ಡಿಜಿಟಲ್ ಸಂವಹನದ ಆವಿಷ್ಕಾರದ ಬಳಿಕ ನಿರೀಕ್ಷೆಗೂ ಮೀರಿದ ಅಭಿವೃದ್ಧಿ ಕಂಡ ದೇಶದ ದೂರಸಂಪರ್ಕ ಕ್ಷೇತ್ರ ಈಗ ಮತ್ತೊಂದು ಹೆಜ್ಜೆಯನ್ನಿಡಲು ತಯಾರಾಗಿದೆ. ದೂರಸಂಪರ್ಕ ಕ್ಷೇತ್ರದಲ್ಲಾಗಿರುವ ಬದಲಾವಣೆಗೆ ತಕ್ಕಂತೆ ನೀತಿಯೂ ಬದಲಾಯಿಸಲು ಕೇಂದ್ರ ಸರ್ಕಾರ ನೂತನ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿಯನ್ನು ರಚಿಸುವ ಮೂಲಕ ಈಗ ಗಮನಸೆಳೆದಿದೆ. ದೂರಸಂಪರ್ಕ ಕ್ಷೇತ್ರದ ಉದಾರೀಕರಣದ ಫಲವಾಗಿ ಖಾಸಗಿಯವರಿಗೂ ತೆರೆದುಕೊಂಡ ಪರಿಣಾಮವಾಗಿ ದೂರ ಸಂಪರ್ಕ ಕ್ಷೆತ್ರದಲ್ಲಿ ಪ್ರಗತಿ ಸಾಧ್ಯವಾಗಿದೆ. ಹೀಗೆ ದೂರಸಂಪರ್ಕ ಕ್ಷೇತ್ರದಲ್ಲಾಗಿರುವ ಬದಲಾವಣೆಗೆ ತಕ್ಕಂತೆ ನೀತಿಯೂ ಬದಲಾಗಬೇಕಾದುದ್ದನ್ನು ಕೇಂದ್ರ ಸರಕಾರ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿಯನ್ನು ರಚಿಸುವ ಮೂಲಕ ಈಡೇರಿಸಿದೆ.
ದೂರಸಂಪರ್ಕ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ನೀಡುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಟೆಲಿಕಾಂ ನೀತಿಯನ್ನು ರಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಹಾಗಾದರೆ, ಸರ್ಕಾರ ತರುತ್ತಿರುವ ಹೊಸ ಟೆಲಿಕಾಂ ನೀತಿಗಳು ಯಾವುವು? ಹೊಸ ನೀತಿಯಲ್ಲಿ ಏನೆಲ್ಲಾ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.
ಹೂಡಿಕೆ ಆಕರ್ಷಣೆ ಮುಖ್ಯ ಉದ್ದೇಶ!
ದೂರ ಸಂಪರ್ಕ ಕ್ಷೇತ್ರದಲ್ಲಿ ಹೂಡಿಕೆಯನ್ನು ಆಕರ್ಷಿಸುವುದು ಹೊಸ ಟೆಲಿಕಾಂ ನೀತಿಯ ಮುಖ್ಯ ಉದ್ದೇಶವಾಗಿದೆ.ಉದ್ಯೋಗ ಸೃಷ್ಟಿಗೆ ಅವಕಾಶವಿರುವ 2022ಕ್ಕಾಗುವಾಗ ಸುಮಾರು 7 ಲಕ್ಷ ಕೋಟಿ ರೂಪಾಯಿ ಹೂಡಿಕೆ ಟೆಲಿಕಾಂ ಕ್ಷೇತ್ರಕ್ಕೆ ಹರಿದುಬರಬಹುದು ಹಾಗೂ ಇದೇ ವೇಳೆ ಸುಮಾರು 40 ಲಕ್ಷ ಉದ್ಯೋಗ ಸೃಷ್ಟಿಯಾಗಬಹುದು ಎಂಬ ನಿರೀಕ್ಷೆಯನ್ನು ಸರಕಾರ ಇಟ್ಟುಕೊಂಡಿದೆ.
ಕೌಶಲ ವೃದ್ಧಿ ತರಬೇತಿ
40 ಲಕ್ಷ ಉದ್ಯೋಗ ಸೃಷ್ಟಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಸರ್ಕಾರ 10 ಲಕ್ಷ ಮಂದಿಗೆ ಕೌಶಲ ವೃದ್ಧಿ ತರಬೇತಿಯನ್ನೂ ನೀಡಲುದ್ದೇಶಿಸಿದೆ. ಉದ್ಯೋಗ ಸೃಷ್ಟಿ ತುರ್ತು ಅಗತ್ಯವಾಗಿ ಇರುವುದರಿಂದ ದೂರ ಸಂಪರ್ಕ ನೀತಿಯಲ್ಲಿ ಅದಕ್ಕೆ ಪೂರಕವಾದ ಕೌಶಲ ವೃದ್ಧಿ ತರಬೇತಿ ಅಂಶಗಳನ್ನು ಸೇರಿಸಿದೆ. ಇದಕ್ಕಾಗಿ ಕೌಶಲ್ಯ ಕೇಂದ್ರಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ.
