News

ಲಾಕ್‌ಡೌನ್‌ ಸಂಕಷ್ಟದಲ್ಲಿ ರೈತರ ಕೈಹಿಡಿದ ಟೊಮ್ಯಾಟೋ

01 July, 2020 10:12 AM IST By:

ಕೊರೋನಾ ಸೋಂಕು ತಡೆಯುವುದಕ್ಕಾಗಿ ಹೇರಲಾದ ಲಾಕ್‌ಡೌನ್‌ ಪರಿಣಾಮದಿಂದಾಗಿ ಸೂಕ್ತ ಮಾರುಕಟ್ಟೆ ಜೊತೆಗೆ ನ್ಯಾಯಯುತ ಬೆಲೆ ಸಿಗದೇ ಆರ್ಥಿಕವಾಗಿ ತೀವ್ರ ಕಂಗಾಲಾಗಿದ್ದ ರೈತರಿಗೆ ಈಗ  ಟೊಮ್ಯಾಟೋ ಕೈ ಹಿಡಿದಿದ್ದು, ಬರೋಬ್ಬರಿ 20 ಕೆ.ಜಿ.ಯ ಟೊಮೆಟೋ ಬಾಕ್ಸ್‌ ಈಗ ಜಿಲ್ಲೆಯಲ್ಲಿ 600-650 ಮಾರಾಟವಾಗುತ್ತಿದೆ.

ಕೊರೋನಾ ಸಂಕಷ್ಟದಿಂದ ಜಿಲ್ಲೆಯ  ರೈತರು ಯಾವುದೇ ಬೆಳೆ ಇಟ್ಟರೂ ಮಾರುಕಟ್ಟೆ ಇಲ್ಲದೇ ಕೈಗೆ ಬಂದ ಬೆಲೆಗೆ ಮಾರಾಟ ಮಾಡಿ ಸಾಕಷ್ಟು ಕೈ ಸುಟ್ಟುಕೊಂಡಿದ್ದರು. ಆದರೆ ಈಗ ಟೊಮ್ಯಾಟೋಗೆ ಎಲ್ಲಿಲ್ಲದ ಬೇಡಿಕೆ ಕಂಡು ಬಂದಿದ್ದು, ದಿನದಿಂದ ದಿನಕ್ಕೆ ಬೆಲೆ  ಹೆಚ್ಚಾಗುತ್ತಲೇ ಇದೆ.

ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಚಿಲ್ಲರೆ ಮಾರಾಟ 50-60 ರುಪಾಯಿಗೆ ಮಾರಾಟವಾಗುತ್ತಿದೆ. ಲಾಕ್ಡೌನ್ ಹೇರಿದ್ದನಂತರ ರೈತರ ತರಕಾರಿ ಬೆಳೆಗಳಿಗೆ ಸೂಕ್ತ ಬೆಲೆ ಸಿಕ್ಕಿರಲಿಲ್ಲ. ಲಾಕ್‌ಡೌನ್‌ ಆರಂಭದಲ್ಲಿ ಸೂಕ್ತ ಬೆಲೆ ಸಿಗದೆ ರೈತರು  ತಮ್ಮ ಬೆಳೆಗಳನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ವಿಶೇಷವಾಗಿ ಟೊಮ್ಯೋಟಾ ಸಹ ಅತ್ಯಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ದಿಢೀರನೆ ಹೆಚ್ಚಾಗಿದ್ದರಿಂದ  ರೈತರಿಗೆ ನೆಮ್ಮದಿ ತಂದಿದೆ.

ಟೊಮ್ಯಾಟೋ ಚಿನ್ನದ ಬೆಲೆ: ವಾಣಿಜ್ಯ ಬೆಳೆಯಾಗಿ ಬೆಳೆಯುವ ಟೊಮೆಟೋಗೆ ಈಗ ಎಲ್ಲಿಲ್ಲದ ಬೇಡಿಕೆ ಕಂಡು ಬಂದಿದೆ. ಮೊದಲು 20 ಕೆಜಿಯ ಟೊಮ್ಯಾಟೋ ಬಾಕ್ಸ್  250, 300, 450  ರೂಪಾಯಿಗೆ ಮಾರಾಟವಾಗುತ್ತಿತ್ತು. ಈಗ 20 ಕೆ.ಜಿ. ಟೊಮೆಟೋ ಬಾಕ್ಸ್‌ 600-650 ಗಡಿ ದಾಟಿದ್ದು, ಟೊಮೆಟೋ ಬೆಳೆಗಾರರಿಗೆ ಶುಕ್ರದೆಸೆ ಆರಂಭವಾಗಿದೆ.

ಸಾಮಾನ್ಯವಾಗಿ ಜಿಲ್ಲೆಯಲ್ಲಿ ಜೂನ್‌, ಜುಲೈನ ಮಳೆಗಾಲದಲ್ಲಿ ಟೊಮೆಟೋ ಬೆಳೆಯುವುದು ವಾಡಿಕೆ. ಆದರೆ ಮಾರುಕಟ್ಟೆಯಲ್ಲಿ ನಿರೀಕ್ಷೆಗೂ ಮೀರಿ ಬೆಲೆ ಸಿಗುತ್ತಿದ್ದು, ಕೊರೋನಾ ಸೋಂಕು ಕಷ್ಟಕಾಲದಲ್ಲಿ ಟೊಮೆಟೋ  ರೈತನ ಕೈಹಿಡಿದಿದೆ.

ಟೊಮ್ಯಾಟೋ ಬೆಲೆ ಹೆಚ್ಚಳದಿಂದಾಗಿ ಹೋಟೆಲ್‌ ಮಾಲೀಕರಿಗೆ ಹಾಗೂ ನಿತ್ಯ ಬಳಸುವ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.  ಚಿಲ್ಲರೆಯಾಗಿ ಕೆ.ಜಿ.ಟೊಮೆಟೋ ಜಿಲ್ಲೆಯಲ್ಲಿ 50, 60 ರೂ. ಗೆ ಮಾರಾಟ ಮಾಡಲಾಗುತ್ತಿದ್ದು, ಬೆಲೆ ಏರಿಕೆ ಪರಿಣಾಮ ಗ್ರಾಹಕರು ಖರೀದಿಗೆ ಹಿಂದೆ ಮುಂದೆ ನೋಡುವಂತಾಗಿದೆ.

---------------

ಲಾಕ್‌ಡೌನ್‌ ಸಂಕಷ್ಟದ ಇಂತಹ ಸಂದರ್ಭದಲ್ಲಿ ಸದ್ಯ 20ಕೆಜಿ. ಟೊಮೆಟೋ ಬಾಕ್ಸ್‌ ಮಾರುಕಟ್ಟೆಯಲ್ಲಿ 600 ರಿಂದ 650 ರೂ.ವರೆಗೂ ಮಾರಾಟವಾಗುತ್ತಿದೆ. ಇದೇ ರೀತಿ ರೈತರು ಬೆಳೆದ ಬೆಳೆಗಳಿಗೆ ಬೆಲೆ ಸಿಕ್ಕರೆ ರೈತರು ನೆಮ್ಮದಿಯ ಜೀವನ ನಡೆಸಬಹುದು. ಆದರೆ ಕೆಲವು ಸಲ ಮಾರುಕಟ್ಟೆಯಲ್ಲಿ ದಿಢೀರನೆ ಬೆಲೆ ಕುಸಿದರೆ ರೈತರಿಗೆ ತುಂಬಾ ಹಾನಿಯಾಗುತ್ತದೆ.

ಬಿ.ವಿ. ರಾಜೇಗೌಡ ಬಿದರಕಟ್ಟೆ

ಮಂಡ್ಯ ರೈತ

----