ಕಳೆದ ವರ್ಷದಂತೆ ಈ ವರ್ಷವೂ ಭಾರಿ ಪ್ರವಾಹ ಉಂಟಾದರೆ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ರಾಜ್ಯ ಸರ್ಕಾರವು ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಪ್ರವಾಹದ (flood) ಅಪಾಯ ಇರುವ ಹತ್ತೊಂಬತ್ತು ಜಿಲ್ಲೆಗಳ ಸುಮಾರು 1,950 ಹಳ್ಳಿಗಳನ್ನು ಗುರುತಿಸಲಾಗಿದ್ದು(identified), ತೊಂದರೆಗೀಡಾಗಬಹುದಾದ ಸುಮಾರು 52 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಸರಕಾರ ಮುಂದಾಗಿದೆ. ನೆರೆ ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರುವ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ 19 ಜಿಲ್ಲೆಗಳಲ್ಲಿ (districts) ಬರುವ 1950 ಗ್ರಾಮಗಳ ಜನರನ್ನು ಸ್ಥಳಾಂತರಿಸಲು ನಿರ್ಧರಿಸಿದೆ ಎಂದರು.
ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆಗೆ ಶನಿವಾರ ವಿಡಿಯೋ ಕಾನ್ಫರೆನ್ಸ್ (video conference) ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಜಲಾಶಯಗಳಿಂದ ನೀರು ಬಿಡುವಾಗ ಪಕ್ಕದ ರಾಜ್ಯದ ಜತೆಗೆ ಸಮನ್ವಯ ನಡೆಸುವಂತೆ ಹೈಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೇರಳ, ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರಪ್ರದೇಶದ ಜೊತೆಗೆ ನಮ್ಮ ಅಧಿಕಾರಿಗಳು ಸತತ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.
ರೆಡ್ ಅಲರ್ಟ್(Red alert):
ಪೂರ್ವ ಸಮೀಕ್ಷೆ ಹಾಗೂ ಅಧ್ಯಯನ ವರದಿಯಂತೆ ಈ ಬಾರಿ ಭೂಕುಸಿತದ ಪ್ರದೇಶಗಳನ್ನು ಗುರುತಿಸಿ ರೆಡ್ ಅಲರ್ಟ್ ನೀಡಲಾಗಿದೆ. ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಭಾಗಶಃ ಹಾಸನ ಜಿಲ್ಲೆಯಲ್ಲಿ ಭೂಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಸಚಿವರು ಹೇಳಿದರು.
ಟಾಸ್ಕ್ ಫೋರ್ಸ್ ಸಭೆ (Taskforce meeting):
ಕೇರಳದ ವಯನಾಡು ಹಾಗೂ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಸುಮಾರು 17 ಸಾವಿರ ಕ್ಯೂಸೆಕ್ಸ್ ನೀರು ಬರುವ ಸಾಧ್ಯತೆ ಇದೆ. ಹದಿನೈದು ದಿನಕ್ಕೊಮ್ಮೆ ಎಸ್‌ಡಿಆರ್‌ಎಫ್ ಸಭೆ ನಡೆಸಲಾಗುವುದು. ನೀರು ಬಿಡುವುದಕ್ಕೆ ಒಂದು ವಾರ ಮುಂಚಿತವಾಗಿಯೇ ಮಾಹಿತಿ ನೀಡುವಂತೆ ಆಯಾ ರಾಜ್ಯಗಳಿಗೆ ಮನವಿ ಮಾಡಿದ್ದೇವೆ.
ಬಹುಪಯೋಗಿ ಕಟ್ಟದ (Multi-utility infrastructure):
1951 ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಶಾಲೆಗಳಲ್ಲಿ ಶಾಶ್ವತವಾಗಿ ಶೌಚಾಲಯ, ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಯಾದಗಿರಿ, ಕೊಡಗು, ರಾಯಚೂರು, ಉಡುಪಿ ಕಾರವಾರದಲ್ಲಿ ಬಹುಪಯೋಗಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದ್ದು, ಪ್ರವಾಹ ಹಾಗೂ ಕೋವಿಡ್ ಪರಿಸ್ಥಿತಿ ನಿರ್ವಹಣೆಗೂ ಇದನ್ನು ಬಳಸಿಕೊಳ್ಳಲಾಗುತ್ತದೆ.