ಏನಿದು?, ಹೊಸ ಹೆಸರು ಗೋ ಕೃಪಾಮೃತ ಜಲ ಎಂದು ನೀವು ಯೋಚನೆ ಮಾಡಬಹುದು. ಮಣ್ಣಿಗೆ ಮತ್ತು ಬೆಳೆಗಳಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗುವ ಒಂದು ಸೂಕ್ಷ್ಮಜೀವಿಗಳ ಗುಂಪು ಅಥವಾ ಸಮುಚ್ಛಯವನ್ನು ನಾವು ಗೋ ಕೃಪಾಮೃತ ಜಲ ಎಂದು ಕರೆಯುತ್ತೇವೆ. ಇದು ಬೆಳೆಗಳಿಗೆ ನವ ಚೈತನ್ಯವನ್ನು ತಂದುಕೊಡುವುದಲ್ಲದೆ ಇಳವರಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಭಾರತೀಯ ವೇದ ಸಂಸ್ಕೃತಿಯ ಪುನರುಜ್ಜೀವನ ಆಗಬೇಕೆಂಬ ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು ಸುಮಾರು 2006 ರಲ್ಲಿ ಗುಜರಾತ್‍ನ ಅಹಮದಾಬಾದ್‍ನಲ್ಲಿ “ಬನ್ಸಿ ಗಿರ್” ಗೋ ಶಾಲೆಯನ್ನು ಶ್ರೀ ಗೋಪಾಚ ಬಾಯಿ ಸುತಾರಿಜೀ ಆರಂಭ ಮಾಡಿದ್ದಾರೆ. ಗೋ ಆಧಾರಿತ ಕೃಷಿಯ ಕುರಿತ ಹೆಚ್ಚಿನ ಮಟ್ಟದಲ್ಲಿ ಅರಿವು ಮೂಡಿಸುತ್ತಾ, ಹಲವಾರು ವರ್ಷಗಳ ಸಂಶೋಧನೆಯ ಫಲವಾಗಿ ದೇಸಿ ಹಸುವಿನ ಪಂಚಗವ್ಯ ವಸ್ತುಗಳನ್ನು ಬಳಸಿಕೊಂಡು ತಯಾರು ಮಾಡಿದ ಉತ್ಪನ್ನವೇ ಗೋ ಕೃಪಾಮೃತ ಜಲ.
ಈ ಗೋ ಕೃಪಾಮೃತ ಜಲವನ್ನು ದೇಸಿ ಹಸುವಿನ ಪಂಚಗವ್ಯ ಉತ್ಪನ್ನಗಳಾದ ದೇಸಿ ಹಸುವಿನ ಸಗಣಿ, ಹಾಲು, ತುಪ್ಪ, ಗಂಜಲ, ಮತ್ತು ಮೊಸರನ್ನು ಬಳಸಿ ತಯಾರು ಮಾಡುತ್ತಾರೆ. ಇದರಲ್ಲಿರುವ ಸೂಕ್ಷ್ಮಜೀವಿಗಳು ಮಣ್ಣಿನಲ್ಲಿನ ಸಾರಜನಕವನ್ನು ಸ್ಥಿರೀಕರಿಸುವ ಜೊತೆಯಲ್ಲಿ ಮಣ್ಣಿನಲ್ಲಿರುವ ರಂಜಕವನ್ನು ಕರಗಿಸಿ, ಸ್ಥಿರೀಕರಿಸುತ್ತವೆ ಹಾಗೂ ಮಣ್ಣಿನ ಫಲವತ್ತತೆಯನ್ನು ಸುಧಾರಿಸುವುದಲ್ಲದೆ, ಬೆಳೆಗಳಿಗೆ ಮಣ್ಣಿನಿಂದ ಹರಡುವ ಶಿಲೀಂಧ್ರ ರೋಗಗಳ ಹತೋಟಿ ಮಾಡುತ್ತದೆ.
ತಯಾರು ಮಾಡುವ ವಿಧಾನ :
ಒಂದು ಡ್ರಂನಲ್ಲಿ 200 ಲೀಟರ್ ನೀರನ್ನು ತೆಗೆದುಕೊಳ್ಳಬೇಕು. ಅದಕ್ಕೆ 1 ಲೀಟರ್ ಗೋಕೃಪಾಮೃತ ಜಲ, 2 ಕೆ.ಜಿ ಸಾವಯವ ಬೆಲ್ಲ (ಕಪ್ಪು ಬೆಲ್ಲ) ಮತ್ತು 2 ಲೀಟರ್ ತಾಜಾ ದೇಸಿ ಹಸುವಿನ ಮಜ್ಜಿಗೆಯನ್ನು ಹಾಕಬೇಕು. ಹುಳಿ ಮಜ್ಜಿಗೆಯನ್ನು ಬಳಸಬಾರದು. ತದನಂತರ ವೃತ್ತಾಕಾರವಾಗಿ ಐದರಿಂದ-ಆರು ಭಾರಿ ಕೋಲಿನಿಂದ ತಿರುಗಿಸಬೇಕು, ನಂತರ ಡ್ರಂ ಅನ್ನು ಒಂದು ಹತ್ತಿಯ ತೆಳು ಪದರದ ಬಟ್ಟೆಯಿಂದ ಮುಚ್ಚಿ, ನೆರಳಿನಲ್ಲಿಡಬೇಕು. ಐದರಿಂದ-ಆರು ದಿನಗಳವರೆಗೆ ಪ್ರತಿದಿನ ಐದರಿಂದ-ಆರು ಭಾರಿ ವೃತ್ತಾಕಾರವಾಗಿ ಕೋಲಿನಿಂದ ತಿರುಗಿಸಬೇಕು. ಆರು ದಿನಗಳ ನಂತರ ಈ ಜಲ ಕೃಷಿಗೆ ಉಪಯೋಗಿಸಲು ಸಿದ್ದವಿರುತ್ತದೆ.
