ಮುಂಗಾರು ಹಂಗಾಮು ಆರಂಭಕ್ಕೆ ಮುನ್ನವೇ ಉತ್ತಮ ಮಳೆಯ ಮುನ್ಸೂಚನೆ ನೀಡಿ, ಕೆಲ ದಿನಗಳ ಕಾಲ ಧರೆಗೆ ತಂಪೆರಚಿದ್ದ ಮಳೆರಾಯ, ಮುಂಗಾರು ಆರಂಭವಾದ ಬಳಿಕ ಮರೆಯಾಗಿದ್ದ. ಮುಂಗಾರಿಗೆ ಮೊದಲೇ ಸುರಿದ ಹದ ಮಳೆಗೆ ಬಿತ್ತನೆ ಕಾರ್ಯ ಕೈಗೊಂಡಿದ್ದ ರೈತರು ಬಳಿಕ, ವರುಣನ ಆಗಮನಕ್ಕಾಗಿ ಆಗಸದತ್ತ ಮುಖ ಮಾಡಿ ನಿಂತಿದ್ದರು. ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳು ಹಾಗೂ ಹಾವೇರಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಜೂನ್ ಮೊದಲಾರ್ಧದಲ್ಲಿ ಬಿತ್ತನೆ ನಡೆಸಿದ ರೈತರು ಬಿತ್ತನೆ ಬಳಿಕ ಮಳೆಯಾಗದೆ ಆತಂಕಕ್ಕೆ ಸಿಲುಕಿದ್ದರು. ಇದೀಗ ರಾಜ್ಯದ ಬಹುತೇಕ ಎಲ್ಲ ಭಾಗದಲ್ಲೂ ಉತ್ತಮ ಮಳೆಯಾಗಿದೆ. ಪರಿಣಾಮ ರೈತರ ಮೊದಗಲ್ಲಿ ಮತ್ತೆ ಮಂದಹಾಸ ಮೂಡಿದೆ.
ಮೇ ತಿಂಗಳಲ್ಲಿ ಒಂದು ವಾರ ಕಾಲ ಸುರಿದ ಸತತ ಮಳೆ, ರಾಜ್ಯದಲ್ಲಿ ಕೃಷಿ ಚಟುವಟಿಕೆಗಳಿಗೆ ಚುರುಕು ನೀಡಿತ್ತು. ಬಳಿಕ ಮಳೆ ಕಣ್ಣಾಮುಚ್ಚಾಲೆ ಆಟವಾಡಿತಾದರೂ ವರುಣ ದೇವನ ನೆಚ್ಚಿಕೊಂಡ ರೈತರು ಸಾವಿರಾರು ಎಕರೆ ಭೂಮಿಯಲ್ಲಿ ಬಿತ್ತನೆ ಕಾರ್ಯ ಕೈಗೊಂಡಿದ್ದರು. ಮುಂಗಾರಿಗೆ ಮುನ್ನ ಬಿತ್ತನೆ ಮಾಡಿದ ಬೆಳೆಗೆ 15ರಿಂದ 25 ದಿನಗಳ ಅವಧಿಯಲ್ಲಿ ಮಳೆಯ ಅಗತ್ಯವಿತ್ತಾದರೂ ಆಗ ನಿರೀಕ್ಷಿಸಿದಷ್ಟು ಪ್ರಮಾಣದ ಮಳೆ ಆಗಲಿಲ್ಲ. ಮೋಡ ಕವಿದರೂ ಹನಿಗಳು ಭೂಮಿಗೆ ಮುತ್ತಿಕ್ಕಿರಲಿಲ್ಲ. ಆದರೆ ಕಳೆದ 8 ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮೂರು ದಿನಗಳಿಂದ ಬಿಡುವು ನೀಡದೆ ಮಳೆ ಸುರಿಯುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳು ಮತ್ತೊಮ್ಮೆ ಗರಿಗೆದರಿವೆ. ಇತ್ತ ಮಳೆ ಹೆಚ್ಚಾದ ಬೆನ್ನಲ್ಲೇ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಕೂಡ ಹೆಚ್ಚಿದೆ.
