ಇತ್ತೀಚೆಗೆ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಸುರಿದಂತ ಭಾರೀ ಮಳೆಯಿಂದಾಗಿ ಹಲವಾರು ಬೆಳೆಗಳು ಹಾಳಾದವು. ವಿಶೇಷವಾಗಿ ಈರುಳ್ಳಿ ಬೆಳೆ ಹೊಲದಲ್ಲಿಯೇ ಕೊಳೆತು ನಷ್ಟ ಉಂಟಾಗಿದ್ದರಿಂದ ಇತ್ತೀಚೆಗೆ ಈರುಳ್ಳಿ ಬೆಲೆ 100 ರ ಗಡಿ ದಾಟಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿತ್ತು.
ಈರುಳ್ಳಿ ದರ ನಿಯಂತ್ರಿಸಲು ಸರ್ಕಾರ ಆಮದು ರಪ್ತುವಿನಲ್ಲಿ ಕೆಲವು ನಿಯಮಗಳನ್ನು ಬದಲಾವಣೆ ತಂದಿತು ಆದರೂ ಇನ್ನು ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದಾಗಿ ತತ್ತರಿಸಿ ಹೋಗಿರುವ ಸಾಮಾನ್ಯ ಜನರ ನೆರವಿಗೆ ಬಂದ ಗೋವಾ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ನ್ಯೂಸ್ ನೀಡಿದೆ. ರೇಷನ್ ಕಾರ್ಡ್ ಹೊಂದಿರುವಂತ 3.5 ಲಕ್ಷ ಪಡಿತರ ಚೀಟಿದಾರರಿಗೆ ಸಬ್ಸಿಡಿ ದರದಲ್ಲಿ ಈರುಳ್ಳಿ ವಿತರಣೆ ಮಾಡಲು ಮುಂದಾಗಿದೆ.
ಸಬ್ಸಿಡಿ ದರದಲ್ಲಿ ಪಡಿತರಚೀಟಿದಾರರಿಗೆ ಈರುಳ್ಳಿ ವಿತರಿಸುವ ಪ್ರಸ್ತಾವನೆಗೆ ಇತ್ತೀಚೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದಿದೆ. ಈಗಾಗಲೇ ಮಹಾರಾಷ್ಟ್ರದ ನಾಸಿಕ್ ಮೂಲದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ಎನ್‌ಎಎಫ್‌ಇಡಿ) ದಿಂದ 1,045 ಮೆಟ್ರಿಕ್ ಟನ್ನಿನಷ್ಟು ಈರುಳ್ಳಿಯನ್ನು ಗೋವಾ ಸರ್ಕಾರ ಖರೀದಿಸಿದೆ.
ಒಟ್ಟು 3.5 ಲಕ್ಷ ರೇಷನ್ ಕಾರ್ಡ್ ಹೊಂದಿರುವವ ರಿದ್ದು, ಕೆ.ಜಿಗೆ 32 ದರದಂತೆ, ಪ್ರತಿ ಕಾರ್ಡ್‌ದಾರರಿಗೆ 3 ಕೆ.ಜಿ ಈರುಳ್ಳಿ ನೀಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗೋವಾ ಸರ್ಕಾರ ಪಡಿತರ ಚೀಟಿದಾರರಿಗೆ 32 ರೂಪಾಯಿಗೆ ಕೆಜಿ ಈರುಳ್ಳಿ ವಿತರಣೆ ಮಾಡಲು ಮುಂದಾಗಿದ್ದರಿಂದ ಅಲ್ಲಿನ ಜನತೆ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. ಗೋವಾ ಮಾದರಿಯನ್ನು ಇತರ ರಾಜ್ಯದವರು ಅನುಸರಿಸಿದರೆ ಇತರ ರಾಜ್ಯದ ಜನತೆಗೂ ಅನುಕೂಲವಾಗುತ್ತದೆ ಎಂದು ಸಾಮಾನ್ಯ ಜನ ಆಡಿಕೊಳ್ಳುತ್ತಿದ್ದಾರೆ. ಮುಂದೆ ಗೋವ ಸರ್ಕಾರದ ಮಾದರಿಯಲ್ಲಿ ಇತರ ರಾಜ್ಯಗಳು ಅನುಸರಿಸುತ್ತವೆಯೇ ಅಥವಾ ಈರುಳ್ಳಿ ದರವನ್ನು ನಿಯಂತ್ರಣಕ್ಕೆ ತರುತ್ತೇವೆಯೋ ಎಂಬುದನ್ನು ಕಾದು ನೋಡಬೇಕು.