ಸರ್ಕಾರಿ ಸೌಲಭ್ಯ ಪಡೆಯಲು ರೈತರು ಇನ್ನೂ ಮುಂದೆ ಪ್ರತಿ ಬಾರಿ ಜಮೀನಿನ ಪಹಣಿ, ಆಧಾರ್, ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸುವ ಅಗತ್ಯವಿಲ್ಲ, ಪ್ರತಿಯೊಬ್ಬ ರೈತರು ಮಂಗಾರು, ಹಿಂಗಾರು ಹಂಗಾಮಿನ ಸಹಾಯಧನದಲ್ಲಿ ಕೃಷಿ ಸೌಲಭ್ಯ ಪಡೆಯಲು ಫ್ರೂಟ್ಸ್ (ಫಾರ್ಮರ್ ರಿಜಿಸ್ಟ್ರೇಷನ್ ಆಯಂಡ್ ಯೂನಿಫೈಡ್ ಬೆನಿಫಿಷಿಯರಿ ಇನ್ಫಾರ್ಮೇಷನ್ ಸಿಸ್ಟಂ ತಂತ್ರಾಂಶದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು.
ಫ್ರೂಟ್ಸ್ - ಪಿಎಂ ಕಿಸಾನ್' ಯೋಜನೆ ನೋಂದಣಿಯನ್ನು ಈಗ ಸಾಮಾನ್ಯ ಸೇವಾ ಕೇಂದ್ರಗಳಿಗೂ ವಿಸ್ತರಿಸಲಾಗಿದೆ, ಜತೆಗೆ ರೈತರು ಸ್ಮಾರ್ಟ್‌ಫೋನ್‌ಗಳಲ್ಲಿ ಸ್ವಯಂ ನೋಂದಣಿಗೂ ಅವಕಾಶ ಕಲ್ಪಿಸಿದೆ. ಸರಕಾರಿ ಕಚೇರಿಗಳಿಗೆ ರೈತರ ಅಲೆದಾಟಕ್ಕೆ ಬ್ರೇಕ್ ಹಾಕಿದಂತಾಗಿದೆ.
ರಿಯಾಯಿತಿ ದರದಲ್ಲಿ ಸೌಲಭ್ಯ:
ಫ್ರೂಟ್ಸ್ ತಂತ್ರಾಂಶದ ಮೂಲಕ ಬಿತ್ತನೆ ಬೀಜ, ಕೀಟನಾಶಕ, ಸಾವಯವ ಗೊಬ್ಬರ, ಕೃಷಿ ಉಪಕರಣಗಳ, ಸಸ್ಯ ಸಂರಕ್ಷಣಾ ಉಪಕರಣಗಳನ್ನು ಸಹಾಯಧನದಲ್ಲಿ ಪಡೆಯಬಹುದು.ಈ ತಂತ್ರಾಂಶದಲ್ಲಿ ನೋಂದಾಯಿಕೊಳ್ಳದ ರೈತರಿಗೆ, ಇಲಾಖೆಯಿಂದ ಯಾವುದೇ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ನೀಡಲು ಅವಕಾಶವಿರುವುದಿಲ್ಲ.
ಯೂನಿಕ್ ನಂಬರ್ ಕಾರ್ಡ್:
ತಂತ್ರಾಂಶದಲ್ಲಿ ಹೆಸರು ನೋಂದಣಿಯಾದ ನಂತರ ರೈತರಿಗೆ, ಯೂನಿಕ್ ನಂಬರ್ ಇರುವ ಕಾರ್ಡ್ ನೀಡಲಾಗುತ್ತದೆ. ರೈತರ ಎಲ್ಲಾ ಮಾಹಿತಿ ಆನ್ ಲೈನ್ ನಲ್ಲಿ ನೋಂದಣಿಯಾಗಿರುತ್ತದೆ. ಯೂನಿಕ್ ನಂಬರ್ ಇದ್ದಲ್ಲಿ ಎಲ್ಲಾ ವಿವರ ಅಲ್ಲಿಯೇ ಸಿಗುತ್ತದೆ. ಇಲಾಖೆಯಿಂದ ನೀಡಿರುವ ಎಲ್ಲಾ ಸೌಲಭ್ಯಗಳ ಮಾಹಿತಿ ಇಲ್ಲಿ ಲಭ್ಯವಿದೆ. ಇದರಿಂದ ಸೌಲಭ್ಯಗಳ ದುರುಪಯೋಗ ತಪ್ಪಲಿದೆ.
ರೈತರಿಗೆ ಹಲು ಸೌಲಭ್ಯಗಳು:
ಫ್ರೂಟ್ಸ್ ತಂತ್ರಾಂಶದ ಮೂಲಕ ನೀಡಲಾದ ರೈತರ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಎಲ್ಲಾ ಆರ್ಥಿಕ ಸಂಸ್ಥೆಗಳಲ್ಲಿ ಸಾಲ ವಿತರಣೆ ವೇಳೆ ಬಳಸಬಹುದು. ಬ್ಯಾಂಕುಗಳು ಈ ವ್ಯವಸ್ಥೆಯನ್ನು ಬಳಸಿ ವಿಶಿಷ್ಟ ಗುರುತಿನ ಮೂಲಕ ರೈತರ ವಿವರಗಳನ್ನು ಪಡೆಯಬಹುದು. ಆರ್ಥಿಕ ಸಂಸ್ಥೆಗಳು ಸಾಲ ವಿತರಣೆ ಸಂಬಂಧಿತ ವಿವರಗಳನ್ನು ಫ್ರೂಟ್ಸ್ ದತ್ತಾಂಶಕ್ಕೆ ನೀಲಾಗುತ್ತದೆ.
ಹೆಸರು ನೋಂದಾಯಿಸಿಕೊಳ್ಳಿ:
ಇನ್ನೂ ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳದ ರೈತರು ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಝಿರಾಕ್ಸ್, ಪ್ರತಿ ಪಾಸ್ಪೋರ್ಟ್ ಅಳತೆಯ ಫೋಟೋ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಝಿರಾಕ್ಸ್ ಪ್ರತಿ ಸೇರಿದಂತೆ ಸೂಕ್ತ ದಾಖಲಾತಿ ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಇಲ್ಲವೇ ರೈತರು ತಾವೇ ಸ್ವಯಂ ನೋಂದಣಿ ಮಾಡಬಹುದು.
ಸ್ವಯಂ ನೋಂದಣಿ ಮಾಡುವ ರೈತರು https://fruits.karnataka.gov.in/OnlineUserRegistration.aspx ರೈತರ ಹೆಸರು, ಆಧಾರ್ ವಿವರ ದಾಖಲಿಸಿ ನಂತರ ಓಟಿಪಿ ಬರುತ್ತದೆ, ಮುಂದುವರಿದು ಇತರೆ ವಿವರ ದಾಖಲಿಸಬಹುದು.
ಫ್ರೂಟ್ಸ್ ನೋಂದಣಿಗೆ ದಾಖಲೆ ಏಕೆ ಬೇಕು?
ರೈತರು ಸಾಮಾನ್ಯ ಸೇವಾ ಕೇಂದ್ರಗಳಿಗೆ ನೋಂದಣಿಗೆ ಹೋದಾಗಲೂ ರೈತರಿಗೆ ಸಂಬಂಧಿಸಿದ ಎಲ್ಲ ದಾಖಲೆ ಇದ್ದರೆ ಸೂಕ್ತ ಎಂಬುದು ಅಧಿಕಾರಿಗಳ ಅಭಿಪ್ರಾಯ. ಆಧಾರ್, ಬ್ಯಾಂಕ್ ಖಾತೆ, ಐಎಫ್‌ಎಸ್‌ಸಿ ಕೋಡ್, ಪಹಣಿ ಸಂಖ್ಯೆ ಎಲ್ಲ ಮಾಹಿತಿಯನ್ನು ಕರಾರುವಕ್ಕಾಗಿ ನೋಡಿ, ದಾಖಲಿಸಲು ಅನುಕೂಲ ಆಗಲಿದೆ. ಮಾಹಿತಿ ದಾಖಲಿಸುವಾಗ ಲೋಪಗಳಾದಲ್ಲಿ ಪಿಎಂ - ಕಿಸಾನ್ ಸಹಾಯಧನ ಸಸ್ಪೆನ್ಸ್ ಅಕೌಂಟ್‌ಗೆ ಬೀಳುವ ಸಾಧ್ಯತೆ ಇರುತ್ತದೆ.