ಯೂರಿಯಾ ಅನಿವಾರ್ಯ
ಒಂದು ವಾರದಿಂದ ಈಚೆಗೆ ಹೆಚ್ಚು ಮಳೆಯಾಗಿರುವ ಕಾರಣ ಹೊಲಗಳಲ್ಲಿ, ಬೆಳೆಗಳ ಸಾಲುಗಳ ನಡುವೆ ನೀರು ನಿಂತಿದ್ದು, ಶೀತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೆಕ್ಕೆಜೋಳ, ಊಟದ ಜೋಳ, ಶೇಂಗಾ (ನೆಲಗಡಲೆ), ಸೋಯಾ ಅವರೆ, ಹತ್ತಿ ಸೇರಿ ವಿವಿಧ ಬೆಳೆಗಳ ಎಲೆ, ಗರಿಗಳು ಬಿಳಿ ಬಣ್ಣಕ್ಕೆ ತಿರುಗುತ್ತಿವೆ. ಈ ಬೆಳೆಗಳನ್ನು ಹೀಗೇ ಬಿಟ್ಟರೆ ಬೆಳವಣಿಗೆ ಕುಂಠಿತವಾಗಿ, ಇಳುವರಿ ಬಾರದೆಯೂ ಇರುವ ಸಾಧ್ಯತೆ ಇದೆ. ಹೀಗಾಗಿ ಈ ಸಂದರ್ಭದಲ್ಲಿ ಅಗತ್ಯ ಪ್ರಮಾಣದ ಯುರಿಯಾ ನೀಡಿದರೆ ಬೆಳೆಗಳು ಚೇತರಿಸಿಕೊಂಡು, ಬೆಳವಣಿಗೆ ಉತ್ತಮಗೊಳ್ಳುತ್ತದೆ. ಕಾರಣ, ಮಳೆ ಬಿಡುವು ಕೊಟ್ಟ ಬಳಿಕ ಬೆಳೆಗೆ ನೀಡಲು ಅಗತ್ಯವಿರುವ ಯೂರಿಯಾ ಗೊಬ್ಬರವನ್ನು ಶೇಖರಿಸಿ ಇರಿಸಿಕೊಳ್ಳಲು ರೈತರು ಮುಂದಾಗಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಮಳೆ ಆಶ್ರಿತ ಭೂಮಿ ಹೆಚ್ಚಾಗಿರುವ ಕಾರಣ, ಯೂರಿಯಾಗೆ ಬೇಡಿಕೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ.93ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಕೆಲ ದಿನಗಳಿಂದ ಹದ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಕೃಷಿ ಕೆಲಸಗಳಿಗೆ ನವ ಚೈತನ್ಯ ಬಂದAತಾಗಿದೆ. ಮಳೆ ಉತ್ತಮವಾಗಿರುವ ಕಾರಣ ಬೆಳೆಗಳಿಗೆ ಮೇಲು ಗೊಬ್ಬರ ಹಾಕುವ ಅಗತ್ಯವಿದ್ದು, ರೈತರು ಮೇಲು ಗೊಬ್ಬರವಾಗಿ ಯೂರಿಯಾ ಮೊರೆ ಹೋಗಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನ ಅವಧಿಯಲ್ಲಿ ಒಟ್ಟು 3.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಈ ಪೈಕಿ ಈಗಾಗಲೇ 3.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಬಹುತೇಕ ಬೆಳೆಗಳು 15 ದಿನದಿಂದ ಒಂದು ತಿಂಗಳ ಹಂತದಲ್ಲಿದ್ದು, ಸುಕ್ತ ಸಮಯದಲ್ಲಿ ಮಳೆಯಾಗುತ್ತಿರುವ ಕಾರಣ ಕೃಷಿಕರು ಖುಷಿಯಾಗಿದ್ದಾರೆ.
