ಬಿದಿರು ಒಂದು ಬಹುಪಯೋಗಿ ಸಸ್ಯ ಗುಂಪಿಗೆ ಸೇರಿದ್ದು, ರೈತರಿಗೆ ಉತ್ತಮ ಆದಾಯದ ಮೂಲವಾಗಿದೆ. ಆದ್ದರಿಂದ ರಾಷ್ಟ್ರೀಯ ಬ್ಯಾಂಬೂ ಮಿಷನ್ ಯೋಜನೆಯಡಿ ಬಿದಿರನ್ನು ಕೃಷಿ ಅರಣ್ಯದಲ್ಲಿ ಬೆಳೆಸಲು ಕಾರ್ಯಕ್ರಮ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಅರಣ್ಯ ವಿಭಾಗದಿಂದ ಬಿದಿರು ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಸಸಿ ಬೇಕಿರುವ ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕಿದೆ.
ಬಿದಿರು ಪರಿಸರ, ಆರ್ಥಿಕ ಮತ್ತು ಜೀವನ ಭದ್ರತೆ ಒದಗಿಸಲು ಸಕ್ಷಮವಾಗಿರುವ ಬೆಳೆಯಾಗಿದೆ. ಬಿದಿರಿನ ಉತ್ಪನ್ನಗಳನ್ನು ಕಟ್ಟಡ ಕಟ್ಟಲು, ಪೀಠೋಪಕರಣಗಳಿಗೆ, ಕೈಗಾರಿಕೆಗಳಿಗೆ ಉಪಯೋಗಿಸಲಾಗುತ್ತಿದೆ. ಅಲ್ಲದೇ ಪೇಪರ್ ತಯಾರಿಕೆ, ಟೆಕ್ಸ್ ಟೈಲ್ಸ್ ಉದ್ಯಮ, ಆಹಾರೋದ್ಯಮ ಮತ್ತು ಇಂಧನ ತಯಾರಿಕೆಗೂ ಬಳಸಲಾಗುತ್ತಿದೆ. ಭಾರತದ ಬಿದಿರು ಉದ್ಯಮದ ಮೌಲ್ಯ ವಾರ್ಷಿಕವಾಗಿ 28,005 ಕೋಟಿ ರೂಪಾಯಿ ಆಗಿದೆ. ಆದರೆ ಬಿದಿರಿನ ಉತ್ಪಾದನೆ ಅಷ್ಟಾಗಿ ಆಗುತ್ತಿಲ್ಲ. ಇದರಿಂದ ಭಾರತವು ಸುಮಾರು 213.65 ಕೋಟಿ ರೂಪಾಯಿ ಮೌಲ್ಯದ ಬಿದಿರಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತವು ಬಿದಿರಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವ ಪ್ರಮುಖ ರಾಷ್ಟçವಾಗಿದ್ದು, ಬಿದಿರಿನ ಉದ್ಯಮವನ್ನು ಬೆಳೆಸಲು ಭಾರತದಲ್ಲಿ ವಿಫುಲ ಅವಕಾಶವಿದೆ.
ರೈತರಿಗೆ ಆರ್ಥಿಕ ಲಾಭ
ಆದ್ದರಿಂದ ಬಿದಿರಿನ ಕ್ಷೇತ್ರವನ್ನು ಹೆಚ್ಚಿಸುವುದು ಇಂದಿನ ಅವಶ್ಯಕತೆ ಆಗಿದೆ. ಕೃಷಿ ಅರಣ್ಯದಲ್ಲಿ ಬಿದಿರನ್ನು ಬೆಳೆಸುವುದರಿಂದ ರೈತರಿಗೆ ಆರ್ಥಿಕ ಲಾಭವಾಗುವುದರ ಜೊತೆಗೆ, ಆದಾಯವನ್ನು ದ್ವಿಗುಣಗೊಳಿಸಿ ಕೊಳ್ಳಬಹುದಾಗಿದೆ. ಬಿದಿರನ್ನು ಆಧರಿಸಿ ಸಣ್ಣ ಕೈಗಾರಿಕೆಗಳನ್ನು ಆರಂಭಿಸಿದಾಗ ಕುಶಲಕರ್ಮಿಗಳಿಗೆ ನಿರಂತರ ಉದ್ಯೋಗ ಸೃಷ್ಟಿಯಾಗಿ ಅವರಿಗೆ ಜೀವನ ಭದ್ರತೆ ಸಿಗಲಿದೆ. ಆದ್ದರಿಂದ ಉತ್ತಮ ಗುಣಮಟ್ಟದ ಸಸಿಗಳನ್ನು ಬೆಳೆಸಿ ರೈತರಿಗೆ ಪೂರೈಸಿದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬಿದಿರು ಬೆಳೆಸಿ ಆದಾಯ ಹೆಚ್ಚಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಬಿದಿರು ಮಿಷನ್ ಯೋಜನೆಯಡಿ ಕೃಷಿ ಅರಣ್ಯದಲ್ಲಿ ಬಿದಿರನ್ನು ಬೆಳೆಸಲು ಕಾರ್ಯಕ್ರಮ ಜಾರಿಗೆ ತರಲಾಗಿದೆ.
