News

ಸಹಕಾರಿ ಬ್ಯಾಂಕಿಗೆ ಆರ್‌ಬಿಐ ಅಂಕುಶ-1540 ಬ್ಯಾಂಕ್ ಆರ್‌ಬಿಐ ಸುಪರ್ದಿಗೆ

25 June, 2020 4:54 PM IST By:

ನಗರ ಸಹಕಾರಿ ಬ್ಯಾಂಕ್ ಹಾಗೂ ಬಹುರಾಜ್ಯ ಸಹಕಾರಿ ಬ್ಯಾಂಕುಗಳನ್ನು ಆರ್‌ಬಿಐ ಮೇಲ್ವಿಚಾರಣೆ ಅಡಿಗೆ ತರುವ ಸುಗ್ರಿವಾಜ್ಞೆಗೆ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತಬಿದ್ದ ಕೂಡಲೇ ಇದು ಜಾರಿಯಾಗಲಿದೆ.

ಕರ್ನಾಟಕದಲ್ಲಿ ಒಟ್ಟು 261 ನಾನ್‌ ಶೆಡ್ಯೂಲ್ಡ್‌ ನಗರ ಸಹಕಾರ ಬ್ಯಾಂಕ್‌ಗಳು ಇದ್ದು, ಇವುಗಳೂ ಸೇರಿದಂತೆ ದೇಶದ ಸಹಕಾರ ಬ್ಯಾಂಕ್‌ಗಳ ಸಂಪೂರ್ಣ ಮೇಲುಸ್ತುವಾರಿ ಆರ್‌ಬಿಐ  ವ್ಯಾಪ್ತಿಗೆ ಬರಲಿದೆ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಹಲವು ರಾಜ್ಯಗಳಲ್ಲಿ ವಹಿವಾಟು ನಡೆಸುತ್ತಿರುವ ಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಕೋ ಆಪರೇಟಿವ್‌ ಬ್ಯಾಂಕ್‌ನಲ್ಲಿ (ಪಿಎಂಸಿ) ಹಗರಣ ನಡೆದ ನಂತರ ಸರಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ. 1,482 ನಗರ ಸಹಕಾರ ಬ್ಯಾಂಕ್‌ಗಳು ಮತ್ತು 58 ಅಂತಾರಾಜ್ಯ ಸಹಕಾರ ಬ್ಯಾಂಕ್‌ಗಳು ಇನ್ನೂ ಮುಂದೆ ಆರ್‌ಬಿಐ ವ್ಯಾಪ್ತಿಗೆ ಬರಲಿವೆ. ಒಟ್ಟು 1,540 ಸಹಕಾರ ಬ್ಯಾಂಕ್‌ಗಳು ಆರ್‌ಬಿಐ ಉಸ್ತುವಾರಿಗೆ ಒಳಪಡಲಿವೆ. ಈ ಬ್ಯಾಂಕ್‌ಗಳಲ್ಲಿ 8.6 ಕೋಟಿ ಠೇವಣಿದಾರರು ಇದ್ದು, ಅವರ 4.84 ಲಕ್ಷ ಕೋಟಿ ರೂ. ಹಣ ಸುರಕ್ಷಿತವಾಗಿರಲಿದೆ'' ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದರು.

ರಾಜ್ಯದಲ್ಲಿ ನಬಾರ್ಡ್‌ ವ್ಯಾಪ್ತಿಯಲ್ಲಿರುವ ಡಿಸಿಸಿ ಬ್ಯಾಂಕ್‌ಗಳು ಹಾಗೂ ಅಪೆಕ್ಸ್‌ ಬ್ಯಾಂಕ್‌ ಇದೆ. ಇವುಗಳು ಕೃಷಿ ಸಾಲವನ್ನು ನೀಡುತ್ತವೆ. ಈ ಬ್ಯಾಂಕ್‌ಗಳನ್ನು ಆರ್‌ಬಿಐ ಪರವಾಗಿ ನಬಾರ್ಡ್‌ ಮೇಲುಸ್ತುವಾರಿ ವಹಿಸಿಕೊಳ್ಳುತ್ತವೆ.

ದುರಾಡಳಿತ, ಭ್ರಷ್ಚಾಚಾರ, ವಸೂಲಾಗದ ಸಾಲಗಳಿಂದ ಬಹುತೇಕ ಸಹಕಾರಿ ಬ್ಯಾಂಕುಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಠೇವಣಿ ಇಟ್ಟಿರುವ ಗ್ರಾಹಕರು ಪರದಾಡುವಂತಾಗಿದೆ. ಇದಕ್ಕೆ ಅಂತ್ಯ ಕಾಣಿಸುವ ಉದ್ದೇಶವನ್ನು ಈ ಸುಗ್ರೀವಾಜ್ಞೆ ಹೊಂದಿದೆ.

ಯಾರಿಗೆ ಅನ್ವಯವಿಲ್ಲ:

ಗ್ರಾಮೀಣ ಸಹಕಾರ ಬ್ಯಾಂಕ್‌ಗಳು ವ್ಯಾಪ್ತಿಗೆ ಬರುವುದಿಲ್ಲ.

 ನಬಾರ್ಡ್‌ ವ್ಯಾಪ್ತಿಯಲ್ಲಿರುವ ಡಿಸಿಸಿ ಮತ್ತು ಅಪೆಕ್ಸ್‌ ಬ್ಯಾಂಕ್‌ಗಳನ್ನು ಆರ್‌ಬಿಐ ಪರವಾಗಿ ನಬಾರ್ಡ್‌ ನೋಡಿಕೊಳ್ಳುತ್ತದೆ.