News

ಫೆ. 22ರಿಂದ ಕಾಶ್ಮೀರಿಗಳ ಮೇಲೆ ಹೊಸ ದಾಳಿ ನಡೆದಿಲ್ಲ: ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ ಸರಕಾರ

27 February, 2019 7:00 PM IST By:
ಹೊಸದಿಲ್ಲಿ, ಫೆ. 27: ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಪೆಬ್ರವರಿ 22ರಿಂದ ಕಾಶ್ಮೀರಿಗಳ ಮೇಲಿನ ಹಲ್ಲೆಯ ಹೊಸ ಪ್ರಕರಣ ವರದಿಯಾಗಿಲ್ಲ ಎಂಬ ಕೇಂದ್ರ ಸರಕಾರದ ಪ್ರತಿಪಾದನೆಯನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

ಕೇಂದ್ರ ಸರಕಾರದ ಉನ್ನತ ಕಾನೂನು ಅಧಿಕಾರಿ ಅಟಾರ್ನಿ ಜನರಲ್ ಅವರ ಪ್ರತಿಪಾದನೆಯ ಹಿನ್ನೆಲೆಯಲ್ಲಿ ಈ ಹಂತದಲ್ಲಿ ಯಾವುದೇ ಆದೇಶದ ಅಗತ್ಯತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪುಲ್ವಾಮದಲ್ಲಿ ಫೆಬ್ರವರಿ 14ರಂದು ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಕಾಶ್ಮೀರಿಗಳನ್ನು ಗುರಿಯಾಗಿರಿಸಿ ದಾಳಿ ನಡೆಯುತ್ತಿದ್ದ ವರದಿ ನಡುವೆ, ಕಾಶ್ಮೀರಿಗಳು ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಭದ್ರತೆ ನೀಡುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಕಳೆದ ಶುಕ್ರವಾರ ನಿರ್ದೇಶನ ನೀಡಿತ್ತು.

ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾದ ಆತ್ಮಾಹುತಿ ದಾಳಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಇದ್ದ ಕಾಶ್ಮೀರಿಗಳು ಹಲ್ಲೆಗೆ ಒಳಗಾಗಿದ್ದರು. ಸಂಘಪರಿವಾರದ ಸಂಘಟನೆಗಳ ಸದಸ್ಯರು ಕೆಲವು ಕಾಶ್ಮೀರಿಗಳ ಮೇಲೆ ಹಲ್ಲೆ ಹಾಗೂ ಇನ್ನು ಕೆಲವರನ್ನು ಮನೆಯಿಂದ ತೆರವುಗೊಳಿಸುವಂತೆ ಮಾಲಕರಿಗೆ ಬಲವಂತ ಮಾಡಿದ ಬಳಿಕ ನೂರಾರು ಕಾಶ್ಮೀರಿಗಳು ಡೆಹ್ರಾಡೂನ್ ಹಾಗೂ ಅಂಬಾಲದಿಂದ ಪಲಾಯನಗೈದಿದ್ದರು.