ಗೋ ಕೃಪಾಮೃತ ಜಲ ಬಳಸುವ ವಿಧಾನ :
- ಬಿತ್ತನೆಯ ನಂತರ ನೀರು ಹಾಯಿಸುವಾಗ, ಅದರ ಜೊತೆಯಲ್ಲಿ ಗೋಕೃಪಾಮೃತ ಜಲವನ್ನು ನೀಡಬಹುದು. ಮೊದಲನೇ ಬಾರಿಗೆ ಇದನ್ನು ಉಪಯೋಗಿಸುತ್ತಿದ್ದರೆ 1000 ಲೀಟರ್ ಪ್ರತಿ ಎಕರೆಗೆ ನೀಡಬೇಕು. ಎರಡನೇ ಅಥವಾ ಮೂರನೇ ಭಾರಿ ಉಪಯೋಗಿಸುತ್ತಿದ್ದರೆ 600-700 ಲೀಟರ್ ಪ್ರತಿ ಎಕರೆಗೆ ಬಳಸಬೇಕು.
- ಬೆಳೆಗಳಿಗೆ ಸಿಂಪಡಣೆ ಮಾಡುವ ವಿಧಾನ : ನೀವು ತಯಾರಿಸಿದ ಗೋ ಕೃಪಾಮೃತ ಜಲದಲ್ಲಿ 2 ಲೀಟರ್ ಅನ್ನು 10-13 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಸ್ಯ ಬೆಳವಣಿಗೆಯ ಹಂತದಲ್ಲಿ ಸಿಂಪಡಣೆ ಮಾಡುವುದರಿಂದ ಇದು ಬೆಳೆ ವರ್ಧಕವಾಗಿ ಕೆಲಸ ಮಾಡುವುದಲ್ಲದೆ, ಹಲವಾರು ರೋಗಕಾರಕ ಸೂಕ್ಷ್ಮಣು ಜೀವಿಗಳನ್ನು ಮತ್ತು ಬೆಳೆ ಹಾಳುಮಾಡುವ ಕೀಟಗಳ ಹತೋಟಿ ಮಾಡುತ್ತದೆ.
ಗೋ ಕೃಪಾಮೃತ ಜಲವನ್ನು ಯಾವಾಗ ಬಳಸಬೇಕು ?
- ಬಿತ್ತನೆ ಮಾಡಿದ ನಂತರದಿಂದ ಹಿಡಿದು 30-40 ದಿನಗಳವರೆಗೆ ನೀರಿನ ಮುಖಾಂತರ ಕೊಡಬಹುದು. ಈ ಹಂತದಲ್ಲಿ ನೀಡಿದರೆ ಹೆಚ್ಚಿನ ಉಪಯೋಗವಾಗುತ್ತದೆ, ಏಕೆಂದರೆ ಬೆಳೆಗಳು ಅವಕ್ಕೆ ಬೇಕಾದ ಪೋಷಕಾಂಶಗಳನ್ನು ಭೂಮಿಯಿಂದ ಹೀರಿಕೊಳ್ಲುವುದರಿಂದ, ಭೂಮಿಗೆ ಆ ಪೋಷಕಾಂಶಗಳನ್ನು ಒದಗಿಸುವಲ್ಲಿ ಈ ಜಲದಲ್ಲಿರುವ ಸೂಕ್ಷ್ಮಜೀವಿಗಳ ಪಾತ್ರ ಹೆಚ್ಚು ಸಹಕಾರಿ, ಆದ್ದರಿಂದ ಬಿತ್ತನೆ ಮಾಡಿದ ನಂತರದ 30-40 ದಿನಗಳವರೆಗೆ, 5-6 ದಿನಗಳ ಅವಧಿಯ ಅಂತರದಲ್ಲಿ ಬೆಳೆಗೆ ನೀರು ಕೊಡುವುದರ ಜೊತೆಯಲ್ಲಿ ಕೊಡಬೇಕು.
- ಸಸ್ಯ ಬೆಳವಣಿಗೆಯ ಹಂತದಲ್ಲಿಯೂ ಸಹಾ ವಾರಕ್ಕೊಮ್ಮೆ ಸಿಂಪಡಣೆ ಮಾಡುವುದರಿಂದ ಸಸ್ಯವರ್ಧಕವಾಗಿ ಕೆಲಸ ಮಾಡುತ್ತದೆ.
- ಬಹು ಮುಖ್ಯವಾಗಿ ಇದನ್ನು ಹೂವು ಹಾಗು ಕಾಯಿ ಕಚ್ಚುವ ಹಂತದಲ್ಲಿ ಸಿಂಪಡಣೆ ಮಾಡುವುದರಿಂದ, ಹಲವಾರು ರೋಗಗಳನ್ನು ಮತ್ತು ಕೀಟಗಳ ಹತೋಟಿ ಮಾಡುತ್ತದೆ.
ತಯಾರು ಮಾಡಿದ 200 ಲೀಟರ್ ಗೋಕೃಪಾಮೃತ ಜಲದಲ್ಲಿ 20-30 ಲೀಟರ್ ತೆಗೆದಿಟ್ಟು ಉಳಿದದ್ದನ್ನು ಉಪಯೋಗಿಸಬೇಕು. ಆ 20-30 ಲೀಟರ್ ಗೆ 170-180 ಲೀಟರ್ ನೀರು, 2 ಕೆ.ಜಿ ಸಾವಯವ ಬೆಲ್ಲ ಮತ್ತು 2 ಲೀಟರ್ ತಾಜಾ ದೇಸಿ ಹಸುವಿನ ಮಜ್ಜಿಗೆ ಸೇರಿಸಿ ಮತ್ತೆ ಗೋಕೃಪಾಮೃತ ಜಲ ತಯಾರು ಮಾಡಬಹುದು. ಹೀಗೆ ಪದೇ ಪದೇ ನಾವೇ ತಯಾರು ಮಾಡಬಹುದು. ಆದರೆ ನಾವು ಮೊದವು ತಯಾರು ಮಾಡಲು ಬೇಕಾಗಿರುವ 1 ಲೀಟರ್ ಗೋಕೃಪಾಮೃತ ಜಲ ಯಾರ ಹತ್ತಿರ ಪಡೆಯಬೇಕೆಂಬುದು ಮುಂದಿನ ಪ್ರಶ್ನೆ? ಹೌದು, ಈ ಗೋಕೃಪಾಮೃತ ಜಲವನ್ನು ಆಗಲೇ ಕರ್ನಾಟಕದ ಹಲವಾರು ರೈತರು ಬಳಸುತ್ತಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ ಅವರಿಂದ ಉಚಿತವಾಗಿ ಆಸಕ್ತ ರೈತರು 1 ಲೀಟರ್ ಗೋಕೃಪಾಮೃತ ಜಲವನ್ನು ಪಡೆಯಬಹುದು ಅಲ್ಲದೇ ಕೋರಿಯರ್ ಮಖಾಂತರವೂ ಸಹಾ ನೀವು ಪಡೆಯಬಹುದಾಗಿದ್ದು ಕೋರಿಯರ್ ವೆಚ್ಚ ಮಾತ್ರ ನೀವು ಭರಿಸಬೇಕಾಗುತ್ತದೆ. ಆಸಕ್ತ ರೈತರು ಈ ಕೆಳಗಿನ ಕೃಷಿಕರನ್ನು ಸಂಪರ್ಕಿಸಿ ಗೋ ಕೃಪಾಮೃತ ಜಲವನ್ನು ಪಡೆಯಬಹುದಾಗಿದೆ.
ಬಸವರಾಜ್ (ನವಲಗುಂದ)-7338238945, ನವೀನ್ (ಹುಬ್ಬಳ್ಳಿ)-8867005688, ಮಂಜುನಾಥ್ (ಹಾವೇರಿ)-8073235089, ಪ್ರಭು ಸ್ವದೇಶಿ (ಬೀದರ್)-7406606080, ಕಲ್ಬುರ್ಗಿ ಅನಿಲ್-9880364163, ಮಂಜುನಾಥ್ (ದಾವಣಗೆರೆ)-9535527671, ತಿಮ್ಮಣ್ಣ (ಬಾಗಲಕೋಟೆ) -9900140369/8095361979, ಮಲಿಕ್ ನದಾಫ್ (ರಾಯಚೂರು) -9741874505, ಈಶ್ವರಪ್ಪ (ಶಿವಮೊಗ್ಗ)-9448912694, ಶಿವಕುಮಾರ್ (ತುಮಕೂರು)- 8884686032, ಗಂಗಾಧರ್ (ನೆಲಮಂಗಲ)-9986045009, ಲೋಹಿತ್ (ಬೆಂಗಳೂರು)-9986890484, ನಾಗರಾಜ (ಧಾರವಾಡ) -8970560476, ರವಿಶಂಕರ್ (ಹಾವೇರಿ)-8904240949, ಆನಂದ್ (ತುಮಕೂರು)-8453663378.
ಲೇಖಕರು: ರಾಖೇಶ್.ಎಸ್
ಪ್ರಥಮ ವರ್ಷದ ಎಂ.ಎಸ್ಸಿ (ಕೃಷಿ)
ಕೃಷಿ ಕೀಟಶಾಸ್ತ್ರ ವಿಭಾಗ
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು-584104.