News

ಈರುಳ್ಳಿ ಬೆಲೆ ಏರಿಕೆ ತಡೆಗೆ ಆಮದು ನಿರ್ಬಂಧ ಸಡಿಲಿಸಿದ ಕೇಂದ್ರ

22 October, 2020 9:15 AM IST By:

ಕಳೆದ 10 ದಿನಗಳಿಂದ ಈರುಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಕೇಂದ್ರ ಸರ್ಕಾರ ವಿದೇಶಗಳಿಂದ ಈರುಳ್ಳಿ ಆಮದು ಮಾಡಿಕೊಳ್ಳುವ ನಿಯಮಗಳನ್ನು ಬುಧವಾರ ಸಡಿಲಿಸಿದೆ.

ಈ ಕುರಿತು ಬುಧವಾರ ಹೇಳಿಕೆ ಬಿಡುಗಡೆ ಮಾಡಿರುವ ಗ್ರಾಹಕ ವ್ಯವಹಾರಗಳ ಸಚಿವಾಲಯ, ವಿದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳುವುದಕ್ಕೆ ಡಿ. 15 ರೊಳಗೆ ಅನ್ವಯಿಸುವಂತೆ ಹಲವಾರು ಷರತ್ತುಗಳನ್ನು ಸಡಿಲಿಸಿದೆ. ಇದರಿಂದ ದೇಸೀ ಮಾರುಕಟ್ಟೆಗೆ ಹೆಚ್ಚು ಈರುಳ್ಳಿ ಪೂರೈಕೆಯಾಗಿ ಬೆಲೆ ಇಳಿಮುಖವಾಗಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.

ಆಗಸ್ಟ್‌ ಅಂತ್ಯದಿಂದಲೂ ಈರುಳ್ಳಿ ಬೆಲೆಯಲ್ಲಿ ನಿಧಾನಗತಿ ಏರಿಕೆ ಕಂಡುಬಂದಿತ್ತು. ಆದರೆ ಇತ್ತೀಚೆಗೆ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದರಿಂದ ಗ್ರಾಹಕರು ಜೇಬು ಖಾಲಿಯಾಗುತ್ತಿತ್ತು. ಹತ್ತೇ ದಿನಗಳಲ್ಲಿ ಈರುಳ್ಳಿ ಬೆಲೆ ದುಪ್ಪಟ್ಟಾಗಿತ್ತು. 30 ರೂಪಾಯಿ ಮಾರಾಟವಾಗುತ್ತಿದ್ದ ಈರುಳ್ಳಿ ಕೇವಲ 10 ದಿನಗಳಲ್ಲಿ 60 ರೂಪಾಯಿಗೆ ತಲುಪಿತ್ತು. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದನ್ನು ಗಮನಿಸಿದ  ಕೇದ್ರ ಸರ್ಕಾರ ಇರಾನ್‌, ಈಜಿಪ್ಟನಿಂದ ಈರುಳ್ಳಿ ಆಮದು ಮಾಡಿಕೊಂಡು ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ತಣಿಸಲು ಆಹಾರ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯ ಮುಂದಾಗಿದೆ.

ಸದ್ಯದಲ್ಲೇ ಸುಮಾರು 37 ಲಕ್ಷ ಟನ್ ನಷ್ಟು ಖಾರಿಫ್ ಈರುಳ್ಳಿ ಬೆಳೆ ಮಾರುಕಟ್ಟೆಗೆ ಬರಲಾರಂಭಿಸುತ್ತದೆ. ಅದರಿಂದಲೂ ಬೆಲೆ ಇಳಿಕೆಯಾಗಲಿದೆ ಎಂದು ಹೇಳಿದೆ. ರಾಬಿ ಕಾಲದ ಬೆಳೆಯಾದ ಈರುಳ್ಳಿಯನ್ನು ಭಾರಿ ಪ್ರಮಾಣದಲ್ಲಿ ಸಂಗ್ರಹ ಕೂಡ ಮಾಡಲಾಗಿದೆ. ಆದರೆ ಅತಿವೃಷ್ಠಿಯಿಂದಾಗಿ ಈರುಳ್ಳಿ ಬೀಜಗಳು ಹಾಗೂ ಅನೇಕ ಖಾರಿಫ್‌ ಬೆಳೆಗಳು ನಾಶಗೊಂಡಿವೆ.

ಸಂಗ್ರಹವಾಗಿರುವ ಮತ್ತು ಆಮದಾಗುವ ಈರುಳ್ಳಿಯನ್ನು ಹಂತ ಹಂತವಾಗಿ ರಾಜ್ಯಗಳಲ್ಲಿನ ಬೇಡಿಕೆಗೆ ಅನುಸಾರವಾಗಿ ಸಫಲ್‌, ಕೇಂದ್ರೀಯ ಭಂಡಾರ್‌ ಮತ್ತು ಭಾರತೀಯ ರಾಷ್ಟ್ರೀಯ ಸಹಕಾರ ಗ್ರಾಹಕರ ಒಕ್ಕೂಟದ ಮೂಲಕ ಹಂಚಲಾಗುವುದು. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾರ್ಗಗಳ ಮೂಲಕ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಅಗತ್ಯ ಇರುವ ಕಡೆಗಳಿಗೆ ಪೂರೈಕೆ ಮಾಡಲಾಗುವುದು ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಸೆ.14 ರಂದು ಕೇಂದ್ರ ಸರಕಾರವು ಈರುಳ್ಳಿ ಸಮೇತ ಎಲ್ಲ ತರಕಾರಿಗಳ ಆಮದು ಮೇಲೆ ನಿರ್ಬಂಧ ಹೇರಿತ್ತು. ಆದರೆ ಕತ್ತರಿಸಿದ ಅಥವಾ ಪೌಡರ್‌ ಮಾದರಿಯಲ್ಲಿನ ಈರುಳ್ಳಿ ಆಮದಿಗೆ ಮಾತ್ರ ನಿರ್ಬಂಧ ಸಡಿಲಿಕೆ ಇತ್ತು. ಚಿಲ್ಲರೆ ಮಾರುಕಟ್ಟೆ ಬೆಲೆ ಶೇ.4 ಹೆಚ್ಚಳ ಮತ್ತು ಹೋಲ್‌ಸೇಲ್‌ ಬೆಲೆ ಶೇ. 34.5ರಷ್ಟು ಏರಿಕೆ ಕಂಡಿದ್ದರಿಂದ ಸರಕಾರ ಈ ಕ್ರಮ ಜರುಗಿಸಿತ್ತು.