News

ಮನೆಯಲ್ಲಿಯೇ ಕುಳಿತು ಇ ಸಂಜೀವಿನಿ ಆ್ಯಪ್ ಮೂಲಕ ಉಚಿತವಾಗಿ ಚಿಕಿತ್ಸೆ ಪಡೆಯಿರಿ

28 April, 2021 5:33 PM IST By:
E sanjeevini

ಸಾಮಾನ್ಯ ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿದ್ದೀರಾ..? ಹಾಗಾದರೆ ಚಿಂತೆ ಬಿಡಿ. ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ ಸಾಕು. ವೈದ್ಯರೇ ಅಗತ್ಯ ಮಾಹಿತಿ ನೀಡುತ್ತಾರೆ! ಹೌದು ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರಿಂದ ಕೇಂದ್ರ ಸರ್ಕಾರವು ಮನೆಯಲ್ಲಿಯೇ ಕುಳಿತು ವೈದ್ಯರಿಂದ ಚಿಕಿತ್ಸೆ ಪಡೆಯಲು ಇ ಸಂಜೀವಿನಿ ಆ್ಯಪ್ ಸಿದ್ದಪಡಿಸಿದೆ.

ಸಾಮಾನ್ಯ ತಲೆನೋವು, ಮೈಕೈ ನೋವು, ಜ್ವರ, ನೆಗಡಿ, ಕೆಮ್ಮು ಸೇರಿದಂತೆ ಆರೋಗ್ಯದ ಸಮಸ್ಯೆಗಳಿಗೆ ನೇರವಾಗಿ ಆಸ್ಪತ್ರೆಗೆ ತೆರಳುವ ಅಗತ್ಯವಿಲ್ಲ. ಆನ್ ಲೈನ್ ಮೂಲಕವೇ ವೀಡಿಯೋ ಕಾಲ್ ಮೂಲಕ ವೈದ್ಯರನ್ನು ಸಂಪರ್ಕಿಸಲು ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ಆರಂಭಿಸಿದೆ. ಅದುವು ಇ ಸಂಜೀವಿನಿ. ಹಾಗಾದರೆ ಈ ಸಂಜೀವಿನಿ ಯೋಜನೆ ಎಂದರೇನು? ಹೇಗೆ ಕೆಲಸ ಮಾಡುತ್ತದೆ ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ.

 ರೋಗಿಯು ಮನೆಯಲ್ಲಿ ಕುಳಿತು ಚಿಕಿತ್ಸೆ ಪಡೆಯಲು ಕೇಂದ್ರ ಆರೋಗ್ಯ ಸಚಿವಾಲಯ ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ (ನ್ಯಾಷನಲ್ ಟೆಲಿ ಕನ್ಸ್‍ಲ್ಟೇಷನ್ ಸರ್ವಿಸ್) ಎಂಬ ಹೆಸರಿನಲ್ಲಿ ಇ ಸಂಜೀವಿನಿ ಆ್ಯಪ್ ಸಿದ್ಧಪಡಿಸಿದೆ. ಈ ಸಂಜೀವಿನಿ ಮೂಲಕ ಮನೆಯಲ್ಲಿಯೇ ಕುಳಿತು ವೈದ್ಯರ ಜೊತೆ ಸಮಾಲೋಚನೆ ನಡೆಸಲು ಸಾಧ್ಯವಿದೆ. ವೈದ್ಯರು ವೀಡಿಯೇ ಕಾಲ್ ಮೂಲಕ ಸಂಪರ್ಕಿಸಿ ಪರಿಶೀಲನೆ ನಡೆಸಲಿದ್ದಾರೆ. ಸಮಸ್ಯೆಗೆ ಔಷಧಿ ತೆಗೆದುಕೊಳ್ಳಲು ಸಲಹೆ ನೀಡಲಿದ್ದಾರೆ. (ಇ ಪ್ರಿಸಕ್ರಿಪ್ಷನ್ ಮೊಬೈಲಿಗೆ ಕಳುಹಿಸಿ ಕೊಡಲಿದ್ದಾರೆ) ಇದೆಲ್ಲವೂ ಅಂತರ್ಜಾಲದ ಮೂಲಕವೇ ನಡೆಯಲಿದೆ. ಇ ಪ್ರಿಸ್ ಕ್ರಿಪ್ಷನ್ ತೋರಿಸಿ ಮೆಡಿಕಲ್ ನಲ್ಲಿ ತೋರಿಸಿ ಔಷಧಿ ಪಡೆಯಬಹುದು.

ಇ ಸಂಜೀವಿನಿ ಆ್ಯಪ್ ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಸಂಜೀವಿನ ವೆಬ್ ಸೈಟ್ ಅಥವಾ ಆ್ಯಪ್ ಮೂಲಕ ರೋಗಿ ಅಥವಾ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಿರಿಯ ನಾಗರಿಕರು ನೋಂದಣಿ ಮಾಡಿಸಿಕೊಳ್ಳಬೇಕು. ನಿಮ್ಮ ಮೊಬೈಲ್ ನಂಬರ್ ನಮೂದಿಸಿಕೊಳ್ಳಬೇಕು. ಮೊಬೈಲ್ ನಂಬರಿಗೆ  ಬರುವ ಓಟಿಪಿ ನಮೂದಿಸಬೇಕು. ರೋಗಿಯ ವಿವರ, ವಿಳಾಸ, ಜಿಲ್ಲೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಎಲ್ಲಾ ವಿವರಗಳನ್ನು ಸಲ್ಲಿಕೆ ಮಾಡಿದ ನಂತರ ನಮೂದಿಸಿದ ಮೊಬೈಲ್ ನಂಬರಿಗೆ ವೈದ್ಯರು ವೀಡಿಯೋ ಕಾಲ್ ಮಾಡಲಿದ್ದಾರೆ. ಆನ್ ಲೈನ್ ಮೂಲಕ ಸಮಸ್ಯೆಗೆ ಉತ್ತರ ನೀಡಲಿದ್ದಾರೆ. ಇದು ಸಂಪೂರ್ಣ ಉಚಿತವಾಗಿರಲಿದೆ. ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ವೈದ್ಯಕೀಯ ಸೇವೆ ಲಭ್ಯವಿದೆ. ಒಮ್ಮೆ ನೋಂದಣಿ ಆದವರು ಮತ್ತೊಮ್ಮೆ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಥವಾ ನೋಂದಣಿಗಾಗಿ  https://esanjeevaniopd.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಪೇಷಂಟ್ ರೆಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಬೇಕು. ಮೊಬೈಲ್ ನಂಬರ್  ನಮೂದಿಸಿ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ಜನರಲ್ ಓಪಿಡಿ ಅಥವಾ ಸ್ಪೇಷಲ್ ಓಪಿಡಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡ ನಂತರ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಿದರೆ ಮೊಬೈಲ್ ನಂಬರಿಗೆ ಓಟಿಪಿ ಬರಲಿದೆ. ಆಗ ಅಲ್ಲಿ ನೀವು ಓಟಿಪಿ ನಮೂದಿಸಿ ಮುಂದಿನ ಪ್ರಕ್ರಿಯೇ ಮುಂದುವರಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ವೆಬ್‌ ವಿಡಿಯೋ ಮೂಲಕ ಸಂಪರ್ಕಕ್ಕೆ ಬರುವ ವೈದ್ಯರ ಬಳಿ ಕಾಡುತ್ತಿರುವ ಸಮಸ್ಯೆ ಕುರಿತು ವಿವರಿಸಿದರೆ ಸಮಸ್ಯೆಗೆ ತಕ್ಕಂತೆ ಚಿಕಿತ್ಸೆ ನೀಡಲಿದ್ದಾರೆ.

ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಅನ್ಯ ರೋಗಗಳಿಗೆ ಚಿಕಿತ್ಸೆ ಸಿಗದಂತಾಗಿದೆ. ಇದರಿಂದ ಸಣ್ಣಪುಟ್ಟ ಕಾಯಿಲೆ ಇರುವ ಸಾಕಷ್ಟು ಜನ ಮನೆಯಿಂದ ಹೊರ ಬರಲು ಭಯಪಡುತ್ತಿದ್ದಾರೆ. ಹಾಗಾಗಿ ಮನೆಯಲ್ಲೇ ಜನರಿಗೆ ಆರೋಗ್ಯ ಮಾಹಿತಿ ನೀಡುವ ಉದ್ದೇಶದಿಂದ ಈ ಆ್ಯಪ್‌ ಬಿಡುಗಡೆ ಮಾಡಲಾಗಿದೆ