ರೈತರು ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳಡಿ ಸೌಲಭ್ಯ ಪಡೆಯಲು ಹಾಗೂ ರೈತರ ಒಂದೇ ಸೂರಿನಡಿ ಸಮಗ್ರ ಮಾಹಿತಿಯನ್ನು ದಾಖಲಿಸಲು ಸರ್ಕಾರವು ಫ್ರೂಟ್ಸ್‍ತಂತ್ರಾಂಶ ಅಭಿವೃದ್ಧಿಪಡಿಸಿದೆ.
ಜಿಲ್ಲೆಯ ಎಲ್ಲಾ ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ವಿವರಗಳನ್ನು ದಾಖಲಿಸುವ ಮೂಲಕ ನೋಂದಾಯಿಸಿಕೊಂಡು ಫ್ರೂಟ್ಸ್ ಗುರುತಿನ ಸಂಖ್ಯೆಯನ್ನು (ಎಫ್.ಐ.ಡಿ. ನಂಬರ್) ಪಡೆದುಕೊಳ್ಳಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ರೈತರು ಅಗತ್ಯ ದಾಖಲೆಗಳಾದ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಆದಾಯ ಪ್ರಮಾಣಪತ್ರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣಪತ್ರಗಳ ದಾಖಲೆ ಹಾಗೂ ಭಾವಚಿತ್ರದೊಂದಿಗೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ನಾಡ ಕಚೇರಿ, ಗ್ರಾಮ ಪಂಚಾಯಿತಿ, ಸಂಬಂಧಪಟ್ಟ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ತಮ್ಮ ಮಾಹಿತಿ ಸಲ್ಲಿಸಿ ಎಫ್.ಐ.ಡಿ. ನಂಬರ್ ಪಡೆಯಬಹುದಾಗಿದೆ.
ಈ ಗುರುತಿನ ಚೀಟಿಯಿಂದ ರೈತರು ಬೆಳೆ ಸಾಲ, ಪಿಎಂ ಕಿಸಾನ್ ಮುಂತಾದ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಸಹಕಾರಿಯಾಗುವುದಲ್ಲದೇ ಕಚೇರಿಗಳಲ್ಲಿ ವ್ಯಯಿಸಬೇಕಾದ ಸಮಯವನ್ನು ಉಳಿಸಬಹುದಾಗಿದೆ.
ರೈತರಿಗೆ ಇದು ಒಂದು ಗುರುತಿನ ಚೀಟಿಯಾಗಿದ್ದು, ಜಿಲ್ಲೆಯ ಎಲ್ಲಾ ರೈತರು ಕಡ್ಡಾಯವಾಗಿ ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.