ಗ್ರಾಹಕ-ಕೇಂದ್ರಿತ 5ಜಿ
ರಾಷ್ಟ್ರೀಯ ಡಿಜಿಟಲ್ ಕಮ್ಯುನಿಕೇಷನ್ಸ್ ಪಾಲಿಸಿ-2018ಗೆ ಬುಧವಾರ ಅನುಮೋದನೆ ನೀಡಿರುವ ಯೂನಿಯನ್ ಕ್ಯಾಬಿನೆಟ್, ಗ್ರಾಹಕ-ಕೇಂದ್ರಿತ 5ಜಿ ಪರಿಸರ ವ್ಯವಸ್ಥೆಯನ್ನು ರಚಿಸಲು ಉದ್ದೇಶಿಸಿದೆ. ಮಷಿನ್ ಟು ಮೆಷೀನ್, ಇಂಟರ್‌ನೆಟ್ ಆಫ್ ಥಿಂಗ್ಸ್ ಗಳಂತಹ ಅಂತರ್ಜಾಲದ ಹೊಸ ಉದಯೋನ್ಮುಖ ತಂತ್ರಜ್ಞಾನಗಳನ್ನು ಕಲ್ಪಿಸಲು ನೀತಿಯಲ್ಲಿ ಹೇಳಲಾಗಿದೆ.
ಪ್ರತಿ ವ್ಯಕ್ತಿಗೆ 50MBPS ಡೇಟಾ!
ಪ್ರತಿ ವ್ಯಕ್ತಿಗೆ 50 ಎಂಬಿಪಿಎಸ್ ಬ್ರಾಡ್‌ಬ್ಯಾಂಡ್ ಸಂಪರ್ಕ, ಎಲ್ಲ ಗ್ರಾಮ ಪಂಚಾಯತ್‌ಗಳಿಗೆ 2020ರ ಒಳಗಾಗಿ 1 ಜಿಪಿಪಿಎಸ್ ವೇಗದ ಇಂಟರ್ನೆಟ್ ಸೌಲಭ್ಯದಂತಹ ಕೆಲವು ಆಕರ್ಷಣೀಯ ಅಂಶಗಳನ್ನು ಸರ್ಕಾರ ಹೊಸ ನೀತಿಯಲ್ಲಿ ತಿಳಿಸಿದೆ. 4ಜಿ ಯುಗಕ್ಕೆ ಕಾಲಿರಿಸಿದ್ದರೂ ಇನ್ನೂ 2ಜಿ ಸಂಪರ್ಕವೂ ಇಲ್ಲದ ಅನೇಕ ಹಳ್ಳಿಗಳನ್ನು ಸರ್ಕಾರ ಗಣನೆಗೆ ತೆಗೆದುಕೊಂಡಿದೆ.
ಟೆಲಿಕಾಂ ಸಂಶೋಧನಾ ಸಂಸ್ಥೆ
ಸಿ-ಡಾಟ್ (ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್) ಅನ್ನು ಪ್ರಮುಖ ಟೆಲಿಕಾಂ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಾಗಿ ಮಾರ್ಪಡಿಸುವ ಅಂಶವನ್ನು ಪ್ರಸ್ತಾವಿಸಲಾಗಿದೆ. ಕಳೆದೊಂದು ದಶಕದಿಂದ ಪ್ರಸ್ತಾವನೆಯಲ್ಲಿರುವ ವಿಷಯವೇ ಆಗಿದ್ದರೂ, 5G ಬರುವ ಕಾಲದಲ್ಲಾದರೂ ಟೆಲಿಕಾಂ ಸಂಶೋಧನಾ ಸಂಸ್ಥೆ ಹುಟ್ಟುತ್ತದೆಯೇ ಎಂಬುದನ್ನು ನೋಡಬೇಕಿದೆ.
ಇದನ್ನು ಲೋಪ ಎನ್ನಬಹುದು
ಖಾಸಗಿ ಕಂಪೆನಿಗಳು ಉತ್ತಮ ಇಂಟರ್‌ನೆಟ್ ಸೌಲಭ್ಯ ಒದಗಿಸುತ್ತಿದ್ದರೂ ಅವುಗಳ ಲಕ್ಷ್ಯವಿರುವುದು ನಗರಗಳಲ್ಲೇ ಹೊರತು ಹಳ್ಳಿಗಾಡುಗಳಲ್ಲಿ ಅಲ್ಲ. ಆದಾಯವನ್ನೇ ಎದುರು ನೋಡುವ ಖಾಸಾಗಿ ಕಂಪೆನಿಗಳ ನಡುವೆ ಹಳ್ಳಿಗಾಡಿನ ಪ್ರದೇಶಗಳಿಗೂ ಅಂತರ್ಜಾಲ ಸಂಪರ್ಕ ಕಲ್ಪಿಸುವ ಹೊಸ ಯೋಜನೆಗಳು ಇಲ್ಲದಿರುವುದು ಈ ನೀತಿಯ ಒಂದು ಲೋಪವೆನ್ನಬಹುದು.