿಶತದಷ್ಟು ನಿರುದ್ಯೋಗ ಪರಿಹಾರವಾಗಿ ಪಾವತಿಸಲಾಗುವುದು ಎಂದು ಹೇಳಲಾಗಿದೆ.

ಇದುವರೆಗೆ ಸರಾಸರಿ ವೇತನದ ಶೇ 25ರಷ್ಟನ್ನು ಪರಿಹಾರ ರೂಪದಲ್ಲಿ ನೀಡಲಾಗುತ್ತಿತ್ತು. ಉದ್ಯೋಗ ಕಳೆದುಕೊಂಡ 90 ದಿನಗಳ ನಂತರ ಇದನ್ನು ನೀಡುವ ಬದಲು 30 ದಿನಗಳ ನಂತರ ನೀಡಲಾಗುತ್ತದೆ ಎಂದು ನಿಗಮ ಹೇಳಿದೆ. ವಿಮೆ ವ್ಯಾಪ್ತಿಗೆ ಒಳಪಡುವ ವ್ಯಕ್ತಿಗಳು ಇಎಸ್‌ಐಸಿ ಶಾಖಾ ಕಚೇರಿಯ ಮೂಲಕ ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಹಣದ ಮೊತ್ತವನ್ನು ಅವರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.