ಈ ದಿನದ ಪ್ರಮುಖ ಕೃಷಿ ಸುದ್ದಿಗಳು
1.ಬಬ್ಬೂರು ಫಾರಂ ನ ತೋಟಗಾರಿಕೆ ಕಾಲೇಜಿನಲ್ಲಿ ಪದವಿ ಪ್ರಧಾನ ಕಾರ್ಯಕ್ರಮ
2.ರೈತರ ಆದಾಯ ಹೆಚ್ಚಳ ಮಾಡಲು 300 ಕೋಟಿ ವಿಶೇಷ ಆವರ್ತ ನಿಧಿ ಮೀಸಲು
3. ಪ್ರತಿ ಕುಟುಂಬಕ್ಕೆ ಉಚಿತ ೧೦ ಕೆಜಿ ಅಕ್ಕಿ ; ಬಿ. ಎಸ್ . ಯಡಿಯೂರಪ್ಪ
4.ಅಕಾಲಿಕ ಮಳೆಗೆ ಹಾನಿಗೀಡಾದ ಬೆಳೆಗೆ ಪರಿಹಾರಕ್ಕೆ ರೈತರ ಒತ್ತಾಯ
5.ರೈತರ ಬದುಕು ಹಸನಾಗಲು ಗ್ರಾಮೀಣ ಆರ್ಥಿಕ ಸ್ಥಿತಿ ಬದಲಾಗಬೇಕು:ಸಿಎಂ
6.ಗದಗ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕೊಬ್ಬರಿ ಹೋರಿ ಓಡಿಸುವ ಸ್ಪರ್ಧೆ
7.ರಾಷ್ಟ್ರ ರಾಜಧಾನಿಯಲ್ಲಿ ಮಳೆ , ವಿಮಾನ ಹಾಗು ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ
1. 2021-22 ನೇ ಸಾಲಿನ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ ( DAESI ) ತರಬೇತಿಯ ಡಿಪತ ಪದವಿ ಪ್ರಧಾನ ಕಾರ್ಯಕ್ರಮ ವು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂ ನ ತೋಟಗಾರಿಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು .
ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಕೃಷಿ ಇಲಾಖೆ ಚಿತ್ರದುರ್ಗ ಮತ್ತು ಕೃಷಿ ತಂತ್ರಜ್ಞರ ಸಂಸ್ಥೆಯ ವತಿಯಿಂದ ನಡೆದ ಕಾರ್ಯಕ್ರಮ ಇದಾಗಿದ್ದು , ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ ಎ ಬಿ ಪಾಟೀಲ್ ಅವರು ಮುಖ್ಯ ಅಥಿತಿಗಳಾಗಿ ಭಾಗಿಯಾಗಿದ್ದರು .
ಚಿತ್ರದುರ್ಗ ಜಂಟಿ ಕೃಷಿ ನಿರ್ದೇಶಕ ಪಿ ರಮೇಶ್ ಕುಮಾರ್ ಸೇರಿ ಹಲವಾರು ಗಣ್ಯರು ಭಾಗಿಯಾಗಿದ್ದರು . ಈ ಸಂದರ್ಭದಲ್ಲಿ ಒಟ್ಟು ಎಂಟು ರ್ಯಾಂಕ್ ಸೇರಿದಂತೆ 41 ವಿಧ್ಯಾರ್ಥಿಗಳಿಗೆ ಪದವಿ ಪ್ರಧಾನ ಕಾರ್ಯಕ್ರಮ ನಡೆಯಿತು .
2. ರೈತರ ಆದಾಯ ಹೆಚ್ಚಳ ಮಾಡಲು 300 ಕೋಟಿ ರೂಪಾಯಿಗಳ ವಿಶೇಷ ಆವರ್ತ ನಿಧಿ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಯಾವುದೇ ಬೆಳೆ ಬೆಲೆ ಕುಸಿದರೆ ತಕ್ಷಣ ಸ್ಪಂದಿಸಿ ಬೆಂಬಲ ಬೆಲೆಯಡಿ ಭತ್ತ, ರಾಗಿ, ತೊಗರಿ ಅಡಿಕೆ ಬೆಳೆಗಳಿಗೆ ಬೆಂಬಲ ಬೆಲೆ ನೀಡಲಾಗಿದೆ. ರೈತರಿಗೆ ಯಶಸ್ವಿನಿ ಯೋಜನೆಯನ್ನು ಪುನ: ಪ್ರಾರಂಭಿಸಲಾಗಿದೆ. 3600 ಕೋಟಿ ಆವರ್ತ ನಿಧಿ ಇಡಲಾಗಿದೆ.
ರಾಗಿ ಮತ್ತು ಜೋಳ ರಾಜ್ಯದ ಆಹಾರವಾಗಿದ್ದು, ಇದನ್ನು ಮೊದಲ ಬಾರಿಗೆ ಪಡಿತರದಲ್ಲಿ ವಿತರಿಸಲಾಗುತ್ತಿದೆ ಎಂದರು.
