News

ಜಿಎಸ್ಟಿ ಪಾವತಿ ರಿಲೀಫ್- ಬಡ್ಡಿ ದರ ಸಹ ಕಡಿತ

13 June, 2020 11:10 AM IST By:

ಕಳೆದ ಮೂರು ವರ್ಷಗಳಿಂದ ಜಿಎಸ್‌ಟಿ ಪಾವತಿಸದ ಹಾಗೂ ಕೊರೋನಾ ಬಿಕ್ಕಟ್ಟಿನಿಂದ ಸಂಕಷ್ಟದಲ್ಲಿರುವ ಸಣ್ಣ ಉದ್ದಿಮೆದಾರರ ನೆರವಿಗೆ ಜಿಎಸ್ಟಿ ಮಂಡಳಿ ಧಾವಿಸಿದ್ದು, ತಡವಾಗಿ ಜಿಎಸ್ಟಿ  ರಿಟರ್ನ್ಸ್ ಸಲ್ಲಿಸುವವರಿಗೆ ವಿಳಂಬ ಶುಲ್ಕದಲ್ಲಿ ವಿನಾಯಿತಿ ಪ್ರಕಟಿಸಿದೆ.

2017ರ ಜುಲೈಯಿಂದ 2020ರ ಜನವರಿ ವರೆಗಿನ ಅವಧಿಯಲ್ಲಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸದವರು ಇದೇ ಜು.1ರಿಂದ ಆ.30ರ ವರೆಗೆ ಸಲ್ಲಿಸಬಹುದು. ಇವರಿಗೆ ಲೇಟ್‌ ರಿಟರ್ನ್ಸ್ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಶುಕ್ರವಾರ ಹೊಸದಿಲ್ಲಿಯಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 40ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಎಸ್‌ಟಿ ಏರಿಕೆ ಪ್ರಸ್ತಾವವನ್ನೂ ಮುಂದೂಡಲಾಗಿದೆ ಎಂದರು.

ದಂಡ ಪ್ರಮಾಣ ಇಳಿಕೆ

ತೆರಿಗೆ ಸಲ್ಲಿಸದಿರುವ ವಾರ್ಷಿಕ 5 ಕೋಟಿ ರೂಪಾಯಿ ವಹಿವಾಟಿನ ಕಂಪೆನಿಗಳಿಗೂ ಹೊಸ ಅವಕಾಶ ಕಲ್ಪಿಸಲಾಗಿದೆ. ಫೆಬ್ರವರಿ, ಮಾರ್ಚ್‌, ಎಪ್ರಿಲ್‌ನಲ್ಲಿ ರಿಟರ್ನ್ಸ್ ಸಲ್ಲಿಸದ ಇಂಥ ಕಂಪೆನಿಗಳು ಸೆ. 30ರೊಳಗೆ ರಿಟರ್ನ್ಸ್ ಸಲ್ಲಿಸಿದರೆ ವಿಧಿಸುವ “ಲೇಟ್‌ ರಿಟರ್ನ್ಸ್’ ದಂಡವನ್ನು ಶೇ. 18ರಿಂದ ಶೇ. 9ಕ್ಕೆ ಇಳಿಸಲಾಗಿದೆ.

ಜುಲೈನಲ್ಲಿ ಪರಿಹಾರ ನಿರ್ಧಾರ

ಲಾಕ್ಡೌನ್ ಅವಧಿಯಲ್ಲಿ ರಾಜ್ಯಗಳಿಗೆ ಜಿಎಸ್ಟಿ ನಷ್ಟ ಪರಿಹಾರ ನೀಡುವುದಕ್ಕೆ ಸಂಬಂಧಿಸಿದ ಜುಲೈನಲ್ಲಿ ಸಭೆ ಸೇರಿ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.