ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮುಂದಿನ
ಮೂರರಿಂದ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 12 ಮತ್ತು ಜೂನ್ 13ಕ್ಕೆ ದಕ್ಷಿಣ ಒಳನಾಡಿನ ವಿವಿಧೆಡೆ ಹಾಗೂ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ,
ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹಾಗೂ
ಉತ್ತರ ಒಳನಾಡಿನ ವಿವಿಧ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇನ್ನು ಕಳೆದ 24 ಗಂಟೆಯ ಅವಧಿಯಲ್ಲಿ ಕರಾವಳಿಯ ಬಹುತೇಕ ಕಡೆಗಳಲ್ಲಿ; ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ
ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿರುವುದು ವರದಿ ಆಗಿದೆ.
ರಾಯಚೂರಿನ ಗಬ್ಬೂರಿನಲ್ಲಿ ಬರೋಬ್ಬರಿ 7 ಸೆಂ.ಮೀ ಮಳೆಯಾಗಿದೆ.
ಇನ್ನು ರಾಜ್ಯದಲ್ಲಿ ಅತೀ ಗರಿಷ್ಠ ಉಷ್ಣಾಂಶವು ಕಲಬುರಗಿಯಲ್ಲಿ 39.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಇನ್ನು ಮುಂದಿನ 24 ಗಂಟೆಯ ಅವಧಿಯಲ್ಲಿ ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಕೆಲವು ಕಡೆಗಳಲ್ಲಿ
ಮಿಂಚು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ಭಾರೀ ಮಳೆ ಮುನ್ನೆಚ್ಚರಿಕೆ: ಇನ್ನು ಮುಂದಿನ 24 ಗಂಟೆಯ ಅವಧಿಯಲ್ಲಿ ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಗುಡುಗು ಮುನ್ನೆಚ್ಚರಿಕೆ: ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚು ಸಾಧ್ಯತೆ ಇದ್ದು, ಗಾಳಿಯ ವೇಗವು ಗಂಟೆಗೆ 40-50 ಕಿ.ಮೀ ತಲುಪುವ ಸಾಧ್ಯತೆ ಇದೆ.
ಗರಿಷ್ಠ ಉಷ್ಣಾಂಶ ಮುನ್ಸೂಚನೆ: ಗರಿಷ್ಠ ಉಷ್ಣಾಂಶವು ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ
2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಮೀನುಗಾರರಿಗೆ ಎಚ್ಚರಿಕೆ: ಮುಂದಿನ 24 ಗಂಟೆಯ ಅವಧಿಯಲ್ಲಿ ಕರ್ನಾಟಕದ ಕರಾವಳಿಯಲ್ಲಿ ಬಿರುಗಾಳಿಯ ವೇಗವು
ಗಂಟೆಗೆ 40-45 ಕಿ.ಮೀನಿಂದ 55 ಕಿ.ಮೀ ವೇಗದಲ್ಲಿ ಬೀಸುವ ವಾತಾವರಣವಿರುತ್ತದೆ. ಹೀಗಾಗಿ, ಈ ಸಂದರ್ಭದಲ್ಲಿ
ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.
ಉಳಿದಂತೆ ರಾಜ್ಯದಲ್ಲಿ ಯಾವುದೇ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ.
ಇನ್ನು ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಮಿಂಚುಗುಡುಗು ಸಹಿತ
ಮಳೆಯಾಗುವ ಬಹಳಷ್ಟು ಸಾಧ್ಯತೆಗಳಿವೆ. ಅಲ್ಲದೇ ಕೆಲವೊಮ್ಮೆ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆ ಇದೆ.
ಗರಿಷ್ಠ ಉಷ್ಣಾಂಶವು 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ
ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ಚಿತ್ರಕೃಪೆ: pexels