News

ರೈತರಿಗೆ ಗುಡ್ ನ್ಯೂಸ್! ರಸಗೊಬ್ಬರ ಸಬ್ಸಿಡಿ ಹಣ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಚಿಂತನೆ

15 October, 2020 6:07 AM IST By:

ರೈತರು ಖರೀದಿಸುವ ರಾಸಾಯನಿಕ ಗೊಬ್ಬರಗಳ ಸಬ್ಸಿಡಿ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನಗದು ವರ್ಗಾವಣೆ ಮಾಡುವ ಯೋಜನೆ ಸದ್ಯದಲ್ಲಿಯೇ ದೇಶಾದ್ಯಂತ ಜಾರಿಗೆ ಬರಲಿದೆ.

ಎಲ್ಪಿಜಿ ಸಬ್ಸಿಡಿ ಮಾದರಿಯಲ್ಲಿ ರಸಗೊಬ್ಬರ ಸಬ್ಸಿಡಿಯನ್ನು ರೈತರ ಖಾತೆಗೆ ನೇರವಾಗಿ ವರ್ಗಾಯಿಸುವ ಯೋಜನೆ ಇದಾಗಿದೆ. ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿ ವರ್ಗಾವಣೆ ಅಥವಾ ಎಕರೆ ಅಥವಾ ಹೆಕ್ಟೇರಿಗೆ ಇಂತಿಷ್ಟು ಹಣ ಸಬ್ಸಿಡಿ ನೀಡಬೇಕೋ ಎಂಬ ಚರ್ಚೆ ನಡೆಯುತ್ತಿರುವಾಗ ನೇರವಾಗಿ ರೈತರ ಖಾತಿಗೆ ವರ್ಗಾವಣೆ ಮಾಡುವುದು ಉತ್ತಮವೆಂದು ಹೇಳಲಾಗುತ್ತಿದೆ. ಇದರಿಂದ ಪ್ರತಿಯೊಬ್ಬ ರೈತರಿಗೆ ಯೋಜನೆಯ ಲಾಭ ಸಿಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಈ ರಸಗೊಬ್ಬರ ಸಬ್ಸಿಡಿ ನೇರ ನಗದು ವರ್ಗವಣೆ (ಡಿಬಿಟಿ) ಪದ್ಧತಿಯನ್ನು ಮೊದಲಿಗೆ 7 ಸಣ್ಣ ಪುಟ್ಟ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಎರಡನೇ ಹಂತದಲ್ಲಿ ಪಂಜಾಬ್‌, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶ ಸೇರಿದಂತೆ 12 ದೊಡ್ಡ ರಾಜ್ಯಗಳಲ್ಲಿ ಅನುಷ್ಠಾನಗೊಳ್ಳಿಸಲಾಯಿತು. ಮುಂದಿನ ಮುಂಗಾರಿನಿಂದ ದೇಶಾದ್ಯಂತ ಜಾರಿಗೆ ತರುವುದು ಸರ್ಕಾರದ ಉದ್ದೇಶವಾಗಿದೆ.

ರಸಗೊಬ್ಬರದ ಎಂ.ಆರ್.ಪಿ ದರ ಪಾವತಿಸಬೇಕು:

ಇದುವರೆಗೆ ಸಬ್ಸಿಡಿ ಮೊತ್ತವನ್ನು ಕಳೆದು ನಿಗದಿಪಡಿಸಿದ ಎಂಆರ್‌ಪಿಯನ್ನಷ್ಟೇ ಪಾವತಿಸಿ ರಸಗೊಬ್ಬರ ಖರೀದಿಸುತ್ತಿದ್ದ ರೈತರು ಇನ್ನುಮುಂದೆ ರಸಗೊಬ್ಬರ ಖರೀದಿ ವೇಳೆ ಸಂಪೂರ್ಣ ದರವನ್ನೂ ಪಾವತಿಸಬೇಕಾಗುತ್ತದೆ. ಅಲ್ಲದೆ, ರೈತ ಹೊಂದಿರುವ ಕೃಷಿ ಭೂಮಿ ಆಧರಿಸಿ ನಿರ್ಧಿಷ್ಟ ಜಮೀನಿಗೆ ಗರಿಷ್ಟ ಇಷ್ಟೇ ರಸಗೊಬ್ಬರ ನೀಡಬೇಕೆಂಬ ನಿಯಮವೂ ಜಾರಿಗೆ ಬರಲಿದೆ. ಉದಾಹರಣೆಗೆ ಒಂದು ಚೀಲ  ಬ್ಯಾಗ್‌ ಯೂರಿಯಾ ಉತ್ಪಾದನೆಗೆ ಅಂದಾಜು 1,000 ರೂ. ವೆಚ್ಚವಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ  ಅದನ್ನು 266.5 ರೂಪಾಯಿ ಮಾರಾಟ ಮಾಡಲಾಗುತ್ತಿದೆ.  ಆದರೆ ಉಳಿದ ಭಾಗವನ್ನು ಸರಕಾರ ಸಬ್ಸಿಡಿ ರೂಪದಲ್ಲಿ ಉತ್ಪಾದಕ ಸಂಸ್ಥೆಗಳಿಗೆ ನೀಡುತ್ತದೆ. ರೈತರ ಖಾತೆಗೆ ನೇರವಾಗಿ ನಗದು ವರ್ಗಾವಣೆ ನಡೆಸುವ ವ್ಯವಸ್ಥೆ ಕಾರ್ಯದರೂಪಕ್ಕೆ ಬಂದರೆ, ರೈತರು ರಸಗೊಬ್ಬರ ಖರೀದಿಸುವ ವೇಳೆ ಯೂರಿಯಾ ಚೀಲವೊಂದಕ್ಕೆ ಅಂದಾಜು ಸಾವಿರ ರೂಪಾಯಿಗಳನ್ನು ನೀಡಿ ಖರೀದಿಸಬೇಕಾಗುತ್ತದೆ.

