News

ಈರುಳ್ಳಿ ಬೆಳೆಗಾರರಿಗೆ ಗುಡ್ ನ್ಯೂಸ್- ಈರುಳ್ಳಿ ರಫ್ತಿಗೆ ಕೇಂದ್ರ ಒಪ್ಪಿಗೆ

10 October, 2020 6:28 AM IST By:

ಕರ್ನಾಟಕ ಮತ್ತು ಆಂಧ್ರಪ್ರದೇಶದ ರೈತರ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರವು  ಬೆಂಗಳೂರಿನ ರೋಸ್ ಈರುಳ್ಳಿ ಹಾಗೂ ಕೃಷ್ಣಪುರಂ ಈರುಳ್ಳಿ ರಫ್ತು ಮಾಡಲು ಕೊನೆಗೂ ಒಪ್ಪಿಗೆ ನೀಡಿದೆ.

ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಬೆಲೆ ನಿಯಂತ್ರಿಸುವುದಕ್ಕಾಗಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 14ರಂದು ಎಲ್ಲಾ ವಿಧದ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧಿಸಿತ್ತು. ಇದರಿಂದಾಗಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ರೈತರು ಕೇಂದ್ರ ಸರ್ಕಾರದ ಮೇಲೆ ರಪ್ತು ಮಾಡಲು ಒತ್ತಾಯ ಮಾಡಿದ್ದರು. ರೈತರ ಒತ್ತಾಯಕ್ಕೆ ಮಣಿದ ಕೇಂದ್ರ ಸರ್ಕಾರವು  ರಫ್ತು ನಿಷೇಧವನ್ನು ಸಡಿಲಗೊಳಿಸಿ ಕೆಲವು ಷರತ್ತುಗಳೊಂದಿಗೆ ಬೆಂಗಳೂರು ರೋಸ್‌ ಈರುಳ್ಳಿ ಮತ್ತು ಕೃಷ್ಣಪುರಂ ತಳಿಯ ಈರುಳ್ಳಿಯನ್ನು ತಲಾ 10 ಸಾವಿರ ಮೆಟ್ರಿಕ್ ಟನ್ ನಂತೆ ರಪ್ತು ಮಾಡಲು ಶುಕ್ರವಾರ ಅನುಮತಿ ನೀಡಿದೆ.

ಎರಡು ತಳಿಗಳ ಈರುಳ್ಳಿ ಚೆನ್ನೈ ಬಂದರು ಮೂಲಕ ರಫ್ತಾಗುತ್ತದೆ. ಅದಕ್ಕೂ ಮುನ್ನ ಕರ್ನಾಟಕದ ತೋಟಗಾರಿಕಾ ಆಯುಕ್ತರಿಂದ ಬೆಂಗಳೂರು ರೋಸ್‌ ತಳಿಗೆ ಹಾಗೂ ಆಂಧ್ರಪ್ರದೇಶದ ಕಡಪದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಂದ ರಫ್ತು ಮಾಡುವುದಕ್ಕೆ ಅನುಮತಿ ಪತ್ರ ಪಡೆಯಬೇಕು.. ಈ ಎರಡು ತಳಿಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಿದ್ದರೂ, ಪೂರ್ವ ದೇಶಗಳಲ್ಲಿ ಈ ತಳಿಯ ಈರುಳ್ಳಿಗೆ ಬಲು ಬೇಡಿಕೆ ಇದೆ.

ಕೇಂದ್ರ ಸರ್ಕಾರ ಈರುಳ್ಳಿ ರಪ್ತಿನ ಮೇಲೆ ನಿಷೇಧ ಹೇರುತ್ತಿದ್ದಂತೆ,  ಕರ್ನಾಟಕದ ಬಿಜೆಪಿ ನಾಯಕರು ವಾಣಿಜ್ಯ ಸಚಿವ ಪಿಯೂಷ ಗೋಯಲ್ ಅವರನ್ನು ಭೇಟಿ ಮಾಡಿ ರಪ್ತು ತೆರವುಗೊಳಿಸಬೇಕೆಂದು ಒತ್ತಾಯ ಮಾಡಿದ್ದರು. ಕೊನೆಗೆ ಕೇಂದ್ರ ಸರ್ಕಾರ ರಪ್ತು ಮಾಡಲು ಅನುಮಿತಿ ನೀಡಿದೆ.

 ಆಗ್ನೇಯ ಏಷ್ಯಾ ರಾಷ್ಟ್ರಗಳಾದ ಮಲೇಷ್ಯಾ, ಸಿಂಗಾಪುರ, ಥಾಯ್ಲೆಂಡ್ ಮತ್ತು ತೈವಾನ್ ಗಳಲ್ಲಿ ಈ ತಳಿಗೆ ಬೇಡಿಕೆ ಇದೆ. ಸಾಮಾನ್ಯವಾಗಿ ಕೃಷ್ಣಪುರಂ ಈರುಳ್ಳಿಯನ್ನು ಭಾರತದಲ್ಲಿ ಬಳಕೆಗಾಗಿ ಬಳಸುವುದಿಲ್ಲ. ಥಾಯ್ಲ್ಯಾಂಡ್, ಹಾಂಕಾಂಗ್, ಮಲೇಷ್ಯಾ, ಶ್ರೀಲಂಕಾ ಮತ್ತು ಸಿಂಗಾಪುರದಿಂದ ಈರುಳ್ಳಿಯನ್ನು ಆಮದು ಮಾಡಿಕೊ೦ಡಿದ್ದಾರೆ. ಇತರ ತಳಿಗಳ ಈರುಳ್ಳಿ ರಫ್ತು ನಿಷೇಧಿಸಲಾಗಿದೆ.