57 ಸಾವಿರ ಮೆ.ಟನ್ ವಿತರಣೆ
ಹಾವೇರಿ ಜಿಲ್ಲೆಯಲ್ಲಿ ಇದುವರೆಗೆ 57,780 ಮೆಟ್ರಿಕ್ ಟನ್ ಯೂರಿಯಾ ವಿತರಣೆ ಮಾಡಲಾಗಿದೆ. ಇದೇ ವೇಳೆ ಖಾಸಗಿ ಗೊಬ್ಬರ ಅಂಗಡಿಗಳಲ್ಲಿ ಒಟ್ಟು 37,184 ಮೆಟ್ರಿಕ್ ಟನ್, ಸಹಕಾರ ಸಂಘಗಳಲ್ಲಿ 6225 ಮೆಟ್ರಿಕ್ ಟನ್ ಸೇರಿ ಒಟ್ಟು 43,409 ಮೆಟ್ರಿಕ್ ಟನ್ ಯೂರಿಯಾ ಸಂಗ್ರಹವಿತ್ತು. ಈ ಪೈಕಿ ಈಗಾಗಲೇ 30,770 ಮೆ.ಟನ್ ಯೂರಿಯಾ ಮಾರಾಟವಾಗಿದ್ದು, ಪ್ರಸ್ತುತ 12,639 ಮೆ.ಟನ್ ದಾಸ್ತಾನು ಉಳಿದಿದೆ. ಇದನ್ನು ಹೊರತುಪಡಿಸಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಇನ್ನೂ 15,000 ಮೆಟ್ರಿಕ್ ಟನ್ ಹೆಚ್ಚುವರಿ ಯೂರಿಯಾ ಅಗತ್ಯ ಬೀಳಲಿದೆ ಎಂದು ಜಂಟಿ ಕೃಷಿ ನಿರ್ದೇಶಕರಾಗಿರುವ ಮಂಜುನಾಥ ಬಿ. ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟಾರೆ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಅವರೆ, 44 ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಗೋವಿನಜೋಳ ಅಥವಾ ಮೆಕ್ಕೆಜೋಳವು ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ.
ಇನ್ನು ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲೂ ಯೂರಿಯಾಗೆ ಬೇಡಿಕೆ ಹೆಚ್ಚಿದೆ. ಆದರೆ ಜಿಲ್ಲಾಡಳಿತವು ಮೊದಲೇ ತಿಳಿಸಿದಂತೆ ಜಿಲ್ಲೆಗಳಲ್ಲಿ ಅಗತ್ಯ ಪ್ರಮಾಣದ ಯುರಿಯಾ ಮತ್ತಿತರ ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದ್ದು, ರೈತರಿಗೆ ಕೊರತೆ ಆಗದಂತೆ ಎಚ್ಚರವಹಿಸಲಾಗಿದೆ. ಇನ್ನು ಖಾಸಗಿ ಗೊಬ್ಬರದ ಅಂಗಡಿಗಳಲ್ಲೂ ಹೆಚ್ಚಿನ ಪ್ರಮಾಣದ ಯೂರಿಯಾ ದಾಸ್ತಾನಿದೆ.
‘ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ನಾವು ಕನಿಷ್ಠ 25 ಸಾವಿರ ಟನ್ ಯೂರಿಯಾ ಮಾರಾಟ ಮಾಡುತ್ತೇವೆ. ಈ ಬಾರಿ ಮಳೆ ಉತ್ತಮವಾಗಿ ಆಗಿರುವವ ಕಾರಣ 40 ಸಾವಿರ ಟನ್ ಯೂರಿಯಾ ದಾಸ್ತಾನು ಮಾಡಿಸಿದ್ದೇವೆ. ಈಗಾಗಲೇ ಅದಲ್ಲಿ ಶೇ.40ರಷ್ಟು ಗೊಬ್ಬರ ಮಾರಾಟವಾಗಿದ್ದು, ಒಂದೆರಡು ದಿನಗಳಿಂದ ಮಾರಾಟದ ವೇಗ ಹೆಚ್ಚಿದೆ. ಮೊದಲೆಲ್ಲಾ ಯೂರಿಯಾ ಕೊರತೆ ಉಂಟಾಗುತ್ತಿತ್ತು. ಆದರೆ, ಪಹಣಿಗೆ ಆಧಾರ್ ಲಿಂಕ್ ಮಾಡುವ ಜೊತೆಗೆ, ರಸಗೊಬ್ಬರ ಖರೀದಿಗೆ ರೈತರು ಆಧಾರ್ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸಿದ ಬಳಿಕ ಯೂರಿಯಾ ಖರೀದಿ ಮತ್ತು ಮಾರಾಟ ಎರಡೂ ಪಾರದರ್ಶಕವಾಗಿ ನಡೆಯುತ್ತಿದ್ದು, ರಸಗೊಬ್ಬರದ ಕೊರತೆ ಎದುರಾಗುತ್ತಿಲ್ಲ,’ ಎನ್ನುತ್ತಾರೆ ದಾವಣಗೆರೆಯ ಬಕ್ಕೇಶ್ವರ ಫರ್ಟಿಲೈಸರ್ಸ್ ಮಾಲೀಕ ಗಣೇಶ್.