News

ರೈತರ ಹಿತರಕ್ಷಣೆಗಾಗಿ ರಸಗೊಬ್ಬರ ದರ ಏರಿಕೆ ತಡೆಯಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ-ಡಿ.ವಿ. ಸದಾನಂದಗೌಡ

10 April, 2021 9:25 PM IST By:
Sadanand Gowda

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಹೆಚ್ಚಾಗುತ್ತಿದ್ದರಿಂದ ದೇಶೀಯ ಮಾರುಕಟ್ಟೆಯಲ್ಲೂ ರಾಸಾಯನಿಕ ಗೊಬ್ಬರದ ಧಾರಣೆ ಏರುತ್ತಿದೆ. ರೈತರ ಹಿತರಕ್ಷಣೆಗಾಗಿ ಧಾರಣೆ ಸ್ಥಿರತೆ ಸಾಧಿಸಲು ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ಅವರು ಶುಕ್ರವಾರ ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಈಗಾಗಲೇ ಕಂಪೆನಿಗಳಲ್ಲಿರುವ  ಹಳೆಯ ದಾಸ್ತಾನುಗಳಿಗೆ ಹಳೆ ದರವನ್ನೇ ವಿಧಿಸುವಂತೆ ಸೂಚಿಸಲಾಗಿದೆ  ದರ ಏರಿಕೆ ತಹಬಂದಿಗೆ ಬಾರದಿದ್ದರೆ ಅನಿವಾರ್ಯತೆ ಬಂದರೆ ಸಬ್ಸಿಡಿ ಹೆಚ್ಚಳದ ಬಗೆಗೂ ಗಮನಹರಿಸಲಾಗುವುದು. ಈಗಾಗಲೇ ರಸಗೊಬ್ಬರ ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಡಿಪಿಎ, ಎನ್‌ಪಿಕೆ ಮುಂತಾದ ವರ್ಗದ ರಾಸಾಯನಿಕ ರಸಗೊಬ್ಬರಗಳ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ. ನಮ್ಮ ದೇಶದಲ್ಲಿ ಈಗಲೂ ಶೇ.20 ರಷ್ಟು ರಸಗೊಬ್ಬರಕ್ಕೆ ನಾವು ವಿದೇಶಗಳನ್ನು ಅವಲಂಬಿಸಿದ್ದೇವೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾದ ಧಾರಣೆ ಹೆಚ್ಚಳ ಇಲ್ಲಿಗೂ ಬಾಧಿಸಿದೆ. ಇದರಿಂದ ರೈತರ ಹಿತಕ್ಕೆ ಧಕ್ಕೆ ಆಗದಂತೆ ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಪರಿಸ್ಥಿತಿ ಮುಂದಿನ ದಿನಗಳಲ್ಲಿ ಸುಧಾರಿಸಲಿದೆ ಎಂಬ ವಿಶ್ವಾಸವಿದೆ. ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಕ್ಕೆ ಮೆಟ್ರಿಕ್ ಟನ್‌ನಲ್ಲಿ 380 ಡಾಲರ್ ಕಡಿಮೆಯಾಗಿದೆ. ಅಮೆರಿಕಾ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹಾಲಿ ಹಂಗಾಮಿನ ಕೃಷಿ ಚಟುವಟಿಕೆ ಮುಕ್ತಾಯಗೊಳ್ಳುತ್ತಿದೆ. ಇದರ ಬೆನ್ನಲ್ಲೇ ರಸಗೊಬ್ಬರದ ಬೆಲೆಯೂ ಕಡಿಮೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಸಗೊಬ್ಬರದ ದರ ಹೆಚ್ಚಿಸದಂತೆ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ

ಯೂರಿಯೇತರ ರಸಗೊಬ್ಬರ ಗರಿಷ್ಠ ಮಾರಾಟ ದರ (ಎಂಆರ್.ಪಿ) ವನ್ನು ಹೆಚ್ಚಿಸಬಾರದು. ಹಳೆಯದರಲ್ಲೇ ಮಾರಾಟ ಮಾಡಬೇಕೆಂದು ಕೇಂದ್ರ ಸರ್ಕಾರ ಶುಕ್ರವಾರ ರಸಗೊಬ್ಬರ ಕಂಪನಿಗಳಿಗೆ ಸೂಚಿಸಿದೆ.

ಕ್ರಿಭ್ಕೋ, ಎಂಸಿಎಫ್ಎಲ್, ಜುವಾರಿ ಆಗ್ರೋ ಕೆಮಿಕಲ್ಸ್, ಪರದೀಪ್ ಪೋಸ್ಫೇಟ್ ಮುಂತಾದ ಕಂಪನಿಗಳವರು ಡಿಎಪಿಯ ಚಿಲ್ಲರೆ ಮಾರಾಟ ದರವನ್ನು ಏಪ್ರೀಲ್ 1 ರಿಂದ ಬ್ಯಾಗಿಗೆ 1700 ರುಪಾಯಿ ದರ ನಿಗದಿಸಿದೆ.