News

ಸೆಮಿ ಲಾಕ್ಡೋನ್ ಗೆ ಇಡೀ ರಾಜ್ಯ ಸ್ತಬ್ದ. ಹೆಚ್ಚು ವಾಹನಗಳು ಓಡಾಡಲಿಲ್ಲ, ವಿರಳವಾಗಿತ್ತು ಜನಸಂಚಾರ

10 May, 2021 8:06 PM IST By:

ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೊರೋನಾ ಸೋಂಕನ್ನು ಹೇಗಾದರೂ ಮಾಡಿ ಕಟ್ಟಿಹಾಕಬೇಕೆಂದು ಸರ್ಕಾರ ಸೋಮವಾರದಿಂದ ಹೇರಿದ ಸೆಮಿ ಲಾಕ್ಡೌನ್ ಗೆ ರಾಜ್ಯಾದ್ಯಂತ ಜನಜೀವನ ಸ್ತಬ್ದವಾಗಿತ್ತು. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಿಶ್ಯಬ್ಧವಾಗಿತ್ತು. ಎಂದಿನಂತೆ ಹೆಚ್ಚು ವಾಹನಗಳು ರಸ್ತೆಯ ಮೇಲೆ ಸಂಚರಿಸಲಿಲ್ಲ. ಜನಸಂಚಾರವೂ ಸಹ ಕಡಿಮೆಯಿತ್ತು.

ತುರ್ತು ವಾಹನಗಳನ್ನೊರತುಪಡಿಸಿದರೆ ಉಳಿದ ವಾಹನಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ. ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿವೆ. ಸಾರಿಗೆ ಸಂಸ್ಥೆಯ ಬಸ್ ಸೇರಿದಂತೆ ಖಾಸಗಿ ಬಸ್‌ಗಳು, ಆಟೋ, ಟ್ಯಾಕ್ಸಿ ಎಲ್ಲ ರೀತಿಯ ವಾಹನಗಳ ಓಡಾಟ ಸಂಪೂರ್ಣ ಬಂದ್ ಆಗಿದೆ. ಬೆಂಗಳೂರಿನಲ್ಲಿ ಮೆಟ್ರೊ ರೈಲು ಸೇವೆಯು ಸ್ಥಗಿತಗೊಂಡಿದೆ.

ಜನ ಹಾಗೂ ವಾಹನಗಳ ಓಡಾಟವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ. ಅಲ್ಲೊಂದು ಇಲ್ಲೊಂದು ಎಂಬಂತೆ ವಾಹನಗಳ ಸಂಚಾರವಿತ್ತು. ನಗರದ ಹೃದಯ ಭಾಗವಾದ ಮೆಜೆಸ್ಟಿಕ್, ಮಹಾತ್ಮಗಾಂಧಿ ರಸ್ತೆ, ಕೆಆರ್ ಮಾರುಕಟ್ಟೆ, ಶಿವಾಜಿ ನಗರ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಅಂಗಡಿಗಳು ಸಂಪೂರ್ಣ ಮುಚ್ಚಿವೆ.
ಚಿತ್ರಮಂದಿರ, ಮಾಲ್‌ಗಳಿಗೂ ಬೀಗ ಬಿದ್ದಿದ್ದು, ಇಡೀ ರಾಜ್ಯದಲ್ಲಿ ಒಂದು ರೀತಿ ಅಘೋಷಿತ ಬಂದ್ ವಾತಾವರಣವಿತ್ತು.
ಅನಗತ್ಯವಾಗಿ ರಸ್ತೆಗಿಳಿದರೆ ಬಂಧಿಸಲಾಗುವುದು ಎಂಬ ಪೊಲೀಸರ ಎಚ್ಚರಿಕೆಯಿಂದ ಜನ ಬೀದಿಗೆ ಬರುವುದು ಕಡಿಮೆಯಾಗಿದ್ದು, ಬಹುತೇಕ ಕಡೆ ಜನ ಸಂಚಾರ ವಿರಳವಾಗಿದೆ. ಬಡಾವಣೆಗಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಓಡಾಡುತ್ತಿರುವುದನ್ನು ಬಿಟ್ಟರೆ ಜನರ ಓಡಾಟವೂ ಇಲ್ಲ.
ಪ್ರತಿ ಪ್ರಮುಖ ರಸ್ತೆಗಳಲ್ಲೂ ಪೊಲೀಸರು ಬ್ಯಾರಿಕೇಡ್ ಹಾಕಿ ಓಡಾಡುವವರನ್ನು ತಪಾಸಣೆ ಮಾಡುತ್ತಿದ್ದು, ತುರ್ತು ಕಾರ್ಯ ಬಿಟ್ಟು ಅನಗತ್ಯವಾಗಿ ಓಡಾಡುವವರ ವಾಹನಗಳನ್ನು ಸೀಜ್ ಮಾಡಲಾಗಿದೆ. ಅನಗತ್ಯವಾಗಿ ರಸ್ತೆಗಿಳಿಯುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಬೆಳ್ಳಂ ಬೆಳಿಗ್ಗೆಯೇ ನೂರಾರು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜನರ ಹಾಗೂ ವಾಹನಗಳ ಓಡಾಟಕ್ಕೆ ಅವಕಾಶ ನೀಡದೆ ವಾಹನಗಳನ್ನು ತಡೆದು ವಶಕ್ಕೆ ಪಡೆಯುವ ಪ್ರಯತ್ನ ನಡೆಸಿದ ಸಂದರ್ಭದಲ್ಲಿ ಹಲವರು ಪೊಲೀಸರ ಜತೆ ವಾಗ್ವಾದ, ಜಟಾಪಟಿ ನಡೆಸಿದ ಪ್ರಸಂಗಗಳು ನಡೆದಿವೆ. ಕೆಲವರು ತಮಗೆ ತುರ್ತು ಕಾರ್ಯವಿದೆ ಎಂದು ಸಬೂಬುಗಳನ್ನು ಹೇಳಿ ಪೊಲೀಸರಿಂದ ಬಚಾವ್ ಆಗುವ ಪ್ರಯತ್ನವನ್ನು ನಡೆಸಿದ್ದು ಕಂಡು ಬಂತು ನಿಯಮ ಮೀರಿದವರಿಗೆ ಪೊಲೀಸರು ಹಲವೆಡೆ ಲಾಠಿ ಬೀಸಿ ಚುರುಕು ಮುಟ್ಟಿಸಿರುವ ಘಟನೆಯೂ ನಡೆದಿದೆ.

ಬೆಳಿಗ್ಗೆ 6 ರಿಂದ 10 ರವರೆಗೂ ಹಣ್ಣು, ಹಾಲು, ತರಕಾರಿ, ದಿನಸಿ, ಮಾಂಸ,ಮದ್ಯ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ 10ರ ನಂತರ ಈ ಎಲ್ಲ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದು, ಹೋಟೆಲ್‌ಗಳು ಬಾಗಿಲು ಹಾಕಿವೆ. ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಎಲ್ಲ ರೀತಿಯ ಧಾರ್ಮಿಕ ಕೇಂದ್ರಗಳು ಮುಚ್ಚಿವೆ.
ಅಗತ್ಯ ಸೇವೆಯ ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿದರೆ ಉಳಿದ ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳಿಗೂ ಬೀಗ ಬಿದಿದ್ದೆ. ಆಸ್ಪತ್ರೆ, ಔಷಧಿ ಅಂಗಡಿಗಳು, ಪೆಟ್ರೋಲ್ ಬಂಕ್ ಎಂದಿನಂತೆ ತೆರೆದಿವೆ.