News

ರೈತರೇ ಹುಷಾರ್!..ಬಿತ್ತನೆ ಬೀಜ ನಿಗೂಢ ಪಾರ್ಸೆಲ್ ಬಗ್ಗೆ ಎಚ್ಚರ

10 August, 2020 2:43 PM IST By:

ಕೊರೋನಾದಿಂದ ದೇಶವೇ ತತ್ತರಿಸಿಹೋಗಿದೆ. ಇಂತಹ ಸಂದರ್ಭದಲ್ಲಿ  ಬಿತ್ತನೆ ಬೀಜಗಳನ್ನು ಒಳಗೊಂಡ ನಿಗೂಢ (suspicious seed) ಪಾರ್ಸೆಲ್‌ಗಳ ಬಗ್ಗೆ ಎಚ್ಚರ ವಹಿಸುವಂತೆ ಕೃಷಿ ಸಚಿವಾಲಯ ಎಚ್ಚರಿಕೆ ನೀಡಿದೆ.

ನಿಗೂಢ ಮೂಲಗಳಿಂದ ಭಾರತಕ್ಕೆ ಸಾಗಾಣೆ ಆಗುತ್ತಿರುವ ಬೀಜಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ನಿಗೂಢ ಪಾರ್ಸೆಲ್‌ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ, ಕೃಷಿ ವಿ.ವಿ., ಐಸಿಎಆರ್, ಸಂಶೋಧನಾ ಕೇಂದ್ರಗಳಿಗೆ ಹಾಗೂ ಬೀಜೋತ್ಪಾದನಾ ಸಂಘ–ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಇಂತಹ ಸಂಶಯಾಸ್ಪದ ಪಾರ್ಸೆಲ್‌ಗಳು (Parcel) ತಲುಪಿರುವ ಬಗ್ಗೆ ವರದಿಗಳು ಬಂದಿವೆ. ಪರಿಸರ, ಕೃಷಿ ವ್ಯವಸ್ಥೆಗೆ ಹಾನಿಯನ್ನುಂಟು ಮಾಡಬಹುದಾದ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ರೋಗಕಾರಕಗಳನ್ನು ಈ ಪಾರ್ಸೆಲ್‌ಗಳ ಮೂಲಕ ಹರಡುವ ಯತ್ನ ನಡೆಯುತ್ತಿದೆ ಎಂದು ಸಚಿವಾಲಯ ಹೇಳಿದೆ.

ಸರಕಾರದ ಅಧಿಸೂಚನೆಗೆ ಪ್ರತಿಕ್ರಿಯೆ ನೀಡಿರುವ ಫೆಡರೇಶನ್ ಆಫ್ ಸೀಡ್ ಇಂಡಸ್ಟ್ರಿ ಆಫ್ ಇಂಡಿಯಾ, ಈ ರಹಸ್ಯ ಬೀಜ ಪ್ಯಾಕೇಟ್ ಗಳು ಭಾರತಕ್ಕೆ ಆಗಮಿಸುತ್ತಿರುವುದು ಆತಂಕಕಾರಿ ಆಗಿದ್ದು ಇವು ಕೆಟ್ಟ ಜಾತಿಯ ಪ್ರಭೇದ ಅಥವಾ ಕಳೆ ಆಗಿರಬಹುದು ಎಂದು ತಿಳಿಸಿದೆ.
ಭವಿಷ್ಯದಲ್ಲಿ ಇವುಗಳನ್ನು ನಿಯಂತ್ರಿಸಲು ಭಾರಿ ವೆಚ್ಚಗಳನ್ನು ಭರಿಸುವುದಕ್ಕಿಂತ ಮೊದಲೇ ಈ ಬೀಜಗಳ ಬಗ್ಗೆ ನಿಗಾವಹಿಸಿ ಪೂರ್ವಭಾವಿಯಾಗಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಉತ್ತಮ ಎಂದು ಹೇಳಿದೆ.