ಯೂರಿಯಾ ಖರೀದಿಗೆ ಮಿತಿ:

ಮುಂದಿನ ದಿನಗಳಲ್ಲಿ ರೈತರ ಆಧಾರ್‌ ಸಂಖ್ಯೆಯನ್ನು ಪಿಓಎಸ್‌ ಯಂತ್ರದಲ್ಲಿ ದಾಖಲಿಸಿದಾಗ ಅವರು ಗರಿಷ್ಟ ಇಂತಿಷ್ಟು ರಸಗೊಬ್ಬರ ಖರೀದಿಸಬಹುದೆಂಬ ಮಾಹಿತಿ ಯಂತ್ರದಲ್ಲೇ ಮೂಡಿ ಬರಲಿದೆ. ಅದಕ್ಕಿಂತಲೂ ಹೆಚ್ಚಿನ ರಸಗೊಬ್ಬರವನ್ನು ಖರೀದಿಸಲು ಬಯಸಿದಲ್ಲಿ ಸಬ್ಸಿಡಿ ರಹಿತವಾಗಿ ರಸಗೊಬ್ಬರ ಖರೀದಿಸಬೇಕಾಗುತ್ತದೆ. ಸದ್ಯ ರೈತರಿಗೆ ಸಬ್ಸಿಡಿ ಸಹಿತ ರಾಸಾಯನಿಕ ರಸಗೊಬ್ಬರ ಖರೀದಿಗೆ ಯಾವ ನಿರ್ಬಂಧವೂ ಇಲ್ಲ. ರೈತರು ಸಬ್ಸಿಡಿ ಬೆಲೆಯಲ್ಲಿ ಎಷ್ಟು ಬೇಕಾದರೂ ರಸಗೊಬ್ಬರ ಖರೀದಿಸಬಹುದು. ಸಬ್ಸಿಡಿ ಮೊತ್ತವನ್ನು ನೇರವಾಗಿ ಉತ್ಪಾದಕರಿಗೆ ನೀಡಲಾಗುತ್ತದೆ.

ಸಬ್ಸಿಡಿ ವರ್ಗಾವಣೆ ಪಾರದರ್ಶಕವಾಗಲಿದೆಯೇ?

ರೈತರು ಸಬ್ಸಿಡಿ ದರದಲ್ಲಿಯೇ ರಸಗೊಬ್ಬರ ಪಡೆಯಲಿದ್ದಾರೆ. ಸರಕಾರವು ಕಂಪನಿಗಳಿಗೆ ನೀಡುವ ಸಬ್ಸಿಡಿಯನ್ನು ಎಲ್ಪಿಜಿ ಸಿಲೆಂಡರ್ದಂತೆ  ರೈತರಿಗೆ ನೀಡಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚೆಗೆ ಎಲ್ಪಿಜಿ ಸಿಲೆಂಡರ್ ಸಬ್ಸಿಡಿಯನ್ನು ಸರ್ಕಾರ ನಿಲ್ಲಿಸಿದೆ. ಮುಂದೆ ಇದೇ ರೀತಿ ನಿಲ್ಲಿಸಿದರೆ ರೈತರ ಪರಿಸ್ಥಿತಿ ಹೇಗೆ ಎಂಬ ಆತಂಕವೂ ಕಾಡುತ್ತಿದೆ.

ಇತರ ಯೋಜನೆಗಳಂತೆ ಫೇಲಾಗದಿರಲಿ:

ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಸರ್ಕಾರಗಳು ಜಾರಿಗೆ ತಂದ ಹಲವಾರು ಯೋಜನೆಗಳಿಂದ ನೇರವಾಗಿ ಫಲಾನುಭವಿಗಳಿಗೆ ಲಾಭ ತಲುಪುವಲ್ಲಿ ವಿಳಂಬವಾಗುತ್ತದೆ. ಬೆಳೆ ಸಾಲಮನ್ನಾ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸೇರಿದಂತೆ ಇತರ ಯೋಜನೆಗಳಲ್ಲಿ ರೈತರಿಗೆ ಹಣ ವರ್ಗಾವಣೆಯಾಗುವುದಿಲ್ಲ ಎಂಬ ಅಪವಾದಗಳೂ ಕೇಳಿ ಬರುತ್ತಿರುವುದರಿಂದ ರೈತರಿಗೆ ಅನ್ಯಾಯವಾಗದಂತೆ ಯೋಜನೆ ಜಾರಿಗೆ ತಂದರೆ ರೈತರಿಗೆ ಸಂತಸದ ಸುದ್ದಿ. ಇದರಿಂದ ನಿಜವಾದ ಫಲಾನುಭವಿಗಳಿಗೆ ಅನಕೂಲವಾಗಿದೆ.