3. ಈಗಾಗಲೆ ಬಿಜೆಪಿ ಸರ್ಕಾರ ಚುನಾವಣೆಯ ಅಂಗವಾಗಿ ರಾಜ್ಯದ ವಿವಿದೆಡೆ ಬಿಜೆಪಿ ವಿಜಯ ಸಂಕಲ್ಪಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು , ಜನರಿಗೆ ಹೊಸ ಹೊಸ ಆಶ್ವಾಸನೆ ಯನ್ನು ನೀಡುತ್ತಾ ಬಂದಿದೆ .
ಅದೇ ರೀತಿ ಸೋಮವಾರ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಯಸ್ . ಯಡಿಯೂರಪ್ಪಅವರು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ ೧೦ ಕೆಜಿ ಉಚಿತ ಅಕ್ಕಿ ವಿತರಿಸುವುದಾಗಿ ಘೋಷಣೆಯನ್ನು ಮಾಡಿದ್ದಾರೆ .
4. ಗಡಿ ಜಿಲ್ಲೆ ಬೀದರ್‌ನಲ್ಲಿ ಎರಡು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಾದ್ಯಂತ ರೈತ ಸಮುದಾಯ ಸಂಕಷ್ಟಕ್ಕೀಡಾಗಿದೆ.
ರೈತರು ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಪ್ರತಿಭಟಣಾ ಮೆರವಣಿಗೆ ಆರಂಭಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತ ರೈತರು ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದರು.
ಜಿಲ್ಲೆಯಲ್ಲಿ ಅಕಾಲಿಕವಾಗಿ ಅಲಿಕಲ್ಲು ಸಹಿತ ಮಳೆ ಸುರಿದಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಜೋಳ, ಕುಸುಬೆ, ಗೋದಿ ಹಾಗು ತರಕಾರಿ ಬೆಳೆಗಳು ಹಾನಿಯಾಗಿದೆ.
ಅವುಗಳಿಗೆಲ್ಲಾ ಶೀಘ್ರವೇ ಪರಿಹಾರ ನೀಡಬೇಕು ಜೊತೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳಾದ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿದರು.
5. ರೈತರ ಬದುಕು ಉತ್ತಮವಾಗಲು ಗ್ರಾಮೀಣ ಆರ್ಥಿಕ ಸ್ಥಿತಿ ಬದಲಾಗಬೇಕು. ಕೃಷಿಯಲ್ಲಿ ಅತಿ ಹೆಚ್ಚು ಬಂಡವಾಳ ಹೂಡಿಕೆಯಾಗಬೇಕು. ಇದರಲ್ಲಿ ಬ್ಯಾಂಕ್ ಗಳ ಪಾತ್ರ ಬಹಳ ದೊಡ್ಡದಿದೆ. ಈ ಬಗ್ಗೆ ಎಲ್ಲಾ ಬ್ಯಾಂಕರ್ ಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರೈತ ಉಳಿದರೆ ಮಾತ್ರ ಕೃಷಿ ಉಳಿಯುತ್ತದೆ. ರೈತ ಕೇಂದ್ರಿತ ಕಾರ್ಯಕ್ರಮಗಳನ್ನು ರೂಪಿಸಿದಾಗ ಹಾಗೂ ರೈತರಿನಿಗೆ ಶಕ್ತಿ ತುಂಬುವ ಕಾಲ ಬಂದಿದೆ.
ಕಿಸಾನ್ ಸಮ್ಮಾನ್ , ರೈತ ವಿದ್ಯಾ ನಿಧಿ ಕಾರ್ಯಕ್ರಮಗಳು ರೈತನನ್ನು ಶಕ್ತಿಶಾಲಿಯಾಗಿ ಮಾಡುವ ಕಾರ್ಯಕ್ರಮಗಳನ್ನು ರೂಪಿಸಿ ಮೂಲಭೂತ ಬದಲಾವಣೆಗಳನ್ನು ತರಲಾಗಿದೆ.
ಕೃಷಿ ಬೆಳೆಗೆ ತಕ್ಕಂತೆ ಸಾಲ ಪ್ರಮಾಣವನ್ನು ನೀಡಲು ಶೂನ್ಯ ಬಡ್ಡಿಯಲ್ಲಿ 5 ಲಕ್ಷದವರೆಗೆ ರೈತರಿಗೆ ಸಿಗುವ ಸಾಲದ ಪ್ರಮಾಣ ಹೆಚ್ಚಳ ಮಾಡಲಾಗಿದೆ.
ರೈತ ವಿದ್ಯಾನಿಧಿ ರೂಪಿಸುವ ಮೂಲಕ ರೈತರ ಮಕ್ಕಳು ಉನ್ನತ ವ್ಯಾಸಂಗ ಮಾಡಿ ಬೇರೆ ವೃತ್ತಿ ಮಾಡುವ ಮೂಲಕ ಆದಾಯ ಹೆಚ್ಚಳ ಪಡೆಯುವಂತಾಗಬೇಕು.
