News

ಒಂದೇ ರೆಂಬೆಯಲ್ಲಿ 839 ಟೊಮೇಟೊ ಹಣ್ಣು ಬೆಳೆದು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಇಂಗ್ಲೆಂಡ್ ರೈತ

25 September, 2021 4:51 PM IST By:
ಟೊಮೇಟೊ ಗಿಡದೊಂದಿಗೆ ಡೌಗ್ಲಸ್ ಸ್ಮಿತ್.

ಕೃಷಿ ವಲಯ ಪ್ರತಿ ದಿನ, ಪ್ರತಿ ಕ್ಷಣ ಒಂದಿಲ್ಲೊAದು ಅಚ್ಚರಿಗಳಿಂದ ಗಮನ ಸೆಳೆಯುತ್ತಲೇ ಇರುತ್ತದೆ. ಇಲ್ಲಿ ಆವಿಷ್ಕಾರಗಳಿಗೆ ಕೊರತೆಯಿಲ್ಲ. ಪ್ರತಿ ಬಾರಿಯೂ ಹೊಸ ಹುರುಪು, ಹುಮ್ಮಸ್ಸು ಹಾಗೂ ಉತ್ಸಾಹದೊಂದಿಗೆ ಕೈ ಕೆಸರು ಮಾಡಿಕೊಳ್ಳುವ ಕೃಷಿಕರು, ಏನಾದರೊಂದು ಸಾಧನೆ ಮಾಡುತ್ತಲೇ ಇರುತ್ತಾರೆ. ಆದರೆ ಈ ಸಾಧನೆಗಳ ಹಿಂದೆ ಸತತ ಪರಿಶ್ರಮ ಇದ್ದೇ ಇರುತ್ತದೆ.

ಹೀಗೆ ನಿರಂತರ ಪರಿಶ್ರಮದ ಫಲವಾಗಿ ಇಲ್ಲೊಬ್ಬ ರೈತ ದಾಖಲೆಯ ಟೊಮೇಟೊ ಬೆಳೆ ತೆಗೆದಿದ್ದಾನೆ. ಟೊಮೇಟೊ ಗಿಡದ ಒಂದು ರೆಂಬೆಯಲ್ಲಿ ಹತ್ತಲ್ಲ, ಇಪ್ಪತ್ತಲ್ಲ ಬರೋಬ್ಬರಿ 839 ಟೊಮೇಟೊ ಹಣ್ಣುಗಳನ್ನು ಬೆಳೆದು ಇಡೀ ರೈತ ಸಮುದಾಯವೇ ಹುಬ್ಬೇರಿಸುವಂತೆ ಮಾಡಿದ್ದಾನೆ. ಒಂದು ಗಿಡದಲ್ಲೇ ಇಷ್ಟೊಂದು ಟೊಮೇಟೊ ಬೆಳೆಯುವುದು ಅಸಾಧ್ಯ. ಅಂಥದರಲ್ಲಿ ಒಂದೇ ರೆಂಬೆಯಲ್ಲಿ ಇಷ್ಟೊಂದು ಟೊಮೇಟೊ ಬೆಳೆಯಲು ಹೇಗೆ ಸಾಧ್ಯ ಅಂತೀರಾ? ಇದಕ್ಕೆ ಉತ್ತರ ಬೇಕೆಂದರೆ ನೀವು ಮುಂದಕ್ಕೆ ಓದಲೇಬೇಕು.

