News

"ಬೆಳೆದವರ ಪಾಲಿಗೆ ಖಾರವಾಗಿ ಪರಿಣಮಿಸಿದ ಶುಂಠಿ: ಬೆಲೆಯಲ್ಲಿ ಏಕಿಷ್ಟು ಏರಿಳಿತ?"

21 September, 2021 3:12 PM IST By:

ಭಾರತದಲ್ಲಿ ಬೆಳೆಯುವ ಮತ್ತು ಇಲ್ಲಿಂದ ಬೇರೆ ದೇಶಗಳಿಗೆ ಹೆಚ್ಚಾಗಿ ರಫ್ತಾಗುವ ಪ್ರಮುಖ ಮಸಾಲೆ ಪಧಾರ್ಥಗಳಲ್ಲಿ ಶುಂಠಿ ಪ್ರಮುಖ ಬೆಳೆ. ಈಗ್ಗೆ ಐದಾರು ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಭಾರತದಲ್ಲಿ ಶುಂಠಿ ಬೆಳೆಯುವ ಕ್ಷೇತ್ರ ಸಾಕಷ್ಟು ವಿಸ್ತರಣೆಯಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಶುಂಠಿ ರೈತರ ಫೇವರಿಟ್ ಬೆಳೆ ಎಂದರೂ ತಪ್ಪಾಗಲಾರದು.

ಮೊದಲೆಲ್ಲಾ ಮಲೆನಾಡಿನ ಭಾಗಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಶುಂಠಿ ಬೆಳೆ ಈಗ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳನ್ನೂ ವ್ಯಾಪಿಸಿದೆ. ಅಸ್ಸಾಂನಲ್ಲಿ ದೇಶದಲ್ಲೇ ಅತಿ ಹೆಚ್ಚು ಶುಂಠಿ ಬೆಳೆಯಲಾಗುತ್ತದೆ. ಅದರ ನಂತರದ ಸ್ಥಾನದಲ್ಲಿರುವುದು ಗುಜರಾತ್ ರಾಜ್ಯ. 2018ರಲ್ಲಿ ಬರೋಬ್ಬರಿ 167.39 ಸಾವಿರ ಮೆಟ್ರಿಕ್ ಟನ್ ಶುಂಠಿ ಬೆಳೆದಿದ್ದ ಅಸ್ಸಾಂ ರಾಜ್ಯ ದಾಖಲೆ ನಿರ್ಮಿಸಿತ್ತು. ಅದೇ ವರ್ಷ ಮಹಾರಾಷ್ಟçದ ರೈತರು ಒಟ್ಟು 140 ಸಾವಿರ ಮೆಟ್ರಿಕ್ ಟನ್ ಬೆಳೆ ತೆಗೆದಿದ್ದರು. ಇನ್ನು ಆರಂಭದಲ್ಲಿ ಅತಿ ಹೆಚ್ಚು ಶುಂಠಿ ಬೆಳೆಯುವ ರಾಜ್ಯಗಳೆನಿಸಿದ್ದ ಪಶ್ಚಿಮ ಬಂಗಾಳ ಮತ್ತು ಗುಜರಾತ್ ರಾಜ್ಯಗಳು ಕ್ರಮವಾಗಿ 130.4 ಮತ್ತು 108.25 ಸಾವಿರ ಮಎಟ್ರಿಕ್ ಟನ್ ಶುಂಠಿ ಉತ್ಪಾದಿಸಿದ್ದವು. 2018ರಲ್ಲಿ ಕರ್ನಾಟಕದ ರೈತರು ಬೆಳೆದ ಶುಂಠಿ 58.39 ಸಾವಿರ ಮಟ್ರಿಕ್ ಟನ್.

ಲಾಭದಾಯಕ ಬೆಳೆ, ಆದರೆ...