ಗ್ರಾಮೀಣ ಭಾಗದ ಮಕ್ಕಳು ಹೆಚ್ಚು ಬುದ್ದಿವಂತರಿರುತ್ತಾರೆ.
ಅವರನ್ನು ಕಡೆಗಣಿಸಬಾರದು. 180 ಕೋಟಿ ರೂ.ಗಳ ವೆಚ್ಚದಲ್ಲಿ ರೈತರಿಗೆ ವಿಮಾ ಯೋಜನೆ ಜಾರಿಯಾಗಿದೆ. ರೈತನ ಸಹಜ ಸಾವಾದರೂ ಅವನ ಕುಟುಂಬಕ್ಕೆ 2 ಲಕ್ಷ ರೂ ವಿಮಾ ಹಣ ಬರುವಂತೆ ಮಾಡಲಾಗಿದೆ ಎಂದರು.
6. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಕೊಬ್ಬರಿ ಹೋರಿ ಓಡಿಸುವ ಸ್ಪರ್ಧೆ ನಡೆಯಿತು . ಕಾರ್ಯಕ್ರಮಕ್ಕೆ ಶಾಸಕ ರಾಮಣ್ಣ ಲಮಾಣಿ ಚಾಲನೆಯನ್ನು ನೀಡಿ ಮಾತನಾಡಿದರು . ಹೋರಿ ಹಣ ಎಂದರೆ ಉತ್ತರ ಕರ್ನಾಟಕದ ರೈತಾಪಿ ಕುಟುಂಬದ ಯುವಕರಿಗಂತೂ ಅಚ್ಚು ಮೆಚ್ಚು . ಗ್ರಾಮೀಣ ಭಾಗದಲ್ಲಿ ಇವಕ್ಕೆ ಮತ್ತೆ ಜೀವ ತುಂಬುವ ಅಗತ್ಯವಿದೆ . ಸದ್ಯ ಕೃಷಿ ಚಟುವಟಿಕೆಗೆ ಬಿಡುವಿರುವ ವೇಳೆ ಈ ಜಿಲ್ಲೆಯ ರೈತರು ಸಂತೋಷ- ಸಂಭ್ರಮಕ್ಕಾಗಿ ಹೋರಿ ಹಬ್ಬದ ಸಂಪ್ರದಾಯ ಮಾಡುತ್ತಾರೆ .
ತಾಲೂಕು, ಜಿಲ್ಲೆ ಸೇರಿ ನೆರೆಯ ಧಾರವಾಡ ಹುಬ್ಬಳ್ಳಿ ಹಾವೇರಿ, ದಾವಣಗೆರೆ. ಶಿವಮೊಗ್ಗ, ಶಿಕಾರಿಪುರ, ಶಿರಾಳಕೊಪ್ಪ, ಚಿಕ್ಕಜಾಜೂರು, ಆನವಟ್ಟಿ ಭಾಗದಿಂದ 200ಕ್ಕೂ ಹೆಚ್ಚು ಹೋರಿಗಳು ರಾಜ್ಯಮಟ್ಟದ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದವು.
7. ದೇಶದ ರಾಜಧಾನಿ ದೆಹಲಿಯಲ್ಲಿ ಸೋಮವಾರದಿಂದ ಭಾರೀ ಮಳೆಯಾಗಿದ್ದು , ಇದರಿಂದ ರೈಲು ಮತ್ತು ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ.
ರಾತ್ರಿ ವ್ಯಾಪಕವಾಗಿ ಮಳೆಯಾಗಿದ್ದು , ಸುಮಾರು ೧೫ ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದ್ದು ದೆಹಲಿಗೆ ಬರುವ ಕೆಲವು ರೈಲುಗಳು ಕೊಂಚ ತಡವಾಗಿ ಬರಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನೂ 10 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, 7 ವಿಮಾನಗಳನ್ನು ಜೈಪುರಕ್ಕೆ, 3 ವಿಮಾನಗಳನ್ನು ಲಖನೌಗೆ ತೆರಳುವಂತೆ ಸೂಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಸೋಮವಾರ ಹಗಲು ಮತ್ತು ರಾತ್ರಿ ಮಳೆಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮಳೆಯಿಂದಾಗಿ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು.ಸಧ್ಯ ಯಾವುದೇ ಹಾನಿ ಉಂಟಾಗಿಲ್ಲ.
ಮಂಗಳವಾರ ಕನಿಷ್ಠ ತಾಪಮಾನ 17.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇನ್ನು ಮೂರು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ .
ಇವು ಈ ಹೊತ್ತಿನ ಪ್ರಮುಖ ಸುದ್ದಿಗಳು ನಿರಂತರ ಸುದ್ದಿಗಳಿಗಾಗಿ ನೋಡ್ತಾಯಿರಿ ಕೃಷಿ ಜಾಗರಣ ಕನ್ನಡ ನಮಸ್ತೆ