News

ಆರು ಜಿಲ್ಲೆಗಳಿಗೆ ನೂತನ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ

03 May, 2021 9:03 AM IST By:
CM B.S yadiyurappa

ಬೆಳಗಾವಿ, ಬಾಗಲಕೋಟೆ ಸೇರಿದಂತೆ ರಾಜ್ಯದ ಆರು ಜಿಲ್ಲೆಗಳಿಗೆ ನೂತನ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ, ಬಾಗಲಕೋಟೆ, ಬೀದರ್, ಕೋಲಾರ, ಕಲಬುರಗಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಲಾಗಿದೆ.

ಅದರಂತೆ ಬೆಳಗಾವಿ ಜಿಲ್ಲೆಗೆ ಡಿಸಿಎಂ ಗೋವಿಂದ ಕಾರಜೋಳರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಗೋವಿಂದ ಕಾರಜೋಳಗೆ ಈ ಮೊದಲು ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಹೊಣೆ ನೀಡಲಾಗಿತ್ತು. ಇದೀಗ ಅವರ ಉಸ್ತುವಾರಿ ಹೊಣೆಯನ್ನು ಬದಲಾಯಿಸಿ ಬೆಳಗಾವಿ ಉಸ್ತುವಾರಿ ನೀಡಲಾಗಿದೆ. ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಬೆಳಗಾವಿಗೆ ಜಿಲ್ಲಾ ಉಸ್ತುವಾರಿ ಇರಲಿಲ್ಲ.

ಇದೀಗ ಉಮೇಶ್‌ ಕತ್ತಿ ಅವರಿಗೆ ಬಾಗಲಕೋಟೆ ಹಾಗೂ ಮುರುಗೇಶ ನಿರಾಣಿ ಅವರಿಗೆ ಕಲಬುರ್ಗಿ ಉಸ್ತುವಾರಿಯನ್ನು ಸಿಎಂ ಬಿ.ಎಸ್‌.ಯಡಿಯೂರಪ್ಪ ವಹಿಸಿದ್ದಾರೆ. ಅರವಿಂದ ಲಿಂಬಾವಳಿ ಅವರಿಗೆ ಬೀದರ್‌ ಉಸ್ತುವಾರಿ ನೀಡಿದ್ದರಿಂದ ಸಚಿವ ಪ್ರಭು ಚೌವ್ಹಾಣ್‌ ಬಿಡುಗಡೆ ಹೊಂದಿದಂತಾಗಿದೆ.

ಸಚಿವರನ್ನು ಸ್ವಂತ ಜಿಲ್ಲೆಯ ಉಸ್ತುವಾರಿಯಿಂದ ಮುಕ್ತಗೊಳಿಸಿ ಬೇರೆ ಜಿಲ್ಲೆ ಉಸ್ತುವಾರಿಗೆ ನೇಮಿಸುವ ಸುಳಿವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಹಿಂದೆಯೇ ನೀಡಿದ್ದರು. ಉಪ ಚುನಾವಣೆ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದರು. ಹೀಗಾಗಿ ಉಮೇಶ್‌ ಕತ್ತಿಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ನೀಡಲಾಗಿದ್ದು, ಬೀದರ್‌ಗೆ ಅರವಿಂದ ಲಿಂಬಾವಳಿ, ಎಸ್‌ ಅಂಗಾರಗೆ ಚಿಕ್ಕಮಗಳೂರು, ಎಂಟಿಬಿ ನಾಗರಾಜ್ ಕೋಲಾರ ಜಿಲ್ಲೆ ಮತ್ತು ಮುರುಗೇಶ್ ನಿರಾಣಿಗೆ ಕಲಬುರಗಿ ಜಿಲ್ಲೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ..

ಕೊರೊನಾ ಸೋಂಕು ಜಿಲ್ಲೆಗಳಲ್ಲಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಸಿಎಂ ಯಡಿಯೂರಪ್ಪ ಹೊಸ ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಉಪ ಚುನಾವಣೆ ಫಲಿತಾಂಶದ ಬಳಿಕ ಉಸ್ತುವಾರಿ ಸಚಿವರ ಬದಲಾವಣೆ ಮಾಡಲಾಗುವುದು ಎಂದು ಸಿಎಂ ಈ ಮೊದಲು ತಿಳಿಸಿದ್ದರು. ಬೆಳಗಾವಿಯಲ್ಲಿ ಅನ್ಯ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ನೀಡಿರುವುದಕ್ಕೆ ಮಾಜಿ ಸಂಸದ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ನಾಲ್ಕು ಜನ ಸರಕಾರದ ಸಂಪುಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಪದೇ ಪದೆ ಜಿಲ್ಲೆಯವರನ್ನು ಬಿಟ್ಟು ಬೇರೆಯವರಿಗೆ ಉಸ್ತುವಾರಿ ನೀಡುತ್ತಿರುವುದರಿಂದ ಈಗಿರುವ ಸಚಿವರ ಬಗೆಗೆ ಜನರಲ್ಲಿ ತಪ್ಪು ಕಲ್ಪನೆ ಮೂಡುತ್ತಿದೆ. ಅಲ್ಲದೆ, ನಮ್ಮ ಜಿಲ್ಲೆಯ ಸಮಸ್ಯೆಗಳ ಬಗೆಗೆ ಬೇರೆ ಜಿಲ್ಲೆಯವರಿಗೆ ಗೊತ್ತಿರುವುದಿಲ್ಲ. ಸರಕಾರದ ಯೋಜನೆಗಳ ಜಾರಿಗೆ ತೊಂದರೆಯಾಗುತ್ತದೆ. ಜತೆಗೆ ಪಕ್ಷ ಸಂಘಟನೆಗೂ ಹೊಡೆತ ಬೀಳುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳು ಜಿಲ್ಲೆಯ ಯಾರಾದರೊಬ್ಬರಿಗೆ ಜಿಲ್ಲಾ ಉಸ್ತುವಾರಿ ಹೊಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.