ಈ ಚಮತ್ಕಾರ ನಡೆದಿರುವುದು ಭಾರತದಲ್ಲಂತೂ ಅಲ್ಲ. ದೂರದ ಇಂಗ್ಲೆಂಡ್‌ನಲ್ಲಿ. ಆದರೆ, ಜಗತ್ತಿನ ಯಾವ ದೇಶದಲ್ಲೂ ಒಂದೇ ಗಿಡದಲ್ಲಿ ಇಷ್ಟೊಂದು ಸಂಖ್ಯೆಯ ಟೊಮೇಟೊ ಹಣ್ಣುಗಳನ್ನು ಯಾರೂ ಬೆಳೆದಿಲ್ಲ ಎಂಬುದು ವಿಶೇಷ. ಹಾರ್ಟ್ಫೋರ್ಡ್ಶೈರ್‌ನ ಸ್ಟಾನ್‌ಸ್ಟೆಡ್ ಅಬೋಟ್ಸ್ ನಿವಾಸಿ, ಪ್ರಗತಿಪರ ತೋಟಗಾರ ಡೌಗ್ಲಾಸ್ ಸ್ಮಿತ್ ಈ ಸಾಧನೆ ಮಾಡಿದ್ದಾರೆ. ತಮ್ಮ ಮನೆಯ ಹಿತ್ತಲಿನಲ್ಲಿರುವ 88 ಚದರ ಅಡಿ ಜಾಗದಲ್ಲಿ ನಿರ್ಮಿಸಿರುವ ಗ್ರೀನ್ ಹೌಸ್‌ನಲ್ಲಿ ಡೌಗ್ಲಾಸ್ ಬೆಳೆಸಿರುವ ಟೊಮೇಟೊ ಗಿಡ ಈಗ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವಷ್ಟು ಟೊಮೇಟೊ ಹಣ್ಣುಗಳನ್ನು ಬೆಳೆದಿದೆ.

ಹೀಗೆ ಒಂದೇ ಕಾಂಡ ಅಥವಾ ರೆಂಬೆಯಲ್ಲಿ ಅತಿ ಹೆಚ್ಚು ಟೊಮೇಟೊ ಹಣ್ಣುಗಳನ್ನು ಬೆಳೆದ ದಾಖಲೆ ಈ ಹಿಂದೆ ಗ್ರಾಹಂ ಟ್ರಂಟರ್ ಎಂಬ ಆಂಗ್ಲ ರೈತರನ ಹೆಸರಿನಲ್ಲಿತ್ತು. 2010ರಲ್ಲಿ ತನ್ನ ತೋಟದಲ್ಲಿನ ಒಂದು ಗಿಡದ ರೆಂಬೆಯಲ್ಲಿ 488 ಟೊಮೇಟೊ ಹಣ್ಣುಗಳನ್ನು ಬೆಳೆಸುವಲ್ಲಿ ಇಂಗ್ಲೆAಡ್‌ನ ಶ್ರೋಪ್‌ಶೈರ್‌ನ ಗ್ರಾಹಂ ಟ್ರಂಟರ್ ಯಶಸ್ವಿಯಾಗಿದ್ದರು. ಆಗಿನ್ನೂ ಇಂತಹ ಅಪರೂಪದ ಸಾಧನೆಗಳನ್ನು ಅಲ್ಲಿನ ರೈತರು ಕಂಡಿರಲಿಲ್ಲ. ಟ್ರಂಟರ್‌ನ ಈ ದಾಖಲೆ ಬೆಳೆಯಿಂದ ಪ್ರಭಾವಿತರಾಗಿದ್ದ ಡೌಗ್ಲಸ್ ಸ್ಮಿತ್, ತಾನು ಕೂಡ ಅತಿ ಹೆಚ್ಚು ಟೊಮೇಟೊ ಹಣ್ಣು ಬೆಳೆಸಬೇಕೆಂದು ನಿರ್ಧರಿಸಿ ಹಿತ್ತಲಲ್ಲಿ ಗ್ರೀನ್‌ಹೌಸ್ ನಿರ್ಮಿಸಿದ್ದರು. ಮೂರು ವರ್ಷಗಳ ಪರಿಶ್ರಮದ ಮೂಲಕ ಜಗತ್ತಿನ ಕೃಷಿ ವಲಯದಲ್ಲಿ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದ್ದಾರೆ.

ವಾರದಲ್ಲಿ ನಾಲ್ಕೇ ತಾಸು ಶ್ರಮ!

