News

ಮಳೆ ಹೆಚ್ಚಾಗುತ್ತಿದ್ದರಿಂದ ಪ್ರವಾಹ ತಡೆಗಟ್ಟಲು ಸರ್ಕಾರ ಸರ್ವ ಸನ್ನದವಾಗಿದೆ-ಸಿಎಂ. ಬಿಎಸ್. ಯಡಿಯೂರಪ್ಪ

11 July, 2021 10:34 PM IST By:

ರಾಜ್ಯದ ಎಲ್ಲಾ ಕಡೆ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಪ್ರವಾಹ ಉಂಟಾದರೆ  ಪ್ರವಾಹ ತಡೆಯಲು ಸರ್ಕಾರ ಸರ್ವ ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಕಲ್ಪುರ್ಗಿ ನಗರಕ್ಕೆ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಇಂದು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲೆಡೆ ನಿರೀಕ್ಷೆಗೂ ಮೀರಿದ ಮಳೆಯಾಗುತ್ತಿದೆ. ಕೆರೆಕಟ್ಟೆಗಳು, ಹಳ್ಳಕೊಳ್ಳಗಳು, ನದಿಗಳು ತುಂಬುತ್ತಿವೆ. ಅಣೆಕಟ್ಟುಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿ, ಪ್ರವಾಹ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.

ಕರಾವಳಿ ತೀರಾ ಪ್ರದೇಶ, ಮಲೆನಾಡು, ಕಲ್ಯಾಣ ಕರ್ನಾಟಕ ಸೇರಿದಂತೆ ಮತ್ತಿತರ ಕಡೆ ಉತ್ತಮ ಮಳೆಯಾಗುತ್ತಿದೆ. ಪ್ರವಾಹ ತಡೆಗಟ್ಟುವಲ್ಲೂ ಮುನ್ನೆಚ್ಚರಿಕೆ ವಹಿಸಿ ಎಂದು ಈ ಭಾಗದ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದೇನೆ. ಈ ಬಾರಿ ಮಹಾರಾಷ್ಟ್ರದಿಂದ ನಮಗೆ ಹೆಚ್ಚಿನ ನೀರು ಬಂದು ತೊಂದರೆಯಾಗುವ ಲಕ್ಷಣಗಳಿಲ್ಲ. ಮಹಾರಾಷ್ಟ್ರ ಜಲಾಶಯದಿಂದ ನೀರು ಬಿಡುವ ಮುನ್ನ ರಾಜ್ಯಕ್ಕೆ ಮಾಹಿತಿ ನೀಡಲು ಮಹಾರಾಷ್ಟ್ರ ಸರ್ಕಾರ ಒಪ್ಪಿದೆ ಎಂದರು.
ಸಚಿವ ಸಂಪುಟ ಸಭೆ ಇಲ್ಲ: ಕಲ್ಬರ್ಗಿಯಲ್ಲಿ ಸದ್ಯ ಸಚಿವ ಸಂಪುಟ ಸಭೆ ನಡೆಸಲು ಸಾಧ್ಯವಿಲ್ಲ. ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಾಗಿರುವುದರಿಂದ ಕಲ್ಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ಕಷ್ಟಸಾಧ್ಯ. ಕಲಬುರಗಿಯಲ್ಲಿ ಸಂಪುಟ ಸಭೆ ನಡೆಸಬೇಕು ಎಂಬುದು ಈ ಭಾಗದ ಜನತೆಯ ಒತ್ತಾಸೆಯಾಗಿದೆ. ಆದರೆ ಕೋವಿಡ್ ಇರುವ ಕಾರಣ ಜನರ ಸುರಕ್ಷತೆಯನ್ನು ನೋಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಸಂಪುಟ ಸಭೆ ಸಾಧ್ಯವಿಲ್ಲ. ಮುಂದೆ ನೋಡೋಣ, ಜನತೆ ತಪ್ಪು ತಿಳಿಯುವುದು ಬೇಡ ಎಂದು ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು 26.30 ಕೋಟಿ ವೆಚ್ಚದ ಬೃಹತ್ ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಮಳೆಯ ಕಾರಣಕ್ಕಾಗಿ ಭೂಮಿ ಪೂಜೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಲೋಕೋಪಯೋಗಿ ಭವನ ಲೋಕಾರ್ಪಣೆಗೊಳಿಸಿದರು. ಜತೆಗೆ ಹೀರಾಪುರ ಕ್ರಾಸ್ ಗ್ರಾಮದ ಮೇಲ್ಸೇತುವೆ, ಜೇವರ್ಗಿ ರಸ್ತೆಯ ಮೇಲ್ಸೇತುವೆ ಹಾಗೂ ಸ್ವಾಗತ ದ್ವಾರಗಳನ್ನು ಅವರು ಉದ್ಘಾಟಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಉದ್ಘಾಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು, ಕಲಬುರಗಿ ಮಹಾನಗರ ಪಾಲಿಕೆ ಖರೀದಿಸಿರುವ ಕಸ ಸಂಗ್ರಹ ವಾಹನಗಳಿಗೂ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಸಂಸದ ಡಾ. ಉಮೇಶ್ ಜಾಧವ್, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರುಗಳಾದ ಸುಭಾಷ್ ಗುತ್ತೇದಾರ್, ಬಸವರಾಜು ಮತ್ತಿಮಾಡ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ಸುನೀಲ್ ವಲ್ಯಾಪುರೆ, ಶಶಿಲ್ ನಮೋಸಿ, ಕಲ್ಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ್, ರಾಜ್ಯದ ನವೀಕರಿಸಬಹುದಾದ ಇಂಧನಗಳ ನಿಗಮದ ಅಧ್ಯಕ್ಷ ಚಂದು ಪಾಟೀಲ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್, ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಿ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ್, ಪ್ರಾದೇಶಿಕ ಆಯುಕ್ತ ಡಾ. ಎನ್.ವಿ.ಪ್ರಸಾದ್, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಂ, ಪೊಲೀಸ್ ಆಯುಕ್ತ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.