ರಾಜ್ಯದ ರೈತರ ವಲಯದಲ್ಲಿ ಶುಂಠಿ ಒಂದು ಲಾಭದಾಯಕ ಬೆಳೆಯಾಗಿ ಗುರುತಿಸಿಕೊಂಡಿದೆ. ಕಡಿಮೆ ಪ್ರದೇಶದಲ್ಲಿ ಬೆಳೆದರೂ ಅತಿ ಹೆಚ್ಚು ಹಣ ಅಥವಾ ಆದಾಯ ತಂದುಕೊಡುವ ಬೆಳೆಯಾದ್ದರಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳ ರೈತರು ಶುಂಠಿ ಬೆಳೆ ಮೊರೆ ಹೋಗಿದ್ದಾರೆ. ಶುಂಠಿ ಬೆಳೆಯುವ ಕ್ಷೇತ್ರದಲ್ಲಾದ ವಿಸ್ತರಣೆಯೇ ಇಂದು ಬೆಳೆಗಾರರಿಗೆ ಮುಳುವಾಗಿ ಪರಿಣಮಿಸಿದೆ. ಒಂದು ಮೂಲದಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕದಲ್ಲಿ ಶುಂಠಿ ಬೆಳೆಯುವ ಪ್ರದೇಶ 73,230 ಹೆಕ್ಟೇರ್‌ನಷ್ಟು ವಿಸ್ತರಣೆಯಾಗಿದೆ. ಫಶ್ಚಿಮಘಟ್ಟದ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಮತ್ತು ಮೈಸೂರು ಜಿಲ್ಲೆಗಳಿಗೆ ಸೀಮಿತವಾಗಿದ್ದ ಶುಂಠಿ ಬೆಳೆ ಇಂದು ಬಯಲುಸೀಮೆ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ವ್ಯಾಪಿಸಿದೆ. ಉತ್ಪಾದನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶುಂಠಿ ಬೆಲೆ ದಿಢೀರ್ ಕುಸಿದು, ಬೆಳೆಗಾರರು ಕಣ್ನೀರಿನಲ್ಲಿ ಕೈ ತೊಳೆಯುವಂತಾಗಿದೆ.

ಕ್ವಿಂಟಾಲ್‌ಗೆ 500 ರೂ. ತಲುಪಿದ ಬೆಲೆ

ದೇಶದಲ್ಲಿ ಕೊರೊನಾ ಸೋಂಕು ವ್ಯಾಪಿಸಿ ಲಾಕ್‌ಡೌನ್ ಜಾರಿಯಾದ ಬಳಿಕ ಶುಂಠಿಗೆ ಎಲ್ಲಿಲ್ಲದ ಮಹತ್ವ ಬಂತು. ಶುಂಠಿ ಕಶಾಯದಿಂದ ಕೊರೊನಾ ತಡೆಯಬಹುದೆಂಬ ಕಾರಣಕ್ಕಾಗಿ ಜನ ಹೆಚ್ಚು ಹೆಚ್ಚು ಶುಂಠಿ ಖರೀದಿಗೆ ಮುಂದಾಗಿದ್ದರು. ಪರಿಣಾಮ 2020ರ ಏಪ್ರಿಲ್-ಮೇ ತಿಂಗಳಲ್ಲಿ ಒಂದು ಕ್ವಿಂಟಾಲ್ ಹಸಿ ಶುಂಠಿ ಬೆಲೆ 7000 ರೂ. ತಲುಪಿತ್ತು. ಆದರೆ ವಾರದ ಹಿಂದಷ್ಟೇ ಶುಂಠಿ ಬೆಲೆ ಕನಿಷ್ಠ ಮಟ್ಟ ತಲುಪಿದ್ದು, 60 ಕೆ.ಜಿ ತೂಕದ ಒಂದು ಚೀಲ ಶುಂಠಿ ಕೇವಲ 300-400 ರೂ.ಗೆ ಮಾರಾಟವಾಗಿದೆ. ಇದೀಗ ಬೆಲೆ ಚೇತರಿಸಿಕೊಂಡಿದೆ ಎಂದು ಹೇಳಲಾಗುತ್ತಿದೆಯಾದರೂ ಬಹುತೇಕ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ಕ್ವಿಂಟಾಲ್‌ಗೆ 800ರಿಂದ 1200 ರೂ. ಮಾತ್ರ ಸಿಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಬೆಲೆ ಇಷ್ಟೊಂದು ಕುಸಿಯಲು ಕಾರಣವೇನು?

ಬೆಲೆ ಕುಸಿತಕ್ಕೆ ಮೊದಲ ಕಾರಣ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಶುಂಠಿ ಬೆಳೆಯುವ ಕ್ಷೇತ್ರ ಹೆಚ್ಚಾಗಿರುವುದು. ಉತ್ಪಾದನೆ ಹೆಚ್ಚಾಗುಗಿರುವ ಕಾರಣ ದರ ಕುಸಿದಿದೆ. ಇನ್ನೊಂದೆಡೆ ಮಲೆನಾಡು ಜಿಲ್ಲೆಗಳಲ್ಲಿ ಕೇರಳದ ಶುಂಠಿ ಬೆಳೆಗಾರರ ಹಾವಳಿ ಹೆಚ್ಚಾಗಿದೆ. ಒಂದು ಅಂದಾಜಿನ ಪ್ರಕಾರ ಕೇರಳದ ರೈತರು ರಾಜ್ಯದ ಸುಮಾರು 34,000 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆಯುತ್ತಿದ್ದಾರೆ. ಇದೆಲ್ಲವೂ ಹೊಸದಾಗಿ ಶುಂಠಿ ಬೆಳೆಯುವ ಪ್ರದೇಶವಾಗಿದೆ. ಇದರೊಂದಿಗೆ ಕೇರಳದಲ್ಲಿ ಬೆಳೆದ ಶುಂಠಿ ಕೂಡ ರಾಜ್ಯದ ಮಾರುಕಟ್ಟೆ ಪ್ರವೇಶಿಸುತ್ತಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿರುವುದರಿAದ ಸಾರ್ವಜನಿಕರ ವಲಯದಲ್ಲಿ ಶುಂಠಿ ಬಳಕೆ ಕಡಿಮೆಯಾಗಿ, ಬೇಡಿಕೆ ಕುಸಿದಿರುವುದು ಸಹ ಬೆಲೆ ಕುಸಿತಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಾರುಕಟ್ಟೆ ದರವೇ ಬೇರೆ; ಖರೀದಿ ದರವೇ ಬೇರೆ!

ಪ್ರಸ್ತುತ ಮಾರುಕಟ್ಟೆಯಲ್ಲಿ ಹಳೇ ಶುಂಠಿಗೆ ಬೆಲೆ ಹೆಚ್ಚಾಗಿದೆ. ಹಳೇ (ಹಿಂದಿನ ಬೆಳೆ) ಶುಂಠಿ ಇದ್ದರೆ ಹೇಳಿ ಒಂದು ಬ್ಯಾಗ್‌ಗೆ (60 ಕೆ.ಜಿ) 2,000 ರೂ. ಕೊಡುತ್ತೇವೆ ಎನ್ನುವ ವ್ಯಾಪಾರಿಗಳು, ಹೊಸ ಶುಂಠಿಯ ಒಂದು ಬ್ಯಾಗ್‌ಗೆ ಕೇವಲ 800-900 ರೂ. ನೀಡುತ್ತಿದ್ದಾರೆ. ಒಂದು ಬ್ಯಾಗ್ ಹೊಸ ಶುಂಠಿಗೆ ಮಾರುಕಟ್ಟೆಯಲ್ಲಿ 1,000 ದಿಂದ 1500 ರೂ. ಇದೆ ಎಂದು ಹೇಳಲಾಗುತ್ತಿದೆಯಾದರೂ ರೈತರಿಗೆ ಸಿಗುತ್ತಿರುವುದು 800 ರೂ. ಮಾತ್ರ. ‘ಪರಿಸ್ಥಿತಿಯ ದುರುಪಯೋಗ ಪಡೆಯುತ್ತಿರುವ ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ರೈತರನ್ನು ವಂಚಿಸಿ ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಾ ವ್ಯಾಪಾರಿಗಳು ಒಂದಾಗಿದ್ದು, ಯಾರೊಬ್ಬರೂ ಹೆಚ್ಚು ಬೆಲೆಗೆ ಕೊಳ್ಳುತ್ತಿಲ್ಲ. ಎಲ್ಲರೂ ಒಂದೇ ಬೆಲೆ ಹಿಡಿದು ಕುಳಿತಿದ್ದಾರೆ. ಹೀಗಿರುವಾಗ ವ್ಯಾಪಾರಿಗಳು ನಿಗದಿಪಡಿಸುವ ಬೆಲೆಗೆ ಮಾರಾಟ ಮಾಡುವುದು ಅನಿಯಾರ್ಯವಾಗಿದೆ,’ ಎನ್ನುತ್ತಾರೆ ಶಿವಮೊಗ್ಗ ಜಿಲ್ಲೆ ಶಿಖಾರಿಪುರ ತಾಲೂಕಿನ ಶುಂಠಿ ಬೆಳೆಗಾರ ವಿಜಯ್ ಗದ್ದಿಗೌಡ.

ಬೆಂಬಲ ಬೆಲೆ ನೀಡಲು ಆಗ್ರಹ

ಮಾರುಕಟ್ಟೆಗಳಲ್ಲಿ 60 ಕೆ.ಜಿ ತೂಗುವ ಒಂದು ಚೀಲ ಶುಂಠಿಗೆ ಕೇವಲ 800-900 ರೂ. ಸಿಗುತ್ತಿರುವ ಹಿನ್ನೆಲೆಯಲ್ಲಿ ಶುಂಠಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ರಾಜ್ಯದ ವಿವಿಧ ರೈತ ಸಂಘಟನೆಗಳು ಆಗ್ರಹಿಸಿವೆ. ಈಗಿರುವ ದರ ರೈತರು ಬೆಳೆ ನಿರ್ವಹಣೆಗೆ ಮಾಡಿದ ವೆಚ್ಚಕ್ಕು ಕೂಡ ಸರಿ ಹೋಗುತ್ತಿಲ್ಲ. ಆದ್ದರಿಂದ ಸರ್ಕಾರ ಶುಂಠಿಗೆ 1800 ರೂಪಾಯಿ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂಬುದು ರೈತ ಮುಖಂಡರ ಆಗ್ರಹವಾಗಿದೆ.