ಕರ್ನಾಟಕ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗವು ಶಿವಮೊಗ್ಗ ವಲಯದ ವ್ಯಾಪ್ತಿಯಲ್ಲಿನ ಶಿವಮೊಗ್ಗ, ಸಾಗರ, ಶಿಕಾರಿಪುರ ಮತ್ತು ಸೊರಬ ಸಸ್ಯ ಕ್ಷೇತ್ರಗಳಲ್ಲಿ ಬಬೆಳೆಸಲು ಆಸಕ್ತಿ ಹೊಂದಿರುವ ರೈತರಿಗೆ ಬ್ಯಾಂಬುಸ ಬಾಲ್ಕೂ-ಭೀಮಾ ಬಿದಿರು, ಬ್ಯಾಂಬೂಸಾ ನೂತನ್ಸ್ ಮತ್ತು ಬ್ಯಾಂಬೂಸ ಟುಡ್ಲಾ (Bambusa Balcooa, Bambusa nutans, Bambusa tulda) ಜಾತಿಯ, ಮುಳ್ಳುರಹಿತ ಹಾಗೂ ಅಂಗಾAಶ ಕೃಷಿ ಪದ್ಧತಿಯಲ್ಲಿ ಬೆಳೆಸಿರುವ ಬಿದಿರು ಸಸಿಗಳನ್ನು ವಿತರಿಸುತ್ತಿದೆ. 2021ನೇ ಸಾಲಿನ ಮಳೆಗಾಲದಲ್ಲಿ ಕೃಷಿ ಜಮೀನಿನಲ್ಲಿ ನಾಟಿ ಮಾಡಲು ಈ ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಆಸಕ್ತ ರೈತರು ತಮ್ಮ ಹೆಸರು, ಜಮೀನಿನ ಸರ್ವೇ ನಂಬರ್, ಆರ್‌ಟಿಸಿ, ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‌ಎಸ್ ಕೋಡ್, ಬೇಕಾಗುವ ಸಸಿಗಳ ಸಂಖ್ಯೆಯೊAದಿಗೆ ಈ ಕೆಳಗೆ ನೀಡಲಾಗಿರುವ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಸಂದೇಶ ರವಾನಿಸಬಹುದು. ಇಲ್ಲವೇ ರೈತರೇ ಖುದ್ದಾಗಿ ಆಯಾ ವಲಯ, ಸಸ್ಯ ಕ್ಷೇತ್ರಗಳ ಕಚೇರಿಗೆ ನೇರವಾಗಿ ಭೇಟಿ ನೀಡಿಯೂ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದಿನ ವರ್ಷಗಳಲ್ಲಿ ರೈತರ ಜಮೀನಿನಲ್ಲಿ ಬದುಕುಳಿದ ಸಸಿಗಳಿಗೆ ರಾಷ್ಟ್ರೀಯ ಬಿದಿರು ಮಿಷನ್ ಯೋಜನೆಯಡಿ ಪ್ರತಿ ಸಸಿಗೆ 60 ರೂ., ಕೆಎಪಿವೈ ಯೋಜನೆಯಡಿ ಪ್ರತಿ ಸಸಿಗೆ 125 ರೂ. (ಮೂರು ವರ್ಷಗಳಲ್ಲಿ), ಮಹಾತ್ಮ ಗಾಂಧಿ ನರೆಗಾ (ಎಂಜಿಎಎನ್‌ಆರ್‌ಇಜಿಎ) ಯೋಜನೆಯಡಿ ನೆಡುತೋಪು ನಿರ್ಮಾಣದ ಪೂರ್ಣ ಹಣ, ಎಸ್‌ಎಂಎಎಫ್ ಯೋಜನೆಯಡಿ ಪ್ರತಿ ಸಿಗೆ 35 ರೂ. (ಮೂರು ವರ್ಷಗಳಲ್ಲಿ) ರಂತೆ ಯಾವುದಾದರೂ ಒಂದು ಯೋಜನೆಯಡಿ ಫಲಾನುಭವಿಗಳ ಖಾತೆಗೆ ನೇರವಾಗಿ ಪ್ರೋತ್ಸಾಹಧನ ಜಮಾ ಮಾಡಲಾಗುವುದು.
ಮೊದಲು ನೋಂದಣಿ ಮಾಡಿಕೊಂಡವರಿಗೆ ಆದ್ಯತೆ ಆಧಾರದಲ್ಲಿ ಬಿದಿರು ಸಸಿಗಳನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಮಾಜಿಕ ಅರಣ್ಯ ವಿಭಾಗ ಶಿವಮೊಗ್ಗ ಮೊ.ಸಂ: 87221 89622, 08182-223900. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಸಾಮಾಜಿಕ ಅರಣ್ಯ ಉಪ-ವಿಭಾಗ, ಶಿವಮೊಗ್ಗ ಹಾಗೂ ಸಾಗರ 94491 54665, 08183-228986. ವಲಯ ಅರಣ್ಯಾಧಿಕಾರಿಗಳು ಶಿವಮೊಗ್ಗ 94487 61481, 08182-251053. ವಲಯ ಅರಣ್ಯಾಧಿಕಾರಿಗಳು ಸಾಗರ 94827 00799, 08183-228986. ವಲಯ ಅರಣ್ಯಾಧಿಕಾರಿಗಳು ಶಿಕಾರಿಪುರ 93800 24101, 08187-222809. ವಲಯ ಅರಣ್ಯಾಧಿಕಾರಿಗಳು ಸೊರಬ 93806 71178, 08184-272101 ಇವರನ್ನು ಸಂಪರ್ಕಿಸಬಹುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
80 ವರ್ಷಗಳವರೆಗೂ ಆದಾಯ!
ಒಂದು ಎಕರೆ ಕೃಷಿ ಭೂಮಿಯಲ್ಲಿ 900 ರಿಂದ 1000 ಬಿದಿರಿನ ಗಿಡಗಳು ಕೂರುತ್ತವೆ. 3 ವರ್ಷಗಳ ನಂತರ ಬಿದಿರು ಕಟಾವಿಗೆ ಸಿದ್ಧವಾಗಿ, ಆದಾಯ ಬರಲು ಆರಂಭವಾಗಲಿದ್ದು, ಒಂದು ಸಾವಿರ ಬಿದಿರಿನ ಗಿಡಗಳಿಂದ ಸರಾಸರಿ 40 ಟನ್ ಬಿದಿರು ತೆಗೆಯಬಹುದು. ಪ್ರಸ್ತುತ ಮಾರುಕಟ್ಟೆ ದರದಂತೆ ಒಂದು ಟನ್ ಬಿದಿರಿಗೆ 5000 ರೂ. ಬೆಲೆ ಸಿಗಲಿದ್ದು, ಮೊದಲ ವರ್ಷ 1.50 ಲಕ್ಷದಿಂದ 2 ಲಕ್ಷ ರೂ.ವರೆಗೆ ಆದಾಯ ಗಳಿಸಬಹುದು. ಮೂರನೇ ವರ್ಷ ಆರಂಭವಾಗುವ ಈ ಆದಾಯ ಸುಮಾರು 80-90 ವರ್ಷಗಳವರೆಗೆ ನಿರಂತರವಾಗಿ ಮುಂದುವರಿಯುತ್ತದೆ.