News

ಕಬ್ಬಿನ ಕನಿಷ್ಠ ಖರೀದಿ ದರ 5 ರೂ. ಹೆಚ್ಚಳ: ರೈತರಿಗೆ ಕೇಂದ್ರ ಸರಕಾರದಿಂದ ಕೊಡುಗೆ

26 August, 2021 4:30 PM IST By:
sugercane

ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಾಲಿಗೆ ನೀಡುವ ಕನಿಷ್ಟ ದರವನ್ನು ಕೇಂದ್ರ ಸರ್ಕಾರ 5 ರೂಪಾಯಿಗೆ ಹೆಚ್ಚಿಸಿದ್ದು, 2021-22ನೇ ಸಾಲಿನಲ್ಲಿ ಪ್ರತಿ ಕ್ವಿಂಟಾಲಿಗೆ 290 ರೂಪಾಯಿಯಂತೆ ರೈತರಿಂದ ಖರೀದಿಸಬೇಕೆಂದು ತಿಳಿಸಿದೆ.

ಇದು ಇದುವರೆಗಿನ ಗರಿಷ್ಠ ಬೆಲೆಯಾಗಿದ್ದು,  ಇಧರಿಂದಾಗಿ 5 ಕೋಟಿ ಕಬ್ಬು ಬೆಳೆಯುವ ರೈತರಿಗೆ ಅನುಕೂಲವಾಗಲಿದೆ. ಆದರೆ ಈ ನಿರ್ಧಾರದಿಂದಾಗಿ ಸಕ್ಕರೆ ಮಾರಾಟ ದರದಲ್ಲಿ ತಕ್ಷಣದಲ್ಲಿ ಯಾವುದೇ ಏರಿಕೆ ಆಗುವುದಿಲ್ಲ. ಏಕೆಂದರೆ ಕನಿಷ್ಟ ಮಾರಾಟ ದರ (ಎಂಎಸ್ಪಿ) ಹೆಚ್ಚಳ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ವರ್ಷದ ಅಕ್ಟೋಬರ್‌ನಿಂದ ಅನ್ವಯವಾಗುವಂತೆ ಕಾರ್ಖಾನೆಗಳು ‍ಪ್ರತಿ ಕ್ವಿಂಟಲ್‌ಗೆ ಕನಿಷ್ಠ ಖರೀದಿ ದರ 290 ರೂ. ಪಾವತಿಸಬೇಕಿದೆ.

ಈ ಬಗ್ಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಶ್‌ ಗೋಯಲ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 2021-22ನೇ ಸಾಲಿಗೆ ಅನ್ವಯವಾಗುವಂತೆ 'ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ' (ಎಫ್‌ಆರ್‌ಪಿ) ಹೆಚ್ಚಿಸಲು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಕೇಂದ್ರ ಸಚಿವ ಸಂಪುಟ ಸಮಿತಿ ಸಭೆಯು ಬುಧವಾರ ಒಪ್ಪಿಗೆ ನೀಡಿದೆ.

ಕಳೆದ ವರ್ಷ ಕೇಂದ್ರವು ಪ್ರತಿ ಕ್ವಿಂಟಾಲ್‌ ಕಬ್ಬಿಗೆ 285 ರೂ. ಎಫ್‌ಆರ್‌ಪಿ ನಿಗದಿ ಮಾಡಿತ್ತು. ಕಬ್ಬಿನಿಂದ ಉತ್ಪಾದನೆ ಆಗುವ ಸಕ್ಕರೆ ಪ್ರಮಾಣವು ಶೇ.10ರಷ್ಟಿದ್ದರೆ 290 ರೂ. ಎಫ್‌ಆರ್‌ಪಿ ಸಿಗಲಿದೆ. ಸಕ್ಕರೆ ಉತ್ಪಾದನೆ ಪ್ರಮಾಣವು ಶೇ.10ಕ್ಕಿಂತ ಜಾಸ್ತಿ ಇದ್ದರೆ, ಶೇ. 0.1ರಷ್ಟು ಪ್ರತಿ ಹೆಚ್ಚುವರಿ ಕ್ವಿಂಟಾಲ್‌ಗೆ ಹೆಚ್ಚುವರಿಯಾಗಿ 2.90 ರೂ.ಗಳನ್ನು ಕಾರ್ಖಾನೆಗಳು ಪಾವತಿಸಬೇಕಿದೆ. ಸಕ್ಕರೆ ಸಿಗುವ ಪ್ರಮಾಣ ಶೇ.10ಕ್ಕಿಂತ ಕಡಿಮೆ ಇದ್ದರೆ, ಪ್ರತಿ ಶೇ.0.1ರಷ್ಟು ಕಡಿಮೆ ಪ್ರಮಾಣಕ್ಕೆ ಎಫ್‌ಆರ್‌ಪಿಯಲ್ಲಿ 2.90 ರೂಪಾಯಿ ಕಡಿತ ಕೂಡ ಆಗಲಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಭೆಯ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಉತ್ಪಾದನಾ ವೆಚ್ಚವನ್ನು ಕಳೆದು ರೈತರಿಗೆ ಲಾಭವನ್ನು ಕಲ್ಪಿಸಲು ನ್ಯಾಯಯುತ ಮತ್ತು ಸಂಭಾವನೆಯ ಬೆಲೆಯನ್ನು ಪ್ರತಿ ಕ್ವಿಂಟಾಲಿಗೆ 290 ರೂಪಾಯಿ ನಿಗದಿಪಡಿಸಲಾಗಿದೆ.

2020-21ರ ಕಬ್ಬು  ಹಂಗಾಮಿನಲ್ಲಿ ದೇಶದಾದ್ಯಂತ ಸಕ್ಕರೆ ಕಾರ್ಖಾನೆಗಳು 91,000 ಕೋಟಿ ರೂಪಾಯಿ ಮೌಲ್ಯದ 2976 ಲಕ್ಷ ಟನ್ ಕಬ್ಬು ಖರೀದಿಸಿವೆ. ಇದೊಂದು ಸಾರ್ವಕಾಲಿಕ ದಾಖಲೆಯ ಖರೀದಿಯಾಗಿದೆ. ಕನಿಷ್ಟ ಬೆಂಬಲ ಬೆಲೆಗೆ ಭತ್ತ ಖರೀದಿಯ ನಂತರ ಎರಡನೇ ಸ್ಥಾನದಲ್ಲಿದೆ. 20021-22ರ ಕಬ್ಬು ಇಳುವರಿಯಲ್ಲಿ ಏರಿಕೆಯಾಗುವ ನಿರೀಕ್ಷೆಯಿದ್ದು ಕಾರ್ಖಾನೆಗಳು 3088 ಲಕ್ಷ ಟನ್ ಖರೀದಿಸುವ ಸಂಭವವಿದೆ.ರೈತಪರ ಕ್ರಮಗಳನ್ನು ಅನುಸರಿಸುತ್ತಿರುವ ಸರ್ಕಾರ, ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿಯಾಗುವುದನ್ನು ಖಾತ್ರಿ ಪಡಿಸಲಿವೆ.