News

ಸರ್ಕಾರಿ ನೌಕರರಿಗೆ 50 ಲಕ್ಷ ರೂಪಾಯಿಯವರೆಗೆ ಉಚಿತ ಚಿಕಿತ್ಸೆ

02 December, 2020 6:40 AM IST By:

ರಾಜ್ಯದಲ್ಲಿ ಸರ್ಕಾರಿ ನೌಕರರು ಹಾಗೂ ಕುಟುಂಬಸ್ಥರಿಗೆ 50 ಲಕ್ಷ ರೂಪಾಯಿಯವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲು ಆರೋಗ್ಯಸಿರಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಮಹಿಳಾ ನೌಕರರ ತಂದೆ ತಾಯಿಗೂ ಈ ಯೋಜನೆಯ ಲಾಭ ಸಿಗಲಿದೆ ಎಂದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

ಅವರು ಕಲಬುರಗಿಯಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಕುರಿತ ವಿಚಾರ ಸಂಕೀರಣ ಮತ್ತು ಸರ್ಕಾರಿ ನೌಕರರು, ಶಿಕ್ಷಕರೊಂದಿಗೆ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ  50 ಲಕ್ಷದವರೆಗೆ ಉಚಿತ ಚಿಕಿತ್ಸೆ ಕೊಡಿಸುವ ಉದ್ದೇಶವನ್ನು ಸರ್ಕಾರಿ ನೌಕರರ ಸಂಘ ಹೊಂದಿದ್ದು, ಯೋಜನೆಗೆ ತಗಲುವ ವೆಚ್ಚ ಭರಿಸಲು ಹಣಕಾಸು ಇಲಾಖೆ ಒಪ್ಪಿದೆ. ಅಗತ್ಯಬಿದ್ದರೆ ಸಂಘದಿಂದಲೂ ವಂತಿಗೆ ನೀಡಲಾಗುವುದು. 2021ರ ಏಪ್ರಿಲ್‌ನಿಂದ ಈ ಯೋಜನೆ ಜಾರಿಯಾಗಲಿದೆ  ಎಂದರು.

‘ಹೊರರೋಗಿ (ಒಪಿಡಿ) ಹಾಗೂ ಒಳರೋಗಿಗಳಾಗಿ ದಾಖಲಾಗುವವರಿಗೂ ಉಚಿತ ಚಿಕಿತ್ಸೆ ಸಿಗಲಿದೆ. ನೌಕರರಷ್ಟೇ ಅಲ್ಲದೆ ಅವರ ಕುಟುಂಬದ ಸದಸ್ಯರು ಸೇರಿದಂತೆ ಒಟ್ಟಾರೆ 20 ಲಕ್ಷ ಜನರಿಗೆ ವೈದ್ಯಕೀಯ ಸೌಲಭ್ಯ ದೊರೆಯಲಿದೆ. ಇದಕ್ಕಾಗಿ ವಾರ್ಷಿಕವಾಗಿ  1,200 ಕೋಟಿ ಖರ್ಚಾಗಬಹುದು. ರಾಜ್ಯ ಸರ್ಕಾರ  800 ಕೋಟಿ ಭರಿಸಿದರೆ, ನೌಕರರು 400 ಕೋಟಿ ಭರಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಪ್ರತಿತಿಂಗಳು ಒಂದು ಸಾವಿರ ವೆಚ್ಚದ ಜನರಿಕ್ ಔಷಧಿ ವಿತರಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.