ಸಾಮಾನ್ಯವಾಗಿ ರೈತರು ದಿನವೊಂದಕ್ಕೆ ಕನಿಷ್ಠ 3-4 ಗಂಟೆಗಳ ಕಾಲ ಗದ್ದೆ, ತೋಟದಲ್ಲಿ ಶ್ರಮಿಸುತ್ತಾರೆ. ಅಷ್ಟಾದರೂ ಉತ್ತಮ ಬೆಳೆ, ಇಳುವರಿ ಪಡೆಯುವುದು ಕಷ್ಟ. ಆದರೆ ವೃತ್ತಿಯಲ್ಲಿ ಐಟಿ ಉದ್ಯೋಗಿಯಾಗಿರುವ ಸ್ಮಿತ್, ವಾರದಲ್ಲಿ ಕೇವಲ 4 ತಾಸು ಸಮಯವನ್ನು ಗ್ರೀನ್‌ಹೌಸ್‌ನಲ್ಲಿ ಕಳೆದು ಈಗ ವಿಶ್ವ ದಾಖಲೆಯ ಟೊಮೇಟೊ ಬೆಳೆ ತೆಗೆದಿದ್ದಾರೆ. ಹಿತ್ತಲಲ್ಲಿ ಬೆಳೆಸಿದ ಗಿಡ 800ಕ್ಕೂ ಅಧಿಕ ಟೊಮೇಟೊ ಹಣ್ಣುಗಳನ್ನು ಬಿಟ್ಟಿರುವ ಸಂಭ್ರಮದ ಕ್ಷಣಗಳನ್ನು ಟ್ವಿಟರ್‌ನಲ್ಲಿ ಹಂಚಿಕೊAಡಿರುವ ತೋಟಗಾರ ಸ್ಮಿತ್, ತಾನು ಈ ಗಿಡ ಬೆಳೆಸಲು ವಿಶೇಷ ಕಾಳಜಿ ತೋರಿಲ್ಲ, ವಿಶಿಷ್ಠ ಗೊಬ್ಬರವನ್ನು ಸಹ ನೀಡಿಲ್ಲ ಎಂದು ಹೇಳಿದ್ದಾರೆ.

ಆದರೆ, ಗಿಡಕ್ಕೆ ಯಾವ ಸಮಯದಲ್ಲಿ ನೀರು ಕೊಡಬೇಕು ಮತ್ತು ಯಾವ ಸಮಯದಲ್ಲಿ ಕೊಡಬಾರದು ಎಂದು ವೈಜ್ಞಾನಿಕವಾಗಿ ಅರಿತಿರುವ ಸ್ಮಿತ್, ಸಮಯಕ್ಕೆ ಸರಿಯಾಗಿ ಪೋಷಕಾಂಶಗಳನ್ನು ನೀಡಿ ಅತಿ ಹೆಚ್ಚು ಟೊಮೇಟೊ ಹಣ್ಣುಗಳು ಬಿಡುವಂತೆ ಮಾಡಿದ್ದಾರೆ. ‘ರೈತರು ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಈಗ ಪಡೆಯುವುದಕ್ಕಿಂತಲೂ ದುಪ್ಪಟ್ಟು ಇಳುವರಿ ಮತ್ತು ಲಾಭ ಪಡೆಯಬಹುದು’ ಎನ್ನುವ ಡೌಗ್ಲಸ್ ಸ್ಮಿತ್, ‘ಬೆಳೆ ಜೊತೆ ರೈತರಿಗೆ ಅತ್ಯಂತ ನಿಕಟ ಒಡನಾಟವಿರುತ್ತದೆ. ಹೀಗಾಗಿ ಅದಕ್ಕೆ ಯಾವ ಸಮಯದಲ್ಲಿ ಏನು ನೀಡಬೇಕು ಎಂದು ರೈತರೇ ಅರ್ಥ ಮಾಡಿಕೊಂಡು ನೀಡಬೇಕು. ನಮ್ಮ ಮಕ್ಕಳ ಪ್ರತಿಯೊಂದು ಬೇಕು-ಬೇಡಗಳನ್ನು ನಾವೇ ಅರ್ಥ ಮಾಡಿಕೊಂಡು ಹೇಗೆ ಅಗತ್ಯವಿರುವುದನ್ನೆಲ್ಲಾ ಕೊಟ್ಟು ಬೆಳೆಸುತ್ತೇವೋ ಹಾಗೇ, ಗಿಡಗಳನ್ನು ಅಥವಾ ಬೆಳೆಯ ಅಗತ್ಯಗಳನ್ನು ಅರಿತು ಬೆಳೆಸುವುದು ಮುಖ್ಯ’ ಎಂಬುದು ಅವರ ಅಭಿಪ್ರಾಯ.

ಮನಿಮೇಕರ್ ತಳಿ

ಸ್ಮಿತ್ ಬೆಳೆಸಿರುವ ಟೊಮೇಟೊ ತಳಿ ಹೆಸರು ‘ಮನಿಮೇಕರ್’. ಹೆಸರಲ್ಲೇ ಇರುವಂತೆ ಈ ಟೊಮೇಟೊ ತಳಿ ರೈತರಿಗೆ ಕೈತುಂಬಾ ಆದಾಯಯ ತಂದುಕೊಡುತ್ತದೆ. ಮನಿಮೇಕರ್ ವೆರೈಟಿಯಲ್ಲಿ ಹಲವು ವಿಧಗಳಿದ್ದು, ಹಳದಿ ಮಿಶ್ರಿತ ಕಿತ್ತಳೆ ಬಣ್ಣದ ಟೊಮೇಟೊ ಹಣ್ಣು ಬಿಡುವ ತಳಿಯ ಬೀಜವನ್ನು ಸ್ಮಿತ್ ತಮ್ಮ ಗ್ರೀನ್‌ಹೌಸ್‌ನಲ್ಲಿ ಬಿತ್ತಿ ಬೆಳೆಸಿದ್ದರು. ಗಾತ್ರದಲ್ಲಿ ನಮ್ಮಲ್ಲಿ ಸಿಗುವ ಚರ‍್ರಿ ಟೊಮೇಟೊಗಿಂತ ಸ್ವಲ್ಪ ದೊಡ್ಡದಾಗಿರುವ ಈ ತಳಿಯ ಒಂದು ಕೆ.ಜಿ ಟೊಮೇಟೊ ಬೆಲೆ 3ರಿಂದ 4 ಪೌಂಡ್. ಅಂದರೆ ಭಾರತದಲ್ಲಿ 300 ರಿಂದ 405 ರೂಪಾಯಿ!

ದಾಖಲೆಗಳ ಒಡೆಯ

ಕಳೆದ ವರ್ಷ ವಿಶ್ವದ ಅತಿ ಎತ್ತರದ ಟೊಮೇಟೊ ಗಿಡ ಬೆಳೆಸುವ ಮೂಲಕ ಸುದ್ದಿಯಾಗಿದ್ದ ಸ್ಮಿತ್, ಬಹಳಷ್ಟು ವೈಜ್ಞಾನಿಕ ಪತ್ರಿಕೆಗಳನ್ನು ಓದಿ ಟೊಮೇಟೊ ಬೆಳೆಯುವ ಕೌಶಲ್ಯ ಹೆಚ್ಚಿಸಿಕೊಂಡಿದ್ದರAತೆ. 2020ರ ಆರಂಭದಲ್ಲಿ ಇಂಗ್ಲೆAಡ್‌ನ ಅತಿ ಎತ್ತರದ ಸೂರ್ಯಕಾಂತಿ ಗಿಡ ಬೆಳೆಸಿದ ದಾಖಲೆ ಕೂಡ ಸ್ಮಿತ್ ಹೆಸರಿಗಿದೆ. ಇದು 20 ಅಡಿ ಎತ್ತರದ ಗಿಡವಾಗಿತ್ತು. ಈ ಮೂಲಕ ವೃತ್ತಿ ಜೊತೆಗೆ ಕೃಷಿಯನ್ನು ಪ್ರೀತಿಸುವ ಮನಸುಗಳಿಗೆ ಸ್ಮಿತ್ ಮಾದರಿಯಾಗಿ ನಿಲ್ಲುತ